Advertisement

ಟಕ್ಕರ್ ಚಿತ್ರ ವಿಮರ್ಶೆ: ಸ್ಮಾರ್ಟ್‌ ಲೋಕದಲ್ಲೊಂದು ಕ್ರೈಂ-ಥ್ರಿಲ್ಲರ್‌ ಸ್ಟೋರಿ

11:05 AM May 07, 2022 | Team Udayavani |

 

Advertisement

ಇಂದು ಎಲ್ಲ ಕಡೆ ಸ್ಮಾರ್ಟ್‌ ತಂತ್ರಜ್ಞಾನದ ಜಮಾನ. ಸ್ಮಾರ್ಟ್‌ ಪೋನ್‌, ಸ್ಮಾರ್ಟ್‌ ಟಿ.ವಿ, ಸ್ಮಾರ್ಟ್‌ ವಾಚ್‌, ಸ್ಮಾರ್ಟ್‌ ಕಂಪ್ಯೂಟರ್‌, ಸ್ಮಾರ್ಟ್‌ ಕ್ಲಾಸ್‌… ಹೀಗೆ ಗೊತ್ತಿಧ್ದೋ, ಗೊತ್ತಿಲ್ಲದೆಯೋ ಪ್ರತಿನಿತ್ಯದ ಬದುಕಿನಲ್ಲಿ ನಾವೆಲ್ಲರೂ ಈ ಸ್ಮಾರ್ಟ್‌ ತಂತ್ರಜ್ಞಾನದ ಮೇಲೆ ಅವಲಂಭಿತರಾಗಿದ್ದೇವೆ. ಜನರಿಗೆ ಪ್ರತಿನಿತ್ಯ ಹತ್ತಾರು ರೀತಿಯಲ್ಲಿ ಉಪಯೋಗವಾಗುತ್ತಿರುವ ಈ ಸ್ಮಾರ್ಟ್‌ ತಂತ್ರಜ್ಞಾನ, ದುರುಳರ ಕೈಗೆ ಸಿಕ್ಕು ದುರುಪಯೋಗವಾದರೆ ಹೇಗಿರುತ್ತದೆ? ಅದರ ಪರಿಣಾಮವೇನು? ಆದರಿಂದ ಜನಸಾಮಾನ್ಯರ ಬದುಕು ಹೇಗೆ ನಲುಗುತ್ತದೆ? ಅನ್ನೋದನ್ನ ಸಿನಿಮ್ಯಾಟಿಕ್‌ ಆಗಿ ತೆರೆಮೇಲೆ ಹೇಳಿರುವ ಚಿತ್ರ “ಟಕ್ಕರ್‌’.

ಇತ್ತೀಚಿನ ವರ್ಷಗಳಲ್ಲಿ ಪ್ರತಿದಿನ ಪತ್ರಿಕೆಗಳು ಮತ್ತು ಮಾಧ್ಯಮಗಳಲ್ಲಿ ವರದಿಯಾಗುವ ಸೈಬರ್‌ ಕ್ರೈಂ, ಇಂಟರ್‌ನೆಟ್‌ ಜಾಲದೊಳಗೆ ಸಿಲುಕಿ ನಲುಗುವ ಹೆಣ್ಣುಮಕ್ಕಳ ಸ್ಥಿತಿಯ ಒಂದು ಎಳೆಯನ್ನು ಇಟ್ಟುಕೊಂಡು ಅದಕ್ಕೆ ಲವ್‌, ಸೆಂಟಿಮೆಂಟ್‌, ಆ್ಯಕ್ಷನ್‌, ಕಾಮಿಡಿಯಂತಹ ಒಂದಷ್ಟು ಮನರಂಜನಾತ್ಮಕ ಅಂಶಗಳನ್ನು ಸೇರಿಸಿ “ಟಕ್ಕರ್‌’ ಮೂಲಕ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ವಿ. ರಘು ಶಾಸ್ತ್ರೀ. ಸಿನಿಮಾದ ಕಥೆ ಇಂದಿನ ಎಲ್ಲ ವಯೋಮಾನದ ಮತ್ತು ಎಲ್ಲದ ವರ್ಗದ ಪ್ರೇಕ್ಷಕರಿಗೂ ತಲುಪುವಂತಿದ್ದರೂ, ಚಿತ್ರಕಥೆ, ನಿರೂಪಣೆ ಮತ್ತು ಸಂಭಾಷಣೆ ಕಡೆಗೆ ಇನ್ನಷ್ಟು ಗಮನ ನೀಡಿದ್ದರೆ, “ಟಕ್ಕರ್‌’ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುವ ಸಾಧ್ಯತೆಗಳಿದ್ದವು

ಇದನ್ನೂ ಓದಿ:‘ಅವತಾರ ಪುರುಷ’ ಚಿತ್ರ ವಿಮರ್ಶೆ; ಮಾಯಾ ಪುರುಷನ ತಂತ್ರ ಅವತಾರ

ಇನ್ನು ನವ ನಾಯಕ ಮನೋಜ್‌ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸುತ್ತಾರೆ. ಮಾಸ್‌ ಹೀರೋ ಆಗಿ ಆ್ಯಕ್ಷನ್‌ ಲುಕ್‌, ಡೈಲಾಗ್ಸ್‌ನಲ್ಲಿ ಮನೋಜ್‌ ಗಮನ ಸೆಳೆಯುತ್ತಾರೆ. ನಾಯಕಿ ರಂಜನಿ ರಾಘವನ್‌ ಮೆಡಿಕಲ್‌ ಸ್ಟುಡೆಂಟ್‌ ಆಗಿ ಇರುವಷ್ಟು ಹೊತ್ತು ತೆರೆಮೇಲೆ ಇಷ್ಟವಾಗುತ್ತಾರೆ. ಉಳಿದಂತೆ ಸೌರವ್‌ ಲೋಕಿ, ಶ್ರೀಧರ್‌, ಜೈ ಜಗದೀಶ್‌, ಅಶ್ವಿ‌ನ್‌ ಹಾಸನ್‌ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ಕಾಮಿಡಿಯ ಸಲುವಾಗಿಯೇ ಸಾಧುಕೋಕಿಲ ಅವರ ಪೊಲೀಸ್‌ ಪಾತ್ರವನ್ನು ಸೃಷ್ಟಿಸಿದಂತಿದ್ದು, ತೆರೆಮೇಲೆ ಅಂದುಕೊಂಡ ಮಟ್ಟಿಗೆ ವರ್ಕೌಟ್‌ ಆಗಿಲ್ಲ.

Advertisement

ತಾಂತ್ರಿಕವಾಗಿ “ಟಕ್ಕರ್‌’ ಸಿನಿಮಾದಲ್ಲಿ ವಿಲಿಯಂ ಡೇವಿಡ್‌ ಛಾಯಾಗ್ರಹಣ, ಕೆ. ಎಂ ಪ್ರಕಾಶ್‌ ಸಂಕಲನ ಗಮನ ಸೆಳೆಯುತ್ತದೆ. ಮಣಿಕಾಂತ್‌ ಕದ್ರಿ ಸಂಗೀತದ ಎರಡು ಹಾಡುಗಳು ಥಿಯೇಟರ್‌ ಹೊರಗೂ ಗುನುಗುವಂತಿದೆ.

ಕಥೆಯಲ್ಲಿ ತೀರಾ ಲಾಜಿಕ್‌ ಹುಡುಕದೆ, ಔಟ್‌ ಆ್ಯಂಡ್‌ ಔಟ್‌ ಮಾಸ್‌ ಸಿನಿಮಾಗಳನ್ನು ಇಷ್ಟಪಡುವವರು ವಾರಾಂತ್ಯದಲ್ಲಿ ಒಮ್ಮೆ ಥಿಯೇಟರ್‌ನಲ್ಲಿ “ಟಕ್ಕರ್‌’ ನೋಡಿ ಬರಲು ಅಡ್ಡಿಯಿಲ್ಲ

ಜಿ. ಎಸ್‌ ಕಾರ್ತಿಕ ಸುಧನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next