Advertisement
2014ರಲ್ಲಿ ಮೊಸೂಲ್ ನಗರದಲ್ಲಿ ಉಗ್ರರು 39 ಮಂದಿ ಭಾರತೀಯರನ್ನು (ಈ ಪೈಕಿ ಬಹು ತೇಕ ಮಂದಿ ಪಂಜಾಬ್‌ನವರು) ಅಪಹರಿಸಿದ್ದರು. 3 ವರ್ಷಗಳಾದರೂ ಒತ್ತೆಯಾಳುಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇದೀಗ ಮೊಸೂಲ್ ನಗರವು ಇರಾಕ್ ಸೇನೆಯ ವಶಕ್ಕೆ ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯವು ಇರಾಕ್ ಸರಕಾರವನ್ನು ಸಂಪರ್ಕಿಸಿ, ಭಾರತೀಯರ ಪತ್ತೆ ಹಾಗೂ ಬಿಡುಗಡೆ ಕುರಿತು ಪ್ರಸ್ತಾಪಿಸಿದೆ. ಇವರ ಬಿಡುಗಡೆಗೆ ಎಲ್ಲ ರೀತಿ ನೆರವು ನೀಡುವುದಾಗಿ ಇರಾಕ್ ಸರಕಾರ ಭರವಸೆ ನೀಡಿದೆ ಎಂದು ಸೋಮವಾರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಇದೇ ವೇಳೆ, ವಿದೇಶಾಂಗ ಇಲಾಖೆ ಸಹಾ ಯಕ ಸಚಿವ ಜ.ವಿ.ಕೆ.ಸಿಂಗ್ ಸೋಮವಾರವೇ ಇರಾಕ್‌ನ ಎರ್ಬಿಲ್‌ನತ್ತ ಪ್ರಯಾಣ ಬೆಳೆಸಿದ್ದಾರೆ.
ಇರಾಕ್‌ನ ಪ್ರಮುಖ ನಗರ ಮೊಸೂಲ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡು ಕೇಕೆ ಹಾಕುತ್ತಿದ್ದ ಐಸಿಸ್ ಉಗ್ರರಿಗೆ ರವಿವಾರ ಆಘಾತ ಕಾದಿತ್ತು. ಇರಾಕ್ ಸೇನೆಯು ಮೊಸೂಲ್ ನಗರವನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ, ಸೋಲಿನ ರುಚಿ ಕಂಡ ಉಗ್ರರು ದಿಕ್ಕಾಪಾಲಾಗಿ ಓಡಿದರು. ವಿಶೇಷವೆಂದರೆ, ಹಲವು ಉಗ್ರಗಾಮಿಗಳು ರಣಾಂಗಣದಿಂದ ಹಿಂದೆ ಸರಿದಿದ್ದಲ್ಲದೆ, ಟೈಗ್ರಿಸ್ ನದಿಗೆ ಹಾರಿ ಪ್ರಾಣ ಬಿಟ್ಟರು ಎಂದು ಸೇನೆ ಹೇಳಿದೆ. ಈಜಲು ಗೊತ್ತಿದ್ದ ಕೆಲವರು ನದಿಯಲ್ಲಿ ಈಜಿ ಬಚಾವಾಗಲು ಯತ್ನಿಸಿದ್ದು, 30 ಮಂದಿ ಉಗ್ರರನ್ನು ಸೇನೆ ಸದೆಬಡಿದಿದೆ. ಸತತ 8 ತಿಂಗಳ ಹೋರಾಟದ ಬಳಿಕ ಸೇನೆ ರವಿವಾರ ಕೊನೆಯ ಹಂತದ ಕಾರ್ಯಾಚರಣೆಯಾಗಿ ಗುಂಡಿನ ದಾಳಿ ಹಾಗೂ ವೈಮಾನಿಕ ದಾಳಿ ನಡೆಸಿತ್ತು. ಉಗ್ರರ ದಮನದ ಬಳಿಕ ಟೈಗ್ರಿಸ್ ನದಿ ತಟದಲ್ಲಿ ಇರಾಕ್ ಧ್ವಜವನ್ನು ಹಾರಿಸಲಾಯಿತು.