ಜಿ.ಟಿ. ಘೋರ್ಪಡೆ
ತಾಳಿಕೋಟೆ: ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಇಂಗ್ಲಿಷ್ ವ್ಯಾಮೋಹದಲ್ಲಿ ಕನ್ನಡತನ ಕಟ್ಟಿ ಬೆಳೆಸುವದರೊಂದಿಗೆ ಕನ್ನಡ ಭಾಷಾಭಿಮಾನ ಹೆಚ್ಚಿಸುವುದರಲ್ಲಿ ತಾಳಿಕೋಟೆ ಶ್ರೀ ಬಸವೇಶ್ವರ ಮಾರ್ಕೆಟ್ ಯಾರ್ಡ್ ಮುಂಚೂಣಿಯಲ್ಲಿದೆ ಎಂದರೆ ಅತಿಶಯೋಕ್ತಿಯೇನಲ್ಲ. 1956 ಮೈಸೂರು ಹೆಸರಿನ ಮೇಲೆ ಕರ್ನಾಟಕ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ಪ್ರಾರಂಭಗೊಂಡಿರುವ ಈ ಬಸವೇಶ್ವರ ಮಾರ್ಕೆಟ್‌ಯಾರ್ಡಿನಲ್ಲಿ ಅಂದಿನಿಂದ ಇಂದಿನವರೆಗೂ ಕೇವಲ ಕನ್ನಡ ಅಕ್ಷರಗಳನ್ನಷ್ಟೇ ಅಲ್ಲದೇ ಅಂಕಿ ಸಂಖ್ಯೆಗಳನ್ನೂ ಸಹ ಕನ್ನಡದಲ್ಲಿಯೇ ಬರೆಯುವ ಹವ್ಯಾಸ ಇನ್ನೂ ಚಾಲ್ತಿಯಲ್ಲಿಡುವ ಜೊತೆಗೆ ಕನ್ನಡ ಭಾಷೆ-ಸಂಸ್ಕೃತಿ ಎತ್ತಿ ಹಿಡಿದು ಶ್ರೀಮಂತಗೊಳಿಸಿದಂತಹ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಡಿಮೆಯಾಗದ ಕನ್ನಡಪ್ರೇಮ: ಮಾತಾಡುವ ಕನ್ನಡತನದಲ್ಲಿಯೇ ಇಂಗ್ಲಿಷ್ ಪದಗಳನ್ನು ಸೇರಿಸಿ ದೊಡ್ಡ ವ್ಯಕ್ತಿ ಎನ್ನಿಸಿಕೊಳ್ಳಲು ಹವಣಿಸುವ ವ್ಯಕ್ತಿಗಳನ್ನು ಸಾಕಷ್ಟು ಕಾಣುತ್ತೇವೆ. ಜಸ್ಟ್ ಮಿಸ್ ಆಯ್ತು, ಪೇಪರ್ ತೊಗೊಂಡ್ಯಾ ಹೀಗೆ ಮೊದಲಾದ ಪದಗಳನ್ನು ಕನ್ನಡತನದಲ್ಲಿ ಸೇರಿಸಿ ಇಂಗ್ಲಿಷ್‌ನಲ್ಲಿ ವ್ಯಾಮೋಹ ಹೆಚ್ಚಿಸಿಕೊಳ್ಳುವುದು ಸಾಮಾನ್ಯ.
ಹೀಗಿರುವಾಗ ಇಂದಿನ ಯುಗದಲ್ಲಿಯೂ 62 ವರ್ಷದಿಂದ ಕನ್ನಡತನದ ಅಕ್ಷರಗಳ ಜೊತೆಗೆ ಲೆಕ್ಕಪತ್ರದ ಪುಸ್ತಕದ ಹೊತ್ತಿಗೆಯಲ್ಲಿ ಎಲ್ಲ ಅಂಕಿ ಸಂಖ್ಯೆಗಳನ್ನು ಕನ್ನಡದಲ್ಲಿ ಬರೆದಿಡುವ ಪದ್ಧತಿ ಈ ಮಾರ್ಕೆಟ್‌ಯಾರ್ಡಿನಲ್ಲಿ ಉಳಿದುಕೊಂಡಿರುವುದು ವಿಶೇಷ. ಇದು ಇಲ್ಲಿಯ ವರ್ತಕರ ಕನ್ನಡ ಪ್ರೇಮಕ್ಕೆ ಸಾಕ್ಷಿ ಎಂಬಂತಿದೆ.
ಹಬ್ಬಿದ ಕನ್ನಡತನ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಿರ್ಮಾಣವಾಗಿರುವ ಬಸವೇಶ್ವರ ಮಾರ್ಕೇಟ್ ಯಾರ್ಡ್‌ನಲ್ಲಿ ಸುಮಾರು 70ಕ್ಕೂ ಹೆಚ್ಚು ವರ್ತಕರಿದ್ದಾರೆ. ದಿನನಿತ್ಯ ರೈತರು ತರುವ ಮಾಲು, ವಸ್ತುಗಳು ಇಲ್ಲಿಂದಲೇ ಮಾರಾಟವಾಗುವುದು ಸಾಮಾನ್ಯ. ಆದರೆ ರೈತರು ತರುವ ಮಾಲು-ಮಸಲಿನ ಚೀಲಗಳ ಮೇಲೆ ವಿಳಾಸವನ್ನೂ ಸಹ ಅಂಕಿ ಸಂಖ್ಯೆಗಳಲ್ಲಿ ಎಷ್ಟು ಚೀಲ, ಯಾರು ತಂದಿದ್ದಾರೆಂಬ ಹೆಸರುಗಳೊಂದಿಗೆ ಕನ್ನಡದಲ್ಲಿಯೇ ಉಪಯೋಗಿಸಿ ಬರೆಯುತ್ತಾರೆ. ಅಲ್ಲದೇ ದಿನನಿತ್ಯದ ವ್ಯವಹಾರ ಬರೆಯುವ ಹೊತ್ತಿಗೆಗಳಾದ ರೋಖಡಿ, ರೋಜ, ಖಾತೆ, ಝಾಂಗಾಡ, ದಾರ ಹೊತ್ತಿಗೆ, ಅಷ್ಟೇ ಅಲ್ಲದೇ ಚೀಟಿ ಪುಸ್ತಕ, ಪಟ್ಟಿ ಪುಸ್ತಕ ಒಳಗೊಂಡಂತೆ ಎಲ್ಲದರಲ್ಲಿಯೂ ಸಿಗುವುದು ಕನ್ನಡದ ಅಕ್ಷರಗಳು ಮಾತ್ರ. ಇಂತಹ ಕನ್ನಡತನ ಶ್ರೀಮಂತಗೊಳಿಸುವುದರೊಂದಿಗೆ ವ್ಯವಹಾರ ನಡೆಸುತ್ತಿರುವ ಬಸವೇಶ್ವರ ಮಾರ್ಕೆಟ್‌ಯಾರ್ಡಿನಲ್ಲಿ ಕನ್ನಡತನದ ಸುಗಂಧ ಬೀರುತ್ತಿದೆ.
ಗುಮಾಸ್ತರ ಕನ್ನಡ ಪ್ರೇಮ: ಅಪ್ಪಟ ಕನ್ನಡತನ ಹೊಂದಿರುವ ಮಾರುಕಟ್ಟೆಯಲ್ಲಿ ಸುಮಾರು 70 ವರ್ಷಗಳಿಂದ ಕೆಲಸ ಮಾಡುತ್ತಿರುವ ಗುಮಾಸ್ತರು ನಿರ್ವಹಿಸುವ ಲೆಕ್ಕಪತ್ರದ ಶೀರ್ಷಿಕೆ ಹೊಸದಾಗಿ ಕೆಲಸಕ್ಕೆ ಸೇರುವ ಯುವ ಪೀಳಿಗೆಗೆ ಕನ್ನಡದ ಅಂಕಿ ಸಂಖ್ಯೆಗಳನ್ನು ಹೇಳಿಕೊಡುವ ಕಾರ್ಯದೊಂದಿಗೆ ಕನ್ನಡತನ ಉಳಿಸಿ-ಬೆಳೆಸುವಲ್ಲಿ ಗುಮಾಸ್ತರ ಕಾರ್ಯ ಮೆಚ್ಚುವಂತಹದ್ದು.
ಎಲ್ಲೆ ಇರು, ಹೇಗೆ ಇರು ಎಂದಿಗೂ ನೀ ಕನ್ನಡಿಗನಾಗಿರುವ ಎಂಬ ಕುವೆಂಪು ಅವರ ವಾಣಿ, ಹಿಂದೆ ಮತ್ತು ಇಂದು, ಎಂದೆಂದಿಗೂ ಸತ್ಯ ಎಂಬುದಕ್ಕೆ ಉತ್ತರ ಕರ್ನಾಟಕದ ಕನ್ನಡಿಗರು ಕನ್ನಡತನ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬುದಕ್ಕೆ ತಾಳಿಕೋಟೆಯ ಬಸವೇಶ್ವರ ಮಾರುಕಟ್ಟೆ ವ್ಯವಹಾರಗಳೇ ಸಾಕ್ಷಿ.