Advertisement

ತಲ್ಲೂರು ಹೆದ್ದಾರಿ ಕಾಮಗಾರಿ: ಅವ್ಯವಸ್ಥೆಯ ಆಗರ

01:00 AM Feb 28, 2019 | Harsha Rao |

  ವಿಶೇಷ ವರದಿ

Advertisement

ಕುಂದಾಪುರ: ಕಾರವಾರ- ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ನಡೆಯುತ್ತಿದ್ದು, ತಲ್ಲೂರು ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ಜನರಿಗೆ ಗೊಂದಲ ಮೂಡಿಸುವಂತಿದೆ. ಹಟ್ಟಿಯಂಗಡಿ, ನೇರಳಕಟ್ಟೆ, ಕೊಲ್ಲೂರು ಕಡೆಗೆ ಸಂಚರಿಸುವ ವಾಹನ ಸವಾರರು ಹೇಗೆ ಸಂಚರಿಸಬೇಕು ಎನ್ನುವುದೇ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ. 

ಕುಂದಾಪುರದಿಂದ ಕಾರವಾರವರೆಗಿನ ಹೆದ್ದಾರಿ ಕಾಮಗಾರಿಯ ಗುತ್ತಿಗೆ ಯನ್ನು ಐಆರ್‌ಬಿಯವರು ವಹಿಸಿ ಕೊಂಡಿವೆೆ. ಈಗಾಗಲೇ ಹೆಚ್ಚಿನ ಕಡೆಗಳಲ್ಲಿ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಆದರೆ ತಲ್ಲೂರು ಭಾಗದಲ್ಲಿನ ಕಾಮಗಾರಿ ಮಾತ್ರ ಅವಾಂತರ ಸೃಷ್ಟಿಸುವ ಸ್ಥಿತಿಯಲ್ಲಿದೆ. 

ಅಪಘಾತಕ್ಕೆ ಆಹ್ವಾನ
ಕುಂದಾಪುರದಿಂದ ಬೈಂದೂರು ಕಡೆಗೆ ಹೋಗುವ ಎಡಗಡೆಯ ರಸ್ತೆ ತುಂಬ ತಗ್ಗಿನಲ್ಲಿದ್ದರೆ ಬಲಗಡೆಯ ರಸ್ತೆ ತುಂಬ ಎತ್ತರದಲ್ಲಿದೆ. ಮಧ್ಯದಲ್ಲಿ ಸ್ವಲ್ಪ ಜಾಗವನ್ನೂ ಬಿಟ್ಟಿಲ್ಲ. ಇಲ್ಲಿ ದ್ವಿಚಕ್ರ ವಾಹನವೇನಾದರೂ ಸ್ಕಿಡ್‌ ಆಗಿ ಬಿದ್ದರೆ, ಕೆಳಗಿನ ರಸ್ತೆಗೆ ಬಂದು ಬೀಳುತ್ತದೆ. ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಅದರಲ್ಲೂ ರಾತ್ರಿ ವೇಳೆ ಸಂಚರಿಸುವ ವಾಹನಗಳು ಫೋಕಸ್‌ ಲೈಟ್‌ ಹಾಕಿ ಬರುವುದರಿಂದ ಇತರ ವಾಹನಗಳಿಗೆ ರಸ್ತೆ ಸರಿಯಾಗಿ ಕಾಣಿಸದೇ ಅಪಘಾತ ಸಂಭವಿಸುವ ಭೀತಿಯೂ ಇದೆ. 

ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲಿ
ತಲ್ಲೂರು ಒಂದು ಪ್ರಮುಖ ಜಂಕ್ಷನ್‌ ಆಗಿದೆ. ಒಂದು ಕಡೆ ಬೈಂದೂರು, ಮತ್ತೂಂದೆಡೆ ಕುಂದಾಪುರ, ಇನ್ನೊಂದೆಡೆ ನೇರಳಕಟ್ಟೆ, ಹಟ್ಟಿಯಂಗಡಿ, ಕೊಲ್ಲೂರಿಗೆ ತೆರಳುವ ಮಾರ್ಗ ಇದಾಗಿರುವುದರಿಂದ ಎಲ್ಲ ಸಮಯದಲ್ಲಿಯೂ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ತಲ್ಲೂರು ಪೇಟೆ ಭಾಗದಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಲಿ ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ. 

Advertisement

ಧೂಳಿಗೆ ನೀರು ಹಾಕಲಿ
ಈ ವರೆಗೆ ನಮಗೆ ತಲ್ಲೂರಿನಲ್ಲಿ ಹೆದ್ದಾರಿ ಕಾಮಗಾರಿ ಬಗ್ಗೆ ಒಂದು ಸ್ಪಷ್ಟವಾದ ರೂಪುರೇಷೆ ಸಿಕ್ಕಿಲ್ಲ. ಚರಂಡಿ ನಿರ್ಮಾಣದ ಬಗ್ಗೆಯೂ ಮಾಹಿತಿಯಿಲ್ಲ. ಚರಂಡಿ ನಿರ್ಮಾಣ ಮಾಡದಿದ್ದಲ್ಲಿ ಮುಂದಿನ ಮಳೆಗಾಲದಲ್ಲಿ ಇಡೀ ತಲ್ಲೂರು ಪೇಟೆಯ ಜನರು ಸಂಕಷ್ಟ ಅನುಭವಿಸಲಿದ್ದಾರೆ. ಇಲ್ಲಿನ ನಿಧಾನ ಗತಿಯ ಕಾಮಗಾರಿಯಿಂದಾಗಿ ರಸ್ತೆಯಿಡೀ ಧೂಳುಮಯವಾಗಿದ್ದು, ಅದಕ್ಕೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿಯವರು ನೀರನ್ನಾದರೂ ಹಾಕಿ ಶಾಲಾ – ಕಾಲೇಜು ಮಕ್ಕಳು, ಜನರಿಗೆ ಅನುಕೂಲ ಮಾಡಿಕೊಡಲಿ. 
– ಸಂತೋಷ್‌ ತಲ್ಲೂರು, ಸ್ಥಳೀಯರು

ಕಾಮಗಾರಿ ಶೀಘ್ರ ಪೂರ್ಣ
ಈಗಾಗಲೇ ತಲ್ಲೂರಿನಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಆದಷ್ಟು  ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಚರಂಡಿ ಕಾಮಗಾರಿ ಕೂಡ ನಡೆಯಲಿದೆ. ತಲ್ಲೂರು ಪೇಟೆಯಲ್ಲಿ ಸರ್ವಿಸ್‌ ರಸ್ತೆ ಬೇಕು ಎನ್ನುವ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಿ ಕೊಡಲಾಗಿದ್ದು, ಅಲ್ಲಿಂದ ಮಂಜೂರಾಗಿ ಬರಬೇಕಿದೆ. 
– ಯೋಗೇಂದ್ರಪ್ಪ, ಐಆರ್‌ಬಿ ಪ್ರಾಜೆಕ್ಟ್ ಮ್ಯಾನೇಜರ್‌

Advertisement

Udayavani is now on Telegram. Click here to join our channel and stay updated with the latest news.

Next