Advertisement
ಜಿಲ್ಲೆಯಲ್ಲಿ ಜೆಡಿಎಸ್ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೂ ಹಿರಿತನ ಮತ್ತು ಅನುಭವದ ಆಧಾರದ ಮೇಲೇ ಜಿ.ಟಿ.ದೇವೇಗೌಡ, ಎಚ್.ವಿಶ್ವನಾಥ್, ಸಾ.ರಾ.ಮಹೇಶ್ ಮಂತ್ರಿಗಳಾದರೆ, ಕಾಂಗ್ರೆಸ್ ಕೋಟಾದಡಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಮಂತ್ರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Related Articles
Advertisement
ವಿಶ್ವನಾಥ್‌ಗೂ ಸಚಿವ ಸ್ಥಾನ?: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಗರಡಿಯಲ್ಲಿ ಬೆಳೆದು ಬಂದ ಎಚ್.ವಿಶ್ವನಾಥ್, 1978ರಲ್ಲೇ ಶಾಸಕರಾದವರು. ಇದು ಅವರಿಗೆ ನಾಲ್ಕನೇ ಗೆಲುವಾದರೂ ಜಿಲ್ಲೆಯ ಅತ್ಯಂತ ಹಿರಿಯ ಶಾಸಕ. ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಮೊದಲಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವರಾಗಿದ್ದ ವಿಶ್ವನಾಥ್ ಅವರನ್ನು ಬಳಿಕ ಸಂಪುಟ ದರ್ಜೆಗೆ ಬಡ್ತಿ ನೀಡಿ ಅರಣ್ಯ ಖಾತೆ ಜವಾಬ್ದಾರಿ ನೀಡಲಾಗಿತ್ತು.
ನಂತರ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಅವರು, ಮುಂದಿನ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ, ಸಿದ್ದರಾಮಯ್ಯ ಅವರ ಮೇಲಿನ ಅಸಮಾಧಾನದಿಂದ ಕಾಂಗ್ರೆಸ್ ತ್ಯಜಿಸಿದ ಅವರ ರಾಜಕೀಯ ಜೀವನ ಅಂತ್ಯವಾಯಿತು ಎಂದು ಎಲ್ಲರೂ ಎಣಿಸುತ್ತಿರುವಾಗಲೇ ಜೆಡಿಎಸ್ ಸೇರಿ ಕೆ.ಆರ್.ನಗರ ಕ್ಷೇತ್ರ ಬಿಟ್ಟು ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಿಶ್ವನಾಥ್‌ಗೆ 14 ವರ್ಷಗಳ ಬಳಿಕ ಅಧಿಕಾರ ಸಿಗುವ ಸಾಧ್ಯತೆ ಹೆಚ್ಚಿದೆ.
ಇನ್ನು ಕೆ.ಆರ್.ನಗರ ಕ್ಷೇತ್ರದಲ್ಲಿ 2008ರಿಂದ ಸತತವಾಗಿ ಚುನಾಯಿತರಾಗಿ ಹ್ಯಾಟ್ರಿಕ್ ಸಾಧಿಸಿರುವ, ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿರುವ ಸಾ.ರಾ.ಮಹೇಶ್ ಅವರೂ ಮಂತ್ರಿಯಾಗುವುದು ಖಚಿತ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ನಿಂದ ಯಾರ್ಯಾರು: ಕಾಂಗ್ರೆಸ್‌ನಿಂದ ತನ್ವೀರ್ ಮತ್ತು ಡಾ.ಯತೀಂದ್ರ ಅವರು ಮಾತ್ರ ಗೆದ್ದಿರುವುದರಿಂದ ಕಾಂಗ್ರೆಸ್ ಕೋಟಾದಲ್ಲಿ ಒಂದು ಮಂತ್ರಿ ಸ್ಥಾನ ಸಿಗಬಹುದು. ತನ್ವೀರ್, ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರಿಂದ ಅವರ ಕೋಟಾ ಮುಗಿದಿದ್ದು, ಆಡಳಿತ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲು ಡಾ.ಯತೀಂದ್ರ ಅವರನ್ನು ಮಂತ್ರಿ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಆಯಾ ಶಾಸಕರ ಆಪ್ತರು, ಬೆಂಬಲಿಗರಂತು ತಮ್ಮ ಶಾಸಕರು ಮಂತ್ರಿ ಆಗಿಯೇ ಆಗುತ್ತಾರೆ ಎಂದು ವಾದ ಮಾಡುತ್ತಾ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬುಧವಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಎದುರು ನೋಡುತ್ತಿದ್ದಾರೆ.
* ಗಿರೀಶ್ ಹುಣಸೂರು