ಧಾರವಾಡ: ಬರೀ ಮತಗಳಿಕೆಗಾಗಿ ದೇಶವನ್ನೇ ಮಾರಾಟ ಮಾಡಲು ಹಿಂದೆ-ಮುಂದೆ ನೋಡದ ಕಾಂಗ್ರೆಸ್ ನವರು, ಮತಗಳ ಆಸೆಗೆ ಯಾವ ಮಟ್ಟಕ್ಕಾದರೂ ಇಳಿಯಲು ಹಿಂಜರಿಯಲ್ಲ ಎಂಬುವುದು ಸಂಸದ ಡಿ.ಕೆ. ಸುರೇಶ್ ಹೇಳಿಕೆಯಿಂದ ಸಾಬೀತಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಚುನಾವಣೆಯಲ್ಲಿ ಮತಗಳು ಬರಬೇಕು ಎಂಬ ಆಸೆಯಿಂದ ದಕ್ಷಿಣ ಭಾರತವನ್ನು ಉತ್ತರ ಭಾರತದಿಂದ ದೂರ ಮಾಡಬೇಕು ಎಂಬ ಹೇಳಿಕೆಯನ್ನು ಡಿ.ಕೆ. ಸುರೇಶ್ ತಪ್ಪು ಒಪ್ಪಿಕೊಂಡು ಹಿಂಪಡೆಯಬೇಕು. ದೇಶದ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ ಎಂದರು.
ಒಂದು ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಇಂಥ ಹೇಳಿಕೆ ನೀಡಬಾರದು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿ.ಕೆ. ಸುರೇಶ ವಿರುದ್ಧ ಕ್ರಮಕೈಗೊಳ್ಳಬೇಕು. ಕಾಂಗ್ರೆಸ್ ನವರಿಗೆ ತಾವು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದಿಲ್ಲ ಎಂಬುದು ಗ್ಯಾರಂಟಿಯಾಗಿದೆ. ಹೀಗಾಗಿ ರಾಜ್ಯದಲ್ಲಿನ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ವಿಚಾರ ಅವರಲ್ಲಿವಿದೆ ಎಂದರು.
ಜನರ ದಾರಿ ತಪ್ಪಿಸುವ ಉದ್ದೇಶದಿಂದ ಡಿ.ಕೆ. ಸುರೇಶ್ ಇಂತಹ ಹೇಳಿಕೆ ನೀಡಿದ್ದಾರೆ. ಇದೇ ರೀತಿ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಈ ಹಿಂದೆಯೇ ಮಾಡಿದ್ದಾರೆ. ಮೆಟ್ರೊದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿ ಬೋರ್ಡ್ ಇರುತ್ತದೆ. ಅಲ್ಲಿ ಹಿಂದಿ ಬೋರ್ಡ್ ಹಾಕಿ ಉತ್ತರ ಭಾರತದ ಹಿಂದಿ ಭಾಷೆ ಹೇರುತ್ತಿದ್ದಾರೆ ಎಂಬುದಾಗಿ ಸುಳ್ಳು ಗದ್ದಲ ಎಬ್ಬಿಸಿದ್ದರು. ಇನ್ನೂ ಚುನಾವಣೆ ಸಂದರ್ಭದಲ್ಲಿ ನಂದಿನಿ ಹಾಗೂ ಅಮೂಲ್ ಹಾಲು ಎಂದು ಕ್ಯಾತೆ ತೆಗೆದಿದ್ದರು ಎಂದು ದೂರಿದರು.
ಪ್ರಾಚೀನ ಕಾಲದಿಂದಲೂ ಭಾರತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇದೆ. ಇದನ್ನು ವಿಭಜಿಸುವ ಮಾತು ಸರಿಯಲ್ಲ. ಹೆಚ್ಚು ಜಿಎಸ್‌ಟಿ ತುಂಬುವ ಪಟ್ಟಿಯಲ್ಲಿ ಕರ್ನಾಟಕ, ತಮಿಳುನಾಡು ಇದ್ದರೆ, ಕೇರಳ ಮುಂದುವರೆದ ರಾಜ್ಯ. ತೆಲಂಗಾಣ ಪ್ರಗತಿಶೀಲ ರಾಜ್ಯ, ಹೀಗಾಗಿ ದಕ್ಷಿಣಗಳು ಉತ್ತರ ರಾಜ್ಯಗಳಿಗಿಂತ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳಾಗಿರುವುದು ಸತ್ಯ ಎಂದು ಅರವಿಂದ ಬೆಲ್ಲದ ಹೇಳಿದರು.