Advertisement

ಅಫ್ಗಾನಿಸ್ತಾನದಲ್ಲಿ ರಚನೆಯಾಯ್ತು ಹಂಗಾಮಿ ಸರ್ಕಾರ : ಮೊಹಮ್ಮದ್‌ ಯಾಕೂಬ್‌ ರಕ್ಷಣಾ ಸಚಿವ

10:33 AM Sep 08, 2021 | Team Udayavani |

ಕಾಬೂಲ್‌: ಅಫ್ಘಾನಿಸ್ಥಾನದಲ್ಲಿ ಕೊನೆಗೂ ಉಗ್ರರ ನೇತೃತ್ವದ ಮಧ್ಯಾಂತರ ಸರಕಾರ ಘೋಷಣೆಯಾಗಿದೆ. ವಿಶ್ವಸಂಸ್ಥೆಯ ಉಗ್ರರ ಪಟ್ಟಿಯಲ್ಲಿರುವ ತಾಲಿಬಾನ್‌ ನಾಯಕ ಮೊಹಮ್ಮದ್‌ ಹಸನ್‌ ಅಖುಂದ್‌ ಹೊಸ ಪ್ರಧಾನಿಯಾಗಿದ್ದಾನೆ. ಅಬ್ದುಲ್‌ ಘನಿ ಬರಾದರ್‌, ಅಬ್ದುಲ್‌ ಸಲೇಂ ಹನಫಿ ಎಂಬಿಬ್ಬರನ್ನು ಉಪಪ್ರಧಾನಿ ಹುದ್ದೆಗೆ ನೇಮಕ ಮಾಡಲಾಗಿದೆ. ಜಾಗತಿಕ ಉಗ್ರ ಸಿರಾಜುದ್ದೀನ್‌ ಹಕ್ಕಾನಿಯನ್ನು ಗೃಹ ಸಚಿವ ಎಂದು ಘೋಷಿಸಲಾಗಿದೆ.

Advertisement

ದೋಹಾ ಟೀಂ ಮತ್ತು ಹಕ್ಕಾನಿ ತಂಡದ ಸಮ್ಮಿಶ್ರಣವಾಗಿ ಹೊಸ ಸರಕಾರ ರಚನೆಯಾಗಿದೆ. ಇದು ಮಧ್ಯಾಂತರ ಸರಕಾರವೆಂದು ತಾಲಿಬಾನ್‌ ಹೇಳಿದೆ. ಮುಲ್ಲಾ ಒಮರ್‌ನ ಪುತ್ರ ಮುಲ್ಲಾ ಮೊಹಮ್ಮದ್‌ ಯಾಕೂಬ್‌ ರಕ್ಷಣ ಸಚಿವ, ಹಿದಾಯಿತುಲ್ಲಾ ಬದ್ರಿ ಹಣಕಾಸು ಸಚಿವನಾಗಿದ್ದಾನೆ. ಆಮೀರ್‌ ಖಾನ್‌ ಮುತ್ತಾಖೀ ವಿದೇಶಾಂಗ ಸಚಿವ, ಶೇರ್‌ ಅಬ್ಟಾಸ್‌ ಸ್ಟಾನಿಕ್‌ಝೈ ಉಪ ವಿದೇಶಾಂಗ ಸಚಿವ, ಅಬ್ದುಲ್‌ ಹಕೀಮ್‌ ಕಾನೂನು ಸಚಿವ, ಕೈರುಲ್ಲಾಹ್‌ ಖೈರುಕ್ವಾ ಮಾಹಿತಿ ಸಚಿವನಾಗಿ ನೇಮಕಗೊಂಡಿದ್ದಾನೆ.

ಸದ್ಯ ಇಷ್ಟು ಹೆಸರುಗಳನ್ನು ಪ್ರಕಟಿಸಲಾಗಿದ್ದು, ಉಳಿದ ಸಚಿವರ ಹೆಸರುಗಳನ್ನು ಮುಂದೆ ತಿಳಿಸಲಾಗುವುದು ಎಂದು ತಾಲಿಬಾನ್‌ ವಕ್ತಾರ ಜಬೀವುಲ್ಲಾಹ್‌ ಮುಜಾಹೀದ್‌ ಹೇಳಿದ್ದಾನೆ.

ಸರಕಾರದಲ್ಲಿ ತಾಲಿಬಾನ್‌ನ ಪ್ರಮುಖ ಧರ್ಮಗುರು ಹಿಬಾತುಲ್ಲಾ ಅಖುಂದ್‌ ಝಾದಾ ವಹಿಸಿರುವ ಪಾತ್ರದ ಬಗ್ಗೆ ತಿಳಿದುಬಂದಿಲ್ಲ. ಆದರೆ, ಈಗ ನೇಮಕವಾಗಿರುವ ಪ್ರಧಾನಿ ಮೊಹಮ್ಮದ್‌ ಹಸನ್‌ ಅಖುಂದ್‌, ಹಿಬಾತುಲ್ಲಾ ಅಖುಂದ್‌ ಝಾದಾನ ಪರಮಾಪ್ತನಾಗಿದ್ದಾನೆ.

 ಯಾರೀತ ಮುಲ್ಲಾ ಹಸನ್‌ ಅಖುಂದ್‌ :

Advertisement

ಕಂದಹಾರ್‌ ಮೂಲದ ಈತ, 1996ರಲ್ಲಿ ಸ್ಥಾಪನೆಯಾಗಿದ್ದ ತಾಲಿಬಾನ್‌ ಸರಕಾರದಲ್ಲಿ ಸಚಿವನಾಗಿ, ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ. ತಾಲಿಬಾನ್‌ನ ರೆಹ್ಬಾರಿ ಶೌರಾದ ಮುಖ್ಯಸ್ಥನಾಗಿ 20 ವರ್ಷ ಕಾರ್ಯನಿರ್ವಹಿಸಿದ್ದಾನೆ. 2001ರಲ್ಲಿ ಬಾಮಿಯಾನ್‌ ಬುದ್ಧ ಪ್ರತಿಮೆಗಳನ್ನು ನಾಶ ಮಾಡಲು ಆದೇಶ ಕೊಟ್ಟದ್ದು ಈತನೇ. ಇದನ್ನು ಧರ್ಮದ ಕೆಲಸವೆಂದು ಈತ ಬಣ್ಣಿಸಿದ್ದ.

ದಿಲ್ಲಿಗೆ ಬಂದ ರಷ್ಯಾ ನಿಯೋಗ :

ಅಫ್ಘಾನ್‌ ಬಿಕ್ಕಟ್ಟಿನ ಬಗ್ಗೆ ಚರ್ಚಿಸುವ ಸಲುವಾಗಿ ರಷ್ಯಾದ ಭದ್ರತ ಮಂಡಳಿಯ ಜ| ನಿಕೋಲೆ ಪಾರ್ತುಶೇವ್‌ ನೇತೃತ್ವದ ನಿಯೋಗ ಮಂಗಳವಾರ ಹೊಸದಿಲ್ಲಿಗೆ ಆಗಮಿಸಿದೆ. ನಿಯೋಗವು ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ರಾಷ್ಟ್ರೀಯ ಭದ್ರತ ಸಲಹೆಗಾರ ಅಜಿತ್‌ ದೋವಲ್‌ ಅವರನ್ನು ಭೇಟಿಯಾಗಲಿದೆ.

ಪಾಕ್‌ ವಿರುದ್ಧ ಸಿಡಿದೆದ್ದ ಮಹಿಳೆಯರು :

ಪಾಕಿಸ್ಥಾನದ ವಿರುದ್ಧ ಅಫ್ಘಾನ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಬೂಲ್‌ನಲ್ಲಿರುವ ಪಾಕ್‌ ರಾಯಭಾರ ಕಚೇರಿಯ ಮುಂದೆ ಮಹಿಳೆಯರ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಲಾಗಿದೆ. ಪಂಜ್‌ಶೀರ್‌ ಪ್ರಾಂತ್ಯ ಪಾಕ್‌ ನೆರವಿನಿಂದ ವಶವಾಗಿರುವುದು ಬಹಿರಂಗವಾಗುತ್ತಲೇ ಈ ಬೆಳವಣಿಗೆ ನಡೆದಿದೆ.

“ಪಾಕಿಸ್ಥಾನ ಸಾಯಲಿ’ ಎಂಬ ಉದ್ಘೋಷ ಮೊಳಗಿದೆ. ಪ್ರತಿಭಟನಕಾರರನ್ನು ಚದುರಿಸಲು ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ವರದಿಗಾಗಿ ಬಂದಿದ್ದ ಪತ್ರಕರ್ತರನ್ನು ಬಂಧಿಸಲಾಗಿದೆ. “ಉಗ್ರರು ನಾವು ಕ್ಷಮೆ ಕೋರುವಂತೆ ಮಾಡಿದರು ಮತ್ತು ಮೂಗನ್ನು ನೆಲಕ್ಕೆ ಉಜ್ಜುವ ಶಿಕ್ಷೆ ವಿಧಿಸಿದರು’ ಎಂದು ಪತ್ರಕರ್ತರೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next