ಕಾಬೂಲ್/ನವದೆಹಲಿ: ಯುದ್ಧಗ್ರಸ್ತ ಅಫ್ಘಾನಿಸ್ತಾನದಿಂದ ಅಮೆರಿಕದ ಸೇನಾ ಪಡೆಗಳು ವಾಪಸಾದ ಬಳಿಕ ತಾಲಿಬಾನ್ ಉಗ್ರರು ಮೊದಲ ಪ್ರಾಂತ್ಯದ ರಾಜಧಾನಿಯನ್ನು ಕೈವಶ ಮಾಡಿಕೊಂಡಿದ್ದಾರೆ. ನಿನ್ರೋಜ್ ಪಾಂತ್ಯದ ರಾಜಧಾನಿ ಝರಾಂಜ್ ಅನ್ನು ಉಗ್ರರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಾಂತ್ಯದ ಡೆಪ್ಯುಟಿ ಗವರ್ನರ್ ರೋಹ್ ಗುಲ್ ಖೈರ್ಜಾದ್ ತಿಳಿಸಿದ್ದಾರೆ.
ಇದನ್ನೂ ಓದಿ:ಅತ್ತಿಗೆಯ ಜತೆ ಅನೈತಿಕ ಸಂಬಂಧ ಆರೋಪ : ತಮ್ಮನನ್ನೇ ಕೊಲೆ ಮಾಡಿದ ಅಣ್ಣ
ಇರಾನ್ ಗಡಿಭಾಗದಲ್ಲಿರುವ ಈ ಪ್ರಾಂತ್ಯದಲ್ಲಿ ಉಗ್ರರು ಮತ್ತು ಸರ್ಕಾರಿ ಪಡೆಗಳ ನಡುವೆ ಕಾಳಗ ನಡೆಯದೆ ಪ್ರಾಂತ್ಯವನ್ನು ಅವರ ವಶಕ್ಕೊಪ್ಪಿಸಲಾಯಿತು ಎಂದು ಹೇಳಿದ್ದಾರೆ. ಉಗ್ರರು ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಈ ನಗರದಲ್ಲಿ ಒಟ್ಟು50 ಸಾವಿರ ಮಂದಿ ವಾಸಿಸುತ್ತಿದ್ದಾರೆ.
ಮತ್ತೂಂದೆಡೆ, ಕಾಬೂಲ್‌ನಲ್ಲಿ ಸರ್ಕಾರದ ಮಾಧ್ಯಮ ವಿಭಾಗದ ಮುಖ್ಯಸ್ಥ ದವಾಖಾನ್ ಮನಾಪಾಲ್‌ರನ್ನು ಹತ್ಯೆ ಮಾಡಲಾಗಿದೆ. ಶುಕ್ರವಾರದ ಪ್ರಾರ್ಥನೆಗಾಗಿ ಆಗಮಿಸುತ್ತಿದ್ದಂತೆಯೇ ಉಗ್ರರು ಅವರ ಮೇಲೆ ಗುಂಡು ಹಾರಿ ಸಿದ್ದಾರೆ. ಈ ಬಗ್ಗೆ ತಾಲಿಬಾನ್ ಸಂಘಟನೆಯ ವಕ್ತಾರನೇ ಈ ಅಂಶವನ್ನು ಖಚಿತಪಡಿಸಿದ್ದಾನೆ.
ಪಂಚ ರಾಷ್ಟ್ರಗಳ ಕಳವಳ: ಆಫ್ಘಾನ್‌ನ ಪರಿಸ್ಥಿತಿ ಬಗ್ಗೆ ಕೇಂದ್ರ ಏಷ್ಯಾದ ರಾಷ್ಟ್ರಗಳಾಗಿರುವ ಕಝಕಿಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ, ತುರ್ಕ್ ಮೇನಿಸ್ತಾನ ಮತ್ತು ಉಜ್ಬೇಕಿಸ್ತಾನದ ಸರ್ಕಾರಿ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಸಿಖ್ ಧ್ವಜ ತೆಗೆಸಿದರು
ಅಫ್ಘಾನಿಸ್ತಾನದ ಪಟಿಕಾ ಪ್ರಾಂತ್ಯದಲ್ಲಿ ಇರುವ ಅತ್ಯಂತ ಹಳೆಯ ಸಿಖ್ ಸಮುದಾಯದವರ ಗುರುದ್ವಾರದಲ್ಲಿ ಹಾಕಲಾಗಿದ್ದ ಧಾರ್ಮಿಕ ಧ್ವಜವನ್ನು ತಾಲಿಬಾನ್ ಉಗ್ರರು ತೆಗೆಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ ಫೋಟೋ ವೈರಲ್ ಆಗಿದೆ. ಕೇಂದ್ರ ಸರ್ಕಾರ ಘಟನೆಯನ್ನು ಖಂಡಿಸಿದೆ. ಎಲ್ಲಾ ಸಮುದಾಯದ ವರನ್ನು ಒಳಗೊಂಡಂತೆ ಆ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಬಾಳುವಂತೆ ಪರಿಸ್ಥಿತಿ ಸುಧಾರಿಸಬೇಕು ಎನ್ನುವುದೇ ಭಾರತ ಸರ್ಕಾರದ ಆಶಯ. ಸದ್ಯ ಉಂಟಾಗಿರುವ ಬೆಳವಣಿಗೆ ಖಂಡನೀಯ ಎಂದು ವಿದೇಶಾಂಗ ಇಲಾಖೆ ಅಧಿಕಾರಿ ಹೇಳಿದ್ದಾರೆ.