Advertisement

ತಲ್ಲೂರು ಹೆದ್ದಾರಿ ಕಾಮಗಾರಿ ಸ್ಥಗಿತ: ಆಕ್ರೋಶ

12:30 AM Mar 18, 2019 | |

ಕುಂದಾಪುರ: ಕಾರವಾರ – ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾದ ತಲ್ಲೂರಿನಲ್ಲಿ ನಡೆಯುತ್ತಿರುವ ಕಾಮಗಾರಿ ಕೆಲ ದಿನಗಳಿಂದ ಸ್ಥಗಿತಗೊಂಡಿದ್ದು, ಇದರಿಂದ ಅಧಿಕಾರಿಗಳು ಹಾಗೂ ಗುತ್ತಿಗೆ ವಹಿಸಿಕೊಂಡವರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ತಲ್ಲೂರು ಪೇಟೆಯು ಕುಂದಾಪುರ, ಬೈಂದೂರು ಕಡೆಗೆ, ಹಟ್ಟಿಯಂಗಡಿ, ನೇರಳ ಕಟ್ಟೆ, ಆಜ್ರಿ ಹಾಗೂ ಉಪ್ಪಿನಕುದ್ರು ಹೀಗೆ 4 ಕಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್‌ ಆಗಿದೆ. ಇಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯಿಂದಾಗಿ ವಾಹನ ಸವಾರರು, ಜನರು ಹೈರಾಣಾಗಿದ್ದಾರೆ.  ಡಾಮರಿಗೆ  ರಸ್ತೆಯಲ್ಲಿಯೇ ತಂದು ಹಾಕಲಾದ ಜಲ್ಲಿಯಿಂದಾಗಿ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಪ್ರಯಾಸ ಪಡುತ್ತಿದ್ದಾರೆ. ತಲ್ಲೂರಿನಿಂದ ಉಪ್ಪಿನಕುದ್ರು, ನೇರಳಕಟ್ಟೆಗೆ ದಿನನಿತ್ಯ ಸಾಕಷ್ಟು ಬಸ್‌ಗಳು ಸಂಚರಿಸುವುದರಿಂದ ಈ ಪ್ರದೇಶದಲ್ಲಿ ಜನದಟ್ಟಣೆಯೂ ಹೆಚ್ಚಾಗಿದೆ. 

Advertisement

ಧೂಳಿನ ಗೋಳು
ತಲ್ಲೂರಿನಲ್ಲಿ ನೇರಳಕಟ್ಟೆ ಕಡೆಗೆ ಸಂಚರಿಸುವ ರಸ್ತೆಗೆ ಸಮನಾದ ಎತ್ತರದಲ್ಲಿ ಸಮತಟ್ಟುಗೊಳಿಸಿ ಮಣ್ಣು ತುಂಬಿಸಿ ರಸ್ತೆಯನ್ನು ಏರಿಸಲಾಗಿದೆ. ಒಂದು ಬದಿ ಮಾತ್ರ ರಸ್ತೆಯನ್ನು ನಿರ್ಮಿಸಿದ್ದು, ನೇರಳಕಟ್ಟೆ ಕಡೆಗೆ ಹೋಗುವ ರಸ್ತೆಗೆ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ. ಹದಿನೈದು ದಿನಗಳು ಕಳೆದರೂ ಕೂಡ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಕಂಪೆನಿ ರಸ್ತೆ ಕಾಮಗಾರಿ ಮಾಡುತ್ತಿಲ್ಲ. ಇದರಿಂದಾಗಿ ವಾಹನಗಳು ಓಡಾಡುವಾಗ ಧೂಳಿನಿಂದಾಗಿ ಪೇಟೆಯಲ್ಲಿರುವ ಅಂಗಡಿ ಮಾಲೀಕರು, ಸ್ಥಳೀಯ ರಿಕ್ಷಾ ಹಾಗೂ ಇತರೆ ವಾಹನಗಳ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಆ ಧೂಳಿಗೆ ದಿನಕ್ಕೊಮ್ಮೆಯಾದರೂ ನೀರು ಹಾಕಲಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. 

ಕಾಮಗಾರಿ ಪರಿಶೀಲನೆ
ಈವರೆಗೆ ಐಆರ್‌ಬಿ ಕಂಪೆನಿ ಕಾಮಗಾರಿ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಕಾಮಗಾರಿ ಬಗ್ಗೆ ಕೂಡಲೇ ಪರಿಶೀಲಿಸುತ್ತೇನೆ. ತಲ್ಲೂರಿನಲ್ಲಿ ಸರ್ವಿಸ್‌ ರಸ್ತೆಗಳಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದೆ. ಕಾಮಗಾರಿ ನಡೆಯುತ್ತಿದೆ. ಸ್ಥಗಿತಗೊಳಿಸಿದ ಬಗ್ಗೆ ಮಾಹಿತಿಯಿಲ್ಲ.
ಮಧುಕೇಶ್ವರ್‌,  ಎಸಿ, ಕುಂದಾಪುರ ಉಪ ವಿಭಾಗ

ರಸ್ತೆ ವಿಭಾಜಕ ಅಗಲವಿರಲಿ
ತಲ್ಲೂರು ಜಂಕ್ಷನ್‌ನಲ್ಲಿ ಕ್ರಾಸಿಂಗ್‌ ಕೊಡಲಾಗಿದೆ. ಉಪ್ಪಿನಕುದ್ರುವಿನಿಂದ ಬರುವ ಬಸ್‌ಗಳು ಕುಂದಾಪುರದ ಕಡೆ ಸಂಚರಿಸಬೇಕಾದರೆ ಕ್ರಾಸ್‌ ಮಾಡಬೇಕಾಗುತ್ತದೆ. ಆದರೆ ಇಲ್ಲಿ ರಸ್ತೆ ವಿಭಾಜಕ ತುಂಬಾ ಕಿರಿದಾಗಿದ್ದು, ಇದನ್ನು 4-5 ಫೀಟ್‌ ಅಗಲ ಮಾಡಬೇಕು. 
ಸಂದೀಪ್‌,  ರಿಕ್ಷಾ ಚಾಲಕರು, ತಲ್ಲೂರು

Advertisement

Udayavani is now on Telegram. Click here to join our channel and stay updated with the latest news.

Next