ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿರುವ ನಡುವೆ ಕಾಬೂಲ್ ಉತ್ತರಕ್ಕಿರುವ ಪಂಜ್ ಶೀರ್ ಕಣಿವೆ ಪ್ರದೇಶವನ್ನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಮೂಲಗಳು ತಿಳಿಸಿವೆ. ಏತನ್ಮಧ್ಯೆ ಪಂಜ್ ಶೀರ್ ಕಣಿವೆ ಮುಖಂಡರು ತಾಲಿಬಾನ್ ಹೇಳಿಕೆಯನ್ನು ಅಲ್ಲಗಳೆದಿದೆ. ನಿಜಕ್ಕೂ ಪಂಜ್ ಶೀರ್ ನಲ್ಲಿ ಏನು ನಡೆಯುತ್ತಿದೆ ಎಂಬುದರ ಕಿರುನೋಟ ಇಲ್ಲಿದೆ…
ತಾಲಿಬಾನ್ ಪಡೆಗಳು ಪಂಜ್ ಶೀರ್ ನ ಆಯಕಟ್ಟಿನ ಸ್ಥಳದಲ್ಲಿ ಠಿಕಾಣಿ ಹೂಡಿದ್ದು, ಹಿಂದಿನ ಸರ್ಕಾರದ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಬೆನ್ನತ್ತಿದ್ದು, ಅವರಿಗೆ ಶಿಕ್ಷಿಸುವ ಕಾರ್ಯದಲ್ಲಿ ಮಗ್ನವಾಗಿರುವುದಾಗಿ ವರದಿ ತಿಳಿಸಿದೆ. ತಾಲಿಬಾನ್ ಆಡಳಿತವನ್ನು ವಿರೋಧಿಸುತ್ತಿರುವ ಪಂಜ್ ಶೀರ್ ನಲ್ಲಿ ಸ್ಥಳೀಯ ಮುಖಂಡ ಅಹ್ಮದ್ ಮಸೌದ್ ಹಾಗೂ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ನೇತೃತ್ವದಲ್ಲಿ ಪ್ರತಿದಾಳಿ ನಡೆಯುತ್ತಿದೆ.
ಪಂಜ್ ಶೀರ್ ಕಣಿವೆಯ ರಾಷ್ಟ್ರೀಯ ಪ್ರತಿರೋಧ ಪಡೆ (ಎನ್ ಆರ್ ಎಫ್) ತಾಲಿಬಾನ್ ಗೆ ಸಡ್ಡು ಹೊಡೆದಿದೆ. ಆದರೆ ಪಂಜ್ ಶೀರ್ ಕಣಿವೆಯನ್ನು ವಶಕ್ಕೆ ಪಡೆದಿರುವುದಾಗಿ ತಾಲಿಬಾನ್ ಬಂಡುಕೋರರು ಹೇಳಿಕೆ ನೀಡಿದ್ದು, ಎನ್ ಆರ್ ಎಫ್ ಪಡೆ ಹಿನ್ನಡೆ ಕಂಡಿರುವುದಾಗಿ ತಿಳಿಸಿದೆ.
ಪಂಜ್ ಶೀರ್ ಕಣಿವೆಯ ಎಲ್ಲಾ ಮಾರ್ಗಗಳು ನಮ್ಮ ನಿಯಂತ್ರಣದಲ್ಲಿಯೇ ಇದೆ ಎಂದು ಎನ್ ಆರ್ ಎಫ್ ಹೇಳಿಕೊಂಡಿದ್ದು, ಉಭಯ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ತಾಲಿಬಾನ್ ನ ನೂರಾರು ಬಂಡುಕೋರರು ಜೀವಕಳೆದುಕೊಂಡಿರುವುದಾಗಿ ವಿವರಿಸಿದೆ.
ತಾಲಿಬಾನ್ ಗಿಂತ ಎನ್ ಆರ್ ಎಫ್ ಎಷ್ಟು ಬಲಶಾಲಿ?
ಸ್ಥಳೀಯ ಎನ್ ಆರ್ ಎಫ್ ಪಡೆಯಲ್ಲಿ 10ರಿಂದ 15 ಸಾವಿರದಷ್ಟು ಸೈನಿಕರಿದ್ದಾರೆ. ಇವರೆಲ್ಲ ಅಹ್ಮದ್ ಮಸೌದ್ ಸಂಘಟಿಸಿದ ಬುಡಕಟ್ಟು ಸೈನಿಕರು. ಇದರಲ್ಲಿ ಅಮ್ರುಲ್ಲಾ ಸಲೇಹ್ ಮತ್ತು ಸಣ್ಣ ಬುಡಕಟ್ಟು ಜನಾಂಗದ ನಾಯಕರು ಸೇರಿದ್ದು, ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಕೆಲವರು ಜೀವ ಕಳೆದುಕೊಂಡಿದ್ದಾರೆ. ಆದರೆ ಈವರೆಗೂ ತಾಲಿಬಾನ್ ಪಡೆಗೆ ಯಾರೂ ಸೇರ್ಪಡೆಗೊಂಡಿಲ್ಲ ಎಂದು ಎನ್ ಆರ್ ಎಫ್ ತಿಳಿಸಿದೆ.
32ವರ್ಷದ ಅಹ್ಮದ್ ಮಸೌದ್ ಪ್ರಮುಖ ಮುಖಂಡರಾಗಿ ಹೊರಹೊಮ್ಮಿದ್ದಾರೆ. ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಟ ನಡೆಸಿ ಜಯಶೀಲರಾಗಿದ್ದ ಅಹ್ಮದ್ ಶಾ ಮಸೌದ್ ಅಫ್ಘಾನಿಸ್ತಾನದ ಹೀರೋ ಆಗಿ ಬಿಂಬಿತರಾಗಿದ್ದರು. ನಂತರ ಅಹ್ಮದ್ ಶಾ 1990ರಲ್ಲಿ ತಾಲಿಬಾನ್ ಆಡಳಿತದ ವಿರುದ್ಧವೂ ಸಡ್ಡು ಹೊಡೆದಿದ್ದರು. ಹೀಗೆ ತಾಲಿಬಾನ್ ಆಡಳಿತಕ್ಕೆ ಸತತ ವಿರೋಧ ವ್ಯಕ್ತಪಡಿಸುತ್ತಿದ್ದ ಅಹ್ಮದ್ ಶಾ ಅವರನ್ನು 2001ರಲ್ಲಿ 9/11ರ ದಾಳಿ ನಡೆಯುವ ಎರಡು ದಿನದ ಮುನ್ನ ಶಾ ಅವರನ್ನು ತಾಲಿಬಾನ್, ಅಲ್ ಖೈದಾ ಉಗ್ರರು ಸಂಚು ನಡೆಸಿ ಹತ್ಯೆಗೈದಿದ್ದರು. ಇದೀಗ ತಂದೆ ಅಹ್ಮದ್ ಶಾ ಸ್ಥಾನದಲ್ಲಿ ಅಹ್ಮದ್ ಮಸೌದ್ ತಾಲಿಬಾನ್ ವಿರುದ್ಧದ ಹೋರಾಟ ಮುಂದುವರಿಸಿದ್ದಾರೆ.
ಅಹ್ಮದ್ ಮಸೌದ್ ಲಂಡನ್ ನ ಕಿಂಗ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದು, ನಂತರ ಸ್ಯಾಂಡುರಸ್ಟ್ ಮಿಲಿಟರಿ ಅಕಾಡೆಮಿಯಲ್ಲಿ ಪದವಿ ಗಳಿಸಿದ್ದರು. ಪಂಜ್ ಶೀರ್ ಕಣಿವೆ ಪ್ರತಿರೋಧ ಒಡ್ಡುತ್ತಿರುವ ಪಡೆಗಳು ನಿಪುಣರಾಗಿದ್ದು, ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಗ್ಗೆ ಫೋಟೋಗಳು ಹರಿದಾಡುತ್ತಿರುವುದಾಗಿ ವರದಿ ವಿವರಿಸಿದೆ.
ಎನ್ ಆರ್ ಎಫ್ ಗೆ ಬೇಕಾಗಿರೋದೇನು?
ಅಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕವಾದ ಆಡಳಿತ ನೀಡುವ ರಾಜಕೀಯ ಪಕ್ಷ ಬೇಕಾಗಿದೆ. ಸಿಎನ್ ಎನ್ ಗೆ ನೀಡಿರುವ ಸಂದರ್ಶನ ನೀಡಿರುವ ಮಸೌದ್, ಪ್ರಜಾಪ್ರಭುತ್ವ ನಮಗೆ ಬೇಕಾಗಿದೆ. ಎಲ್ಲಾ ಪ್ರಜೆಗಳಿಗೂ ಸ್ವಾತಂತ್ರ್ಯ ಮತ್ತು ಹಕ್ಕು ಅಗತ್ಯವಿದೆ. ಇದರಲ್ಲಿ ಯಾವುದೇ ಧರ್ಮ ಮತ್ತು ಲಿಂಗಬೇಧಕ್ಕೆ ಅವಕಾಶ ಇರಬಾರದು ಎಂದು ತಿಳಿಸಿದ್ದರು.
ತಾಲಿಬಾನ್ ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಿದೆ. ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಅಫ್ಘಾನಿಸ್ತಾನದಲ್ಲಿರುವ ಪುಶ್ತುನ್ ಸಮುದಾಯಯೇತರ ಜನರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಬಗ್ಗೆ ಕಳವಳಕಾರಿಯಾಗಿದೆ ಎಂದು ಮಸೌದ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ತಾಲಿಬಾನ್ ಗೆ ಷರಿಯಾ ಕಾನೂನು ಬೇಕಾಗಿದೆ:
ಅಧಿಕಾರಕ್ಕೆ ಏರಿದ ತಾಲಿಬಾನ್ ಈಗಾಗಲೇ ಅಫ್ಘಾನಿಸ್ತಾನ ಇಸ್ಲಾಮಿಕ್ ಎಮಿರೇಟ್ಸ್ ಎಂದು ಘೋಷಿಸಿದೆ. ಅಫ್ಘಾನಿಸ್ತಾನದಲ್ಲಿ ಇರುವ ಪ್ರತಿಯೊಬ್ಬ ಅಫ್ಘಾನ್ ನಿವಾಸಿಗಳಿಗೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ತಾಲಿಬಾನ್ ಹೇಳಿತ್ತು. ಆದರೆ ತಾಲಿಬಾನ್ ಭರವಸೆ ಮೇಲೆ ವಿಶ್ವಾಲ ಇಲ್ಲ ಎಂದಿರುವ ಎನ್ ಆರ್ ಎಫ್, ಅಫ್ಘಾನಿಸ್ತಾನದ ಎಲ್ಲಾ ಜನರ ಸ್ವಾತಂತ್ರ್ಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದೆ.