ಕಾಬೂಲ್: ಅಫ್ಘಾನಿಸ್ತಾನದ ಮಹಿಳಾ ವ್ಯವಹಾರಗಳ ಸಚಿವಾಲಯದೊಳಕ್ಕೆ ಮಹಿಳಾ ಉದ್ಯೋಗಿಗಳು ಪ್ರವೇಶಿಸದಂತೆ ತಾಲಿಬಾನ್ ನಿರ್ಬಂಧ ಹೇರಿದ್ದು, ಸಚಿವಾಲಯದೊಳಕ್ಕೆ ಕೇವಲ ಪುರುಷ ಉದ್ಯೋಗಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ಕಲ್ಪಿಸಿಕೊಟ್ಟಿರುವುದಾಗಿ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ಇಂದಿನಿಂದ 20 ದಿನ ಸೇವಾ ಪರ್ವ : ಪ್ರಧಾನಿ ಮೋದಿ ಜನ್ಮದಿನ; ದೇಶಾದ್ಯಂತ ಕಾರ್ಯಕ್ರಮ
ನಾಲ್ವರು ಮಹಿಳಾ ಉದ್ಯೋಗಿಗಳಿಗೆ ಸಚಿವಾಲಯದೊಳಕ್ಕೆ ಪ್ರವೇಶಿಸಲು ಅನುಮತಿ ನೀಡಿಲ್ಲ ಎಂದು ಸ್ಪುಟ್ನಿಕ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ತಾಲಿಬಾನ್ ನಿರ್ಧಾರದ ವಿರುದ್ಧ ಮಹಿಳೆಯರು ಸಚಿವಾಲಯದ ಸಮೀಪ ಪ್ರತಿಭಟನೆ ನಡೆಸಿರುವುದಾಗಿ ತಿಳಿಸಿದೆ.
20 ವರ್ಷಗಳ ಬಳಿಕ ಮತ್ತೆ ತಾಲಿಬಾನ್ ಅಫ್ಘಾನಿಸ್ತಾನದ ಆಡಳಿತದ ಚುಕ್ಕಾಣಿ ಹಿಡಿದ ನಂತರ, ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಈ ಹಿಂದಿನಂತೆಯೇ ಅನಿಶ್ಚಿತತೆ, ಭಯದಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದರು.
ಈ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ್ದ ವೇಳೆ ಶರಿಯಾ ಕಾನೂನು ಜಾರಿಗೊಳಿಸಿದ್ದು, ಬಹಿರಂಗವಾಗಿ ಕಲ್ಲು ಹೊಡೆದು ಹತ್ಯೆಗೈಯುವುದು, ಸಾರ್ವಜನಿಕವಾಗಿ ಗಲ್ಲಿಗೇರಿಸಿರುವ ಘಟನೆ ನಡೆದಿರುವುದನ್ನು ಅಫ್ಘಾನ್ ಜನರ ಮನಸ್ಸಿನಿಂದ ಅಳಿಸಿ ಹೋಗಿಲ್ಲ.
ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಮೈತ್ರಿ ಪಡೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ತಾಲಿಬಾನ್ ಅಸ್ತಿತ್ವ ಕಳೆದುಕೊಂಡಿತ್ತು. ಅಮೆರಿಕ ನೂತನ ಅಧ್ಯಕ್ಷ ಜೋ ಬೈಡೆನ್ ಅವರು ಅಫ್ಘಾನಿಸ್ತಾನದಲ್ಲಿನ ಅಮೆರಿಕ ಸೇನಾ ಪಡೆಯನ್ನು ವಾಪಸ್ ಕರೆಯಿಸಿಕೊಳ್ಳುವುದಾಗಿ ಘೋಷಿಸಿದ್ದರು. ಅಫ್ಘಾನಿಸ್ತಾನದಿಂದ ಅಮೆರಿಕ ಸೇನಾಪಡೆ ವಾಪಸ್ ಆಗುತ್ತಿದ್ದಂತೆಯೇ ತಾಲಿಬಾನ್ ಉಗ್ರರು ಅಫ್ಘಾನ್ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು.