ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ “ಗೆಜ್ಜೆನಾದ’ ವಿಜಯ್ ಕುಮಾರ್ ಪುತ್ರ ಅಥರ್ವ್ ಈಗ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗು ತ್ತಿದ್ದಾರೆ. ಅಥರ್ವ್ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾಕ್ಕೆ “ಟೇಲ್ಸ್ ಆಫ್ ಮಹಾನಗರ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಇನ್ನು ಸಿನಿಮಾದ ಬಿಡುಗಡೆಯ ಡೇಟ್ ಕೂಡ ಅನೌನ್ಸ್ ಮಾಡಿರುವ ಚಿತ್ರತಂಡ, ಇದೇ ಸೆಪ್ಟೆಂಬರ್ 15 ರಂದು “ಟೇಲ್ಸ್ ಆಫ್ ಮಹಾನಗರ’ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. “ಟೇಲ್ಸ್ ಆಫ್ ಮಹಾನಗರ’ದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು.
ಮೊದಲಿಗೆ ಸಿನಿಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ವಿಜಯ ಕುಮಾರ್, “ನನ್ನ ಮಗ ಅಥರ್ವ್ ಹಾಗೂ ನಿರ್ದೇಶಕ ಕಿರಣ್ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡು ನಿರ್ಮಾಪಕರ ಹುಡುಕಾಟ ದಲ್ಲಿದ್ದರು. ಆನಂತರ ಕಥೆ ಇಷ್ಟವಾಗಿ ನಾನೇ ನಿರ್ಮಾಣಕ್ಕೆ ಮುಂದಾದೆ. ಕಿಚ್ಚ ಸುದೀಪ್ ಈ ಸಿನಿಮಾದ ಟೀಸರ್‌ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದ್ದಾರೆ. ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆಯಿದ್ದು, ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ನಂಬಿಕೆಯಿದೆ’ ಎಂದರು.
“ಈ ಹಿಂದೆ ಕಿರುತೆರೆಯಲ್ಲಿ “ಪುನರ್ ವಿವಾಹ’ ಹಾಗೂ “ಪತ್ತೆಧಾರಿ ಪ್ರತಿಭಾ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದೆ. ನಾಯಕನಾಗಿ ಇದು ನನಗೆ ಮೊದಲ ಸಿನಿಮಾ. ಮೊದಲಾರ್ಧ ಬೇರೆ ಬೇರೆಯಾಗಿ ಸಾಗುವ ಮೂರು ಕಥೆಗಳು, ದ್ವಿತೀಯಾರ್ಧದಲ್ಲಿ ಒಂದೇ ಆಗುತ್ತದೆ. ನಿದ್ದೆ ಮೇಲಿನ ಪ್ರಯೋಗ, ರಂಗಭೂಮಿ ಕಲಾವಿದನ ಬದುಕು ಮತ್ತು ಟ್ಯಾಕ್ಸಿ ಚಾಲಕನ ಜೀವನ ಹೀಗೆ ಮೂರು ಎಳೆಯಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಈ ಸಿನಿಮಾದಲ್ಲಿ ನಾನು ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದೇನೆ’ ಎಂಬುದು ನಾಯಕ ನಟ ಅಥರ್ವ್ ನೀಡುವ ವಿವರಣೆ.
“ಆರಂಭದಲ್ಲಿ ಒಂದು ಒಳ್ಳೆಯ ಕಥೆಯನ್ನು ಇಟ್ಟುಕೊಂಡು ಸಾಕಷ್ಟು ನಿರ್ಮಾಪಕರನ್ನು ಹುಡುಕಿದೆವು. ಅಂತಿಮವಾಗಿ ನಮ್ಮ ಕಥೆ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಸಸ್ಪೆನ್ಸ್-ಥ್ರಿಲ್ಲರ್ ಎಂಟರ್ ಟೈನ್ಮೆಂಟ್ ಇರುವ “ಟೇಲ್ಸ್ ಆಫ್ ಮಹಾನಗರ’ ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗಲಿದೆ’ ಎಂಬುದು ನಿರ್ದೇಶಕ ಕಿರಣ್ ವೆನಿಯಲ್ ಮಾತು.
ನಾಯಕಿ ರೆಮೋಲಾ, ನಟರಾದ ಆರ್. ಜೆ ಅನೂಪ, ನಾಗರಾಜ್, ಸಂಕಲನಕಾರ ಪ್ರದೀಪ್ ಗೋಪಾಲ್ ಸಿನಿಮಾದ ಬಗ್ಗೆ ಮಾತನಾಡಿದರು.