ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ಯಾವುದೇ ಕ್ಷಣದಲ್ಲಾದರೂ, ವೇಳಾಪಟ್ಟಿ ಪ್ರಕಟವಾಗಲಿದೆ. ಒಮ್ಮೆ ವೇಳಾಪಟ್ಟಿ ಘೋಷಣೆಯಾದ ಬಳಿಕ ಮತದಾನಕ್ಕೆ ಒಂದೂವರೆ ತಿಂಗಳ ಅವಧಿ ಸಿಗಲಿದ್ದು, ರಾಜಕೀಯ ಪಕ್ಷಗಳೂ ಮತದಾರರನ್ನು ಸೆಳೆಯಲು ನಾನಾ ವಿಧದ ಕಾರ್ಯತಂತ್ರ ಅನುಸರಿಸುತ್ತಿವೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ನಾಯಕರನ್ನು ಕರೆಸಿ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ, ಪ್ರಚಾರದಂಥ ಕಾರ್ಯಕ್ರಮ ನಡೆಸಿದ್ದರೆ, ಜೆಡಿಎಸ್ ಮೈಸೂರಿನಲ್ಲಿ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಿ, ದೊಡ್ಡ ಮಟ್ಟದ ಪ್ರಚಾರಕ್ಕೆ ದಾಂಗುಡಿ ಇಟ್ಟಿದೆ.
ಈ ಎಲ್ಲ ಕಸರತ್ತುಗಳ ನಡುವೆ, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಬೇರೆ ದಾರಿಯನ್ನು ಕಂಡುಕೊಂಡಿರುವುದು ಗಮನಕ್ಕೆ ಬರುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ, ರಾಜ್ಯದ ವಿವಿಧ ಭಾಗಗಳಲ್ಲಿ ಕಂತೆ ಕಂತೆಗಳಲ್ಲಿ ದಾಖಲೆ ಇಲ್ಲದ ಹಣ ಸಿಗುತ್ತಿದೆ. ಹಣದ ಮೂಲ ಸಿಗದೇ ಇರುವುದರಿಂದ, ಕೇಂದ್ರ ಚುನಾವಣಾ ಅಧಿಕಾರಿಗಳು ಇದನ್ನು ವಶಪಡಿಸಿಕೊಳ್ಳುತ್ತಿವೆ. ಅಲ್ಲದೆ, ಚುನಾವಣಾ ದಿನಾಂಕ ಘೋಷಣೆಗೆ ಮುನ್ನವೇ ಈ ಪ್ರಮಾಣದ ಹಣ ಸಿಗುತ್ತಿರುವುದು ಎಲ್ಲೋ ಒಂದು ಕಡೆಯಲ್ಲಿ ಆತಂಕಕ್ಕೂ ಕಾರಣವಾಗಿದೆ. ಕೇವಲ ಹಣವಷ್ಟೇ ಅಲ್ಲ, ಇದರ ಜತೆ ಮದ್ಯ, ಕೊಡುಗೆ ನೀಡಲು ತೆಗೆದುಕೊಂಡ ಬಂದ ವಸ್ತುಗಳೂ ಭರಪೂರವಾಗಿಯೇ ಸಿಗುತ್ತಿವೆ.
ಕರ್ನಾಟಕ ಚುನಾವಣೆಯಲ್ಲಿ ಭರ್ಜರಿಯಾಗಿ ಹಣ ಓಡಾಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಚುನಾವಣಾ ಆಯೋಗ, ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆ ಮಾಡಿದೆ. ಇದರಿಂದಾಗಿಯೇ ಈ ಮಟ್ಟದ ಹಣ ಸಿಕ್ಕಿದೆ ಎಂಬುದು ಸುಳ್ಳೇನಲ್ಲ. ಅಲ್ಲದೆ, ನೆರೆಯ ರಾಜ್ಯಗಳಿಂದ ಹಣ, ಅಕ್ರಮ ಮದ್ಯ ಸಾಗಾಟ ನಡೆಯಬಹುದು ಎಂಬ ಕಾರಣದಿಂದಾಗಿ 170ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದೆ. ಒಂದು ರೀತಿಯಲ್ಲಿ ಇದು ಉತ್ತಮವಾದ ನಡೆ ಎಂದೇ ಹೇಳಬಹುದು.
ಚುನಾವಣಾ ಹವಾ ಶುರುವಾದ ಮೇಲೆ ರಾಜ್ಯದ ವಿವಿಧಡೆಗಳಲ್ಲಿ ಹಣ, ಮದ್ಯ, ಗೃಹ ಬಳಕೆ ವಸ್ತುಗಳು ಪತ್ತೆಯಾಗುತ್ತಲೇ ಇವೆ. ಈ ಹಿಂದೆಯೇ, ದಾವಣಗೆರೆಯಲ್ಲಿ 16 ಲಕ್ಷ ಮೌಲ್ಯದ ಗೃಹ ಬಳಕೆ ವಸ್ತುಗಳು, ಗದಗದ ಮುಳಗುಂದ ಚೆಕ್‌ಪೋಸ್ಟ್‌ನಲ್ಲಿ 24 ಲಕ್ಷ ರೂ., ಗದಗದಲ್ಲಿ 1.71 ಕೋಟಿ ಮೌಲ್ಯದ ಚಿನ್ನಾಭರಣ, ಚಿಕ್ಕಮಗಳೂರಿನ ತರೀಕೆರೆಯಲ್ಲಿ 2.30 ಕೋಟಿ ರೂ., ಚಿಕ್ಕಮಗಳೂರಿನಲ್ಲಿ 600 ಸೀರೆ, ಮುದ್ದೇಬಿಹಾಳದಲ್ಲಿ 11 ಲಕ್ಷ, ಚಿಕ್ಕಮಗಳೂರಿನಲ್ಲಿ 150 ಕ್ವಿಂಟಲ್ ಅಕ್ಕಿ, ಶಿವಮೊಗ್ಗದಲ್ಲಿ ಗೃಹ ಬಳಕೆ ವಸ್ತುಗಳು, ಧಾರವಾಡದಲ್ಲಿ 50 ಲಕ್ಷ ರೂ., ಗಂಗಾವತಿಯಲ್ಲಿ 60 ಲಕ್ಷ, ಚಾಮರಾಜನಗರದಲ್ಲಿ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗಷ್ಟೇ ಉಡುಪಿಯಲ್ಲೂ 20 ಲಕ್ಷ ರೂ. ಹಣ ಪತ್ತೆಯಾಗಿತ್ತು.
ಇನ್ನು ಚುನಾವಣಾ ದಿನಾಂಕ ಘೋಷಣೆಯಾಗಿ, ಆಯಾ ಪಕ್ಷಗಳು ಕ್ಷೇತ್ರಗಳಿಗೆ ತಮ್ಮತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿದ ಮೇಲೆ ಇಂಥ ಆಮಿಷ ಸಂಗತಿಗಳು ಹೆಚ್ಚಳವಾಗುವ ಎಲ್ಲ ಸಾಧ್ಯತೆಗಳಿವೆ. ಗೆಲ್ಲುವ ಸಲುವಾಗಿ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಇಂಥವುಗಳ ಮೊರೆ ಹೋಗಿಯೇ ಹೋಗುತ್ತಾರೆ. ಹೀಗಾಗಿ, ಚುನಾವಣಾ ಆಯೋಗ ಇಂಥ ಕೇಸುಗಳ ಮೇಲೆ ಹದ್ದಿನ ಕಣ್ಣಿಡಬೇಕು. ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಹಣದ ಓಡಾಟ ಮೇಲಾಗಬಾರದು. ಮದ್ಯ, ಹಣದ ಆಮಿಷವಿಲ್ಲದೇ ಚುನಾವಣೆ ನಡೆಯಲು ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕೆ ಬೇಕಾದಂತೆ ಪೊಲೀಸರ ಸಹಾಯ ಪಡೆಯಬೇಕು. ಅಧಿಕಾರಿಗಳು ಯಾರೊಬ್ಬರ ಪ್ರಭಾವಕ್ಕೆ ಮಣಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ. ಮುಂದಿನ ದಿನಗಳಲ್ಲಿ ಈ ರೀತಿ ಹಣ ಹಂಚಿಕೆ ಮಾಡುವ ಅಥವಾ ಉಡುಗೊರೆಗಳನ್ನು ನೀಡುವಂಥ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದಲೇ ಅನರ್ಹ ಮಾಡುವಂಥ ಕಾನೂನು ಜಾರಿಗೆ ತಂದರೆ ಒಳಿತಾಗುತ್ತದೆ.