Advertisement

ತಲಕಾವೇರಿಯಲ್ಲಿ ತೀರ್ಥೋದ್ಭವ; ಸೀಮಿತ ಭಕ್ತರು

11:08 PM Oct 17, 2020 | sudhir |

ಮಡಿಕೇರಿ: ಬ್ರಹ್ಮಗಿರಿಯ ತಪ್ಪಲಿನ ತಲಕಾವೇರಿಯ ಬ್ರಹ್ಮಕುಂಡಿಕೆ ಯಲ್ಲಿ ಶನಿವಾರ ಬೆಳಗ್ಗೆ 7 ಗಂಟೆ 4 ನಿಮಿಷಕ್ಕೆ ತೀರ್ಥರೂಪಿಣಿಯಾಗಿ ಮಾತೆ ಕಾವೇರಿ ಕಾಣಿಸಿಕೊಂಡಳು.

Advertisement

ಅರ್ಚಕ ವೃಂದದ ವೇದ ಮಂತ್ರ ಘೋಷಣೆ, ಸೀಮಿತ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಜೈ ಜೈ ಮಾತಾ ಕಾವೇರಿ ಮಾತಾ ಉದ್ಘೋಷಗಳ ನಡುವೆ ತೀರ್ಥೋದ್ಭವವಾಯಿತು.

ಉಸ್ತುವಾರಿ ಸಚಿವ‌ ವಿ.ಸೋಮಣ್ಣ, ಶಾಸಕ‌ ಎಂ.ಪಿ. ಅಪ್ಪಚ್ಚು ರಂಜನ್‌, ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್‌ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್‌, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್‌, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಎಸ್‌ಪಿ ಕ್ಷಮಾ ಮಿಶ್ರಾ, ಜಿ.ಪಂ ಸಿಇಒ ಭನ್ವರ್‌ ಸಿಂಗ್‌ ಮೀನಾ, ಡಿಎಫ್ಒ ಪ್ರಭಾಕರನ್‌, ನೀಲೇಶ್‌ ಶಿಂಧೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ಸ್ನೇಹಾ, ಡಿವೈಎಸ್‌ಪಿ ದಿನೇಶ್‌ ಕುಮಾರ್‌, ತಲ ಕಾವೇರಿ ಭಗಂಡೇಶ್ವರ ದೇವಾಲಯ ಇಒ ಬಿ.ಎಂ.ಕೃಷ್ಣಪ್ಪ ಮೊದಲಾದವ‌ರಿದ್ದರು.

ಸಂಕಲ್ಪ ಪೂಜೆ
ಕ್ಷೇತ್ರದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಆಚಾರ್‌ ನೇತೃತ್ವದಲ್ಲಿ ಮುಂಜಾನೆ 3.30 ಗಂಟೆಯಿಂದಲೇ ಕಾವೇರಿ ಕುಂಡಿಕೆ ಬಳಿ ವಿಶೇಷ ಪೂಜಾ ಕಾರ್ಯಗಳು ನಡೆದವು. ತೀರ್ಥೋದ್ಭವ ಸಂಪನ್ನಗೊಂಡ ಬಳಿಕ ಸಂಪ್ರದಾಯ ದಂತೆ ಭಾಗಮಂಡಲ ಕ್ಷೇತ್ರದ ಮುಖ್ಯಸ್ಥರು ತೀರ್ಥವನ್ನು ಪಡೆದುಕೊಂಡು ಭಾಗಮಂಡಲಕ್ಕೆ ತೆರಳಿ ಶ್ರೀ ಭಗಂಡೇ ಶ್ವರನಿಗೆ ಅಭಿಷೇಕ ಮಾಡಿದರು.

ಕೋವಿಡ್‌ ಕಾರಣದಿಂದ ಭಕ್ತರಿಗೆ ಕುಂಡಿಕೆಯಿಂದ ನೇರವಾಗಿ ತೀರ್ಥ ಸ್ವೀಕರಿಸುವುದಕ್ಕೆ ಅವಕಾಶವಿರಲಿಲ್ಲ. ದೇವಾಲಯ ಸಮಿತಿ ಪ್ರತ್ಯೇಕ ಸ್ಥಳದಲ್ಲಿ ತೀರ್ಥ ವಿತರಣೆ ಮಾಡುವ ಮೂಲಕ ಕುಂಡಿಕೆಯ ಬಳಿ ಜನದಟ್ಟಣೆ ಯಾಗದಂತೆ ಕ್ರಮ ಕೈಗೊಳ್ಳಲಾಗಿತ್ತು.

Advertisement

ಸಂಪ್ರದಾಯದಂತೆ ವಿಧಿ ವಿಧಾನ
ಸಂಪ್ರದಾಯದಂತೆ ತೀರ್ಥೋದ್ಭವದ ವಿಧಿ ವಿಧಾನಗಳು ನಡೆದಿದ್ದು, ಕೋವಿಡ್‌ ಕಾರಣದಿಂದ ಕೆಲವು ನಿಯಮಗಳನ್ನು ಜಾರಿಗೊಳಿಸಲೇ ಬೇಕಾದ ಅನಿವಾರ್ಯತೆ ಎದುರಾ ಯಿತು. ಈ ಬಾರಿ ಭಕ್ತರಿಗೆ ಮುಕ್ತ ಪ್ರವೇಶ ನೀಡಲಾಗಿಲ್ಲ. ಯಾರಿಗೆ ನೋವಾಗಿದ್ದರೂ ಸರಕಾರದ ಪರವಾಗಿ ಕ್ಷಮೆ ಕೋರುವುದಾಗಿ ಸಚಿವ ಸೋಮಣ್ಣ ಹೇಳಿದರು.

ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮುನಿಸು
ಕಾವೇರಿ ಕ್ಷೇತ್ರದಲ್ಲಿ ನಿರ್ಬಂಧಗಳನ್ನು ಸಮರ್ಪಕವಾಗಿ ಅನುಸರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ತಲಕಾವೇರಿ, ಭಾಗಮಂಡಲ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ತೀರ್ಥೋದ್ಭವಕ್ಕೂ ಮೊದಲು ಸ್ಥಳದಿಂದ ಹೊರ ನಡೆದರು. ಕೋವಿಡ್‌ ಪರೀಕ್ಷೆ ಮಾಡಿದವರಿಗೆ ಮಾತ್ರ ಕ್ಷೇತ್ರದೊಳಕ್ಕೆ ಪ್ರವೇಶ ಎಂದು ನಿರ್ಧಾರ ಕೈಗೊಂಡು ಕೊನೇ ಕ್ಷಣದಲ್ಲಿ ಎಲ್ಲರನ್ನೂ ಒಳ ಬಿಡಲಾಗಿದೆ ಎಂದು ತಮ್ಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಭಕ್ತರಿಗೆ ಅವಕಾಶ ಕಲ್ಪಿಸಿದ ಶಾಸಕ
ಪೊಲೀಸರ ಮನವಿಯನ್ನು ಧಿಕ್ಕರಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅವರು ತೀರ್ಥೋದ್ಭವ ವೀಕ್ಷಣೆಗೆ ಕೆಲವು ಭಕ್ತರಿಗೆ ಅವಕಾಶ ಕಲ್ಪಿಸಿಕೊಟ್ಟ ಘಟನೆಯೂ ನಡೆಯಿತು. ಭಕ್ತರಿಗೆ ಅವಕಾಶ ನೀಡುವಂತೆ ವಿಧಾನ ಪರಿಷತ್‌ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಹಾಗೂ ಜಿ.ಪಂ. ಸದಸ್ಯೆ ಕೆ.ಪಿ.ಚಂದ್ರಕಲಾ ಅವರು ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿ ವಿಫ‌ಲರಾದರು. ಬಳಿಕ ಆಗಮಿಸಿದ ಶಾಸಕ ಅಪ್ಪಚ್ಚು ರಂಜನ್‌ ಅವರು ಪೊಲೀಸರ ತಡೆಯನ್ನು ದಾಟಿ ಒಳ ಪ್ರವೇಶಿಸಿದರು.ಅವರನ್ನು ಹಲವು ಭಕ್ತರು ಹಿಂಬಾಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next