ನವದೆಹಲಿ: ಕೇರಳದ ಕಲ್ಲಿಕೋಟೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ವತಿಯಿಂದ ವಿದೇಶಿ ಪ್ರತಿನಿಧಿಗಳಿಗೆಂದು ಆಯೋಜಿಸಿರುವ “ಭಾರತೀಯ ಚಿಂತನೆಗಳೊಂದಿಗೆ ತಲ್ಲೀನಗೊಳ್ಳುವಿಕೆ’ ಎಂಬ ನಾಲ್ಕು ದಿನಗಳ ಕೋರ್ಸ್‌ನಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ವಿದೇಶಾಂಗ ಸಚಿವಾಲಯವೇ ತಾಲಿಬಾನ್ ಆಡಳಿತಕ್ಕೆ ಆಹ್ವಾನ ಕಳುಹಿಸಿತ್ತು. ಅಲ್ಲಿನ ಆಡಳಿತವನ್ನು ಭಾರತ ಗುರುತಿಸದಿದ್ದರೂ ತಾಲಿಬಾನ್ ಸರ್ಕಾರದೊಂದಿಗೆ ಸಂಪರ್ಕವನ್ನು ಮುಂದುವರಿಸಿದೆ. ಇದೇ ರೀತಿ ಇತರೆ ರಾಷ್ಟ್ರಗಳ ಪ್ರತಿನಿಧಿಗಳು ಮಂಗಳವಾರ ಆರಂಭಗೊಂಡಿರುವ ಆನ್‌ಲೈನ್ ಕೋರ್ಸ್‌ನಲ್ಲಿ ಭಾಗವಹಿಸಿದ್ದಾರೆ. ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮದ ಎಲ್ಲಾ ಪಾಲುದಾರ ರಾಷ್ಟ್ರಗಳನ್ನು ಕೋರ್ಸ್‌ಗೆ ಆಹ್ವಾನಿಸಲಾಗಿದೆ.
ಈ ಕೋರ್ಸ್ ಮೂಲಕ ಭಾರತದ ಆರ್ಥಿಕ ಪರಿಸರ, ಸಾಂಸ್ಕೃತಿಕ ಪರಂಪರೆ, ಸಾಮಾಜಿಕ ಹಿನ್ನೆಲೆ ಸೇರಿದಂತೆ ಭಾರತ ಕುರಿತು ಹಲವು ಮಾಹಿತಿಗಳನ್ನು ಪ್ರತಿನಿಧಿಗಳು ಪಡೆಯಲಿದ್ದಾರೆ.