Advertisement

ಹೊಸ ಆಡಳಿತಕ್ಕೆ ತಾಲಿಬಾನ್‌ ಸಿದ್ಧತೆ : ಇಂದು ಸರಕಾರ ರಚನೆ?

11:47 PM Sep 06, 2021 | Team Udayavani |

ಕಾಬೂಲ್‌: ಅಫ್ಘಾನ್‌ನ ಕೊನೆಯ ಪ್ರಾಂತ್ಯ ಪಂಜ್‌ಶೀರ್‌ ತಾಲಿಬಾನ್‌ನ ಹಿಡಿತಕ್ಕೆ ಸಿಗುತ್ತಿದ್ದಂತೆ, ಸರಕಾರ ರಚನೆಯ ಕಸರತ್ತು ಆರಂಭವಾಗಿದೆ. 24 ಗಂಟೆಗಳಲ್ಲಿ ಹೊಸ ಸರಕಾರ ಘೋಷಿಸಲಿದ್ದೇವೆ ಎಂದು ಸೋಮವಾರ ತಾಲಿಬಾನ್‌ ಮೂಲಗಳು ಹೇಳಿವೆ.

Advertisement

ಇದರ ನಡುವೆಯೇ, ಅಫ್ಘಾನಿಸ್ಥಾನ ಸರಕಾರದ ಮುಖ್ಯಸ್ಥನಾಗಿ ತನ್ನ ಪ್ರತಿನಿಧಿಯನ್ನೇ ನೇಮಕ ಮಾಡಬೇಕು ಎಂಬ ಷರತ್ತನ್ನು ಪಾಕಿಸ್ಥಾನದ ಐಎಸ್‌ಐ ಹಾಕಿದೆ ಎಂದು ಹೇಳಲಾಗಿದೆ.

ಕಳೆದ ಶನಿವಾರವೇ ಕಾಬೂಲ್‌ಗೆ ತೆರಳಿದ್ದ ಪಾಕ್‌ ಐಎಸ್‌ಐ ಮುಖ್ಯಸ್ಥ ಲೆ|ಜ| ಫೈಜ್‌ ಹಮೀದ್‌, ತಾಲಿಬಾನ್‌ನ ಹಿರಿಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಫ್ಘಾನ್‌ಗೂ ತನ್ನ ಸೇನಾ ಪ್ರಾಬಲ್ಯವನ್ನು ವಿಸ್ತರಣೆ ಮಾಡುವುದು ಐಎಸ್‌ಐ ಸಂಚಾಗಿದ್ದು, ತಾಲಿಬಾನ್‌ ಜತೆ ಈ ಕುರಿತು ಪೂರ್ವ ಒಪ್ಪಂದ ಮಾಡಿಕೊಂಡಿದೆ ಎಂದೂ ಮೂಲಗಳು ತಿಳಿಸಿವೆ.

ಹಕಾನಿ ನೆಟ್‌ವರ್ಕ್‌ಗೆ ಹೊಸ ಸರಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ಅಂಶವೂ ಒಪ್ಪಂದದಲ್ಲಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ, ಪಾಕಿಸ್ಥಾನ ಸೇರಿದಂತೆ ಯಾರು ಕೂಡ ಅಫ್ಘಾನ್‌ ವಿಚಾರದಲ್ಲಿ ಮೂಗು ತೂರಿಸಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ತಾಲಿಬಾನ್‌, ಹೊಸ ನಾಟಕ ಶುರು ಮಾಡಿದೆ.

ಚೀನಗೆ ಆಹ್ವಾನ: ಕಾಬೂಲ್‌ನಲ್ಲಿ ಅಸ್ತಿತ್ವಕ್ಕೆ ಬರಲಿರುವ ತಾಲಿಬಾನ್‌ ಸರಕಾರದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪಾಕಿಸ್ಥಾನ, ಟರ್ಕಿ, ಕತಾರ್‌, ರಷ್ಯಾ, ಚೀನ, ಇರಾನ್‌ಗೆ ಆಹ್ವಾನ ನೀಡಲಾಗಿದೆ. ಸರಕಾರ ರಚನೆಯ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿ ಇರುವುದರಿಂದ ಈ ಆಹ್ವಾನ ನೀಡಲಾಗಿದೆ.

Advertisement

ಪಾಕ್‌ ವಿರುದ್ಧ ಗುಡುಗಿದ ಇರಾನ್‌: ಪಂಜ್‌ಶೀರ್‌ ಪ್ರಾಂತ್ಯವನ್ನು ವಶಪಡಿಸಿಕೊಂಡಿರುವುದಾಗಿ ತಾಲಿ ಬಾನ್‌ ಘೋಷಿಸಿದ ಬೆನ್ನಲ್ಲೇ, ಈ ನಡೆಯನ್ನು ಅಫ್ಘಾನಿಸ್ಥಾನದ ನೆರೆಯ ರಾಷ್ಟ್ರವಾದ ಇರಾನ್‌ ತೀವ್ರವಾಗಿ ಖಂಡಿಸಿದೆ. ಅಫ್ಘಾನಿಸ್ಥಾನದ ಆಂತರಿಕ ವಿಚಾರದಲ್ಲಿ ಅನ್ಯ ರಾಷ್ಟ್ರ ಮೂಗು ತೂರಿಸುವುದು ಸರಿಯಲ್ಲ ಎಂದು ಪಾಕಿಸ್ಥಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ. ಅಸಲಿಗೆ, ಇರಾನ್‌ನಲ್ಲಿ ಶಿಯಾ ಪಂಗಡದವರೇ ಬಹುಸಂಖ್ಯಾತರಾಗಿದ್ದು ಅದೇ ಸಮುದಾಯದವರು ಅಲ್ಲಿ ಅಧಿಕಾರದಲ್ಲಿದ್ದಾರೆ. ಕಾಬೂಲನ್ನು ಇತ್ತೀಚೆಗೆ ವಶಪಡಿಸಿಕೊಂಡ ತಾಲಿಬಾನಿಗಳು ಸುನ್ನಿ ಪಂಗಡಕ್ಕೆ ಸೇರಿದವರಾಗಿದ್ದಾರೆ. ಹಾಗಿದ್ದರೂ, ಇಷ್ಟು ದಿನ ಇರಾನ್‌, ಅಫ್ಘಾನಿಸ್ಥಾನದ ಬಗ್ಗೆ ಚಕಾರವೆತ್ತಿರಲಿಲ್ಲ. ಆದರೆ ಶಿಯಾ ಪಂಗಡದ ಪ್ರಾಬಲ್ಯವಿರುವ ಪಂಜ್‌ಶೀರ್‌ ಅನ್ನು ತಾಲಿಬಾನಿಗಳ ಕೈವಶವಾಗುತ್ತಲೇ ಈಗ ಗುಟುರು ಹಾಕಿದೆ.

ನಾವು ಕೊನೆಯುಸಿರೆಳೆದರೂ…

“ನಾವು ಸತ್ತರೂ, ಇತಿಹಾಸದಲ್ಲಿ ನಮ್ಮ ಹೆಸರು ದಾಖಲಾಗುತ್ತದೆ. ಕೊನೆಯುಸಿರು ಇರುವವರೆಗೂ ದೇಶಕ್ಕಾಗಿ ಹೋರಾಡಿದ ಜನರು ಎಂದು ನಮ್ಮನ್ನು ಬಣ್ಣಿಸಲಾಗುತ್ತದೆ. ನಮಗೆ ಅಷ್ಟು ಸಾಕು…’  ಕೊನೇ ಕ್ಷಣದವರೆಗೂ ತಾಲಿಬಾನ್‌ ವಿರುದ್ಧ ಪ್ರತಿರೋಧವೊಡ್ಡಿದ ಪಂಜ್‌ಶೀರ್‌ನ ರಾಷ್ಟ್ರೀಯ ಪ್ರತಿರೋಧ ಪಡೆ (ಎನ್‌ಆರ್‌ಎಫ್) ವಕ್ತಾರ ಫ‌ಹೀಮ್‌ ದಷ್ಟಿ ಅವರು ಆಡಿದ್ದ ಮಾತಿದು.ರವಿವಾರ ರಾತ್ರಿ ತಾಲಿಬಾನ್‌ನ ಗುಂಡಿಗೆ ಎದೆಯೊಡ್ಡಿ ಮೃತಪಟ್ಟ ಫ‌ಹೀಮ್‌ ಇತ್ತೀಚೆಗೆ ಎನ್‌ಡಿಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಈ ಮಾತುಗಳನ್ನಾಡಿದ್ದರು. ನಮ್ಮ ಗುರಿ ಸಾಧಿಸಲು ಸಾಧ್ಯವಾದರೆ ದೇಶದ ಜನರ ಭವಿಷ್ಯ ಉಜ್ವಲವಾಗಲಿದೆ. ನಾವು ಹೋರಾಡಿ ಸತ್ತರೂ ಅದು ನಮಗೆ ಗೆಲುವೇ ಆಗಲಿದೆ. ಇತಿಹಾಸ ನಮ್ಮನ್ನು ಸ್ಮರಿಸಲಿದೆ ಎಂದಿದ್ದರು ಫ‌ಹೀಮ್‌.

ತಾಲಿಬಾನ್‌ ತೆಕ್ಕೆಗೆ ಪಂಜ್‌ಶೀರ್‌ :

ಕಾಬೂಲ್‌: ಪ್ರಬಲ ಪ್ರತಿರೋಧ ಒಡ್ಡಿದ್ದ ಪಂಜ್‌ಶೀರ್‌ ಪ್ರಾಂತ್ಯ ತಾಲಿಬಾನ್‌ ಉಗ್ರರ ವಶವಾಗಿದೆ. ಸೋಮವಾರ ತಾಲಿಬಾನ್‌ ಈ ಬಗ್ಗೆ ಹೇಳಿಕೊಂಡಿದೆ.

ಆ. 15ರಂದು ತಾಲಿಬಾನಿಗಳು ಕಾಬೂಲನ್ನು ವಶಪಡಿಸಿಕೊಂಡ ಮೂರು ವಾರಗಳಲ್ಲಿ ಈ ಬೆಳವಣಿಗೆ ನಡೆದಿದೆ. ಪಂಜ್‌ಶೀರ್‌ನಲ್ಲಿ ಜಯ ಗಳಿಸಿದ್ದೇವೆ. ಯುದ್ಧದಿಂದ ದೇಶವನ್ನು ಪೂರ್ಣ ಪ್ರಮಾಣದಲ್ಲಿ ರಕ್ಷಿಸಿದ್ದೇವೆ. ಅಫ್ಘಾನಿಸ್ಥಾನದಲ್ಲಿ ನಿಧಾನವಾಗಿ ಸ್ಥಿರತೆ ಮರಳಲಿದೆ ಎಂದು ತಾಲಿಬಾನ್‌ನ ಮುಖ್ಯ ವಕ್ತಾರ ಝಬಿಯುಲ್ಲಾ ಮುಜಾಹಿದ್‌ ಹೇಳಿದ್ದಾನೆ. ಈ ಮೂಲಕ ಸಂಘಟನೆಯ ಆಡಳಿತಕ್ಕೆ ಸವಾಲೆಸೆದರೆ ಪ್ರತಿಕೂಲ ಪರಿಣಾಮ ಉಂಟಾದೀತು ಎಂಬ ಎಚ್ಚರಿಕೆಯನ್ನೂ ನೀಡಿದ್ದಾನೆ.

ಪಂಜ್‌ಶೀರ್‌ನ ಗವರ್ನರ್‌ ನಿವಾಸದಲ್ಲಿ ತಾಲಿಬಾನ್‌ ಬಾವುಟ ಹಾರಿಸಿರುವ ವೀಡಿಯೋ ಸಂದೇಶ ಬಿಡುಗಡೆ ಮಾಡಲಾಗಿದೆ. ಈ ಮೂಲಕ 40 ವರ್ಷಗಳಿಂದ ಇದ್ದ ತಾಲಿಬಾನ್‌ ವಿರೋಧಿ ಪ್ರಬಲ ಹೋರಾಟವೊಂದನ್ನು ಅಡಗಿಸಿದಂತಾಗಿದೆ. 1990ರಲ್ಲಿ ಅಫ್ಘಾನಿಸ್ಥಾನ ಸಂಪೂರ್ಣ ಉಗ್ರರ ವಶವಾಗಿದ್ದರೂ ಪಂಜ್‌ಶೀರ್‌ ಅಹ್ಮದ್‌ ಮಸೂದ್‌ರ ನಿಯಂತ್ರಣದಲ್ಲೇ ಇತ್ತು.

ತಾಲಿಬಾನನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್‌ ಮತ್ತು ನಾರ್ದರ್ನ್ ಅಲಯನ್ಸ್‌ ಮುಖಂಡ ಅಹ್ಮದ್‌ ಮಸೂದ್‌ ತಜಕಿ ಸ್ಥಾನಕ್ಕೆ ತೆರಳಿರುವ ಸಾಧ್ಯತೆ ಇದೆ.

ಪರದೆ ಎಳೆದು ತರಗತಿ ವಿಭಜನೆ :

ಅಫ್ಘಾನಿಸ್ಥಾನದಲ್ಲಿ ಕಾಲೇಜು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಗಳು ಆರಂಭವಾಗಿವೆ. ಎಲ್ಲ ತರಗತಿಗಳಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕುಳಿತುಕೊಳ್ಳಲು ಸೂಚಿಸಲಾಗಿದೆ. ಅವರ ನಡುವೆ ಪರದೆ ಹಾಕಲಾಗಿದೆ. ವಿದ್ಯಾರ್ಥಿನಿಯರು ಹಿಜಬ್‌ ಧರಿಸಬೇಕು, ಅವರಿಗೆ ಉಪನ್ಯಾಸಕಿಯರೇ ಪಾಠ ಮಾಡಬೇಕು, ವಿದ್ಯಾರ್ಥಿನಿಯರಿಗೆ ಐದು ನಿಮಿಷ ಮುಂಚಿತವಾಗಿ ತರಗತಿ ಮುಕ್ತಾಯಗೊಳಿಸುವ ಮೂಲಕ ಅವರು ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಾರದಂತೆ ಕಡ್ಡಾಯ ವಾಗಿ ಕಾಪಾಡಬೇಕು ಎಂದು ಸೂಚಿಸಲಾಗಿದೆ.

ಸಲೇಹ್‌ ಮನೆ ಮೇಲೆ ದಾಳಿ :

ರವಿವಾರ ರಾತ್ರಿ ಪಂಜ್‌ಶೀರ್‌ಗೆ ಲಗ್ಗೆಯಿಟ್ಟ ತಾಲಿಬಾನಿಗರು, ಅಲ್ಲಿದ್ದ ಅಫ್ಘಾನ್‌ ಮಾಜಿ ಉಪ ರಾಷ್ಟ್ರಪತಿ ಅಮ್ರುಲ್ಲಾ ಸಲೇಹ್‌ ಅವರ ಮನೆಯ ಮೇಲೆ ಹೆಲಿಕಾಪ್ಟರ್‌ ಮುಖಾಂತರ ದಾಳಿ ನಡೆಸಿದ್ದಾರೆ. ಪಂಜಶೀರ್‌ ಪ್ರಾಂತ್ಯದಲ್ಲಿ ಅವರ ವಿರುದ್ಧ ತೊಡತಟ್ಟಿ ನಿಂತಿಸದ್ದ ಅಮರುಲ್ಲಾ ತಾಲಿಬಾನಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ತಜಕಿಸ್ಥಾನಕ್ಕೆ ಪರಾರಿಯಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಪ್ರಧಾನಿ, ಶಾ, ದೋವಲ್‌ ಸಭೆ :

ಪಂಜ್‌ಶೀರ್‌ ತಾಲಿಬಾನಿಗಳ ಉಗ್ರರ ವಶವಾಗು ತ್ತಲೇ, ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಗೃಹ ಸಚಿವ ಅಮಿತ್‌ ಶಾ, ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವ ಜೈ.ಶಂಕರ್‌, ವಿತ್ತ ಸಚಿವೆ ನಿರ್ಮಲಾ, ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next