Advertisement

ಏತ ನೀರಾವರಿ ಯೋಜನೆ ತಾಂತ್ರಿಕ ದೋಷ ಬಗೆಹರಿಸಿ

05:19 PM Jul 24, 2018 | |

ಸಿರಿಗೆರೆ: ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯ ಭರಮಸಾಗರದ ದೊಡ್ಡಕೆರೆ, ಸಣ್ಣಕೆರೆ ಮತ್ತು ಎಮ್ಮೆಹಟ್ಟಿ ಗ್ರಾಮದ ಕೆರೆಗಳಿಗೆ ಹರಿಹರ ಸಮೀಪದ ರಾಜನಹಳ್ಳಿ ಏತ ನೀರಾವರಿ ಯೋಜನೆಯಡಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಅದಕ್ಕೆ ಅಧಿಕೃತವಾಗಿ ಚಾಲನೆ ನೀಡುವ ಸಂಬಂಧ ಮಾಜಿ ಸಚಿವ ಎಚ್‌. ಆಂಜನೇಯ ನೇತೃತ್ವದಲ್ಲಿ ಭರಮಸಾಗರ ಕೆರೆಗಳ ವ್ಯಾಪ್ತಿಯ ರೈತ ಮುಖಂಡರು ತರಳಬಾಳು ಮಠದ ಸದ್ಧರ್ಮ ನ್ಯಾಯಪೀಠದಲ್ಲಿ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರಿಗೆ ಸೋಮವಾರ ಮನವಿ ಸಲ್ಲಿಸಿದರು.

Advertisement

ಭರಮಸಾಗರ ಹಾಗೂ ಎಮ್ಮೆಹಟ್ಟಿ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ದಾವಣಗೆರೆ ಹಾಗೂ ಜಗಳೂರು ತಾಲೂಕುಗಳ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಮಂಜೂರಾಗಿತ್ತು. ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ತರಳಬಾಳು ಜಗದ್ಗುರುಗಳು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿ ಯೋಜನೆ ಕಾರ್ಯಗತಗೊಳ್ಳುವಂತೆ ಮಾಡಿದ್ದರು. ಆದರೆ ಜಗಳೂರು ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಫಲವಾಗದೆ ಮಠದ ವಾರ್ಷಿಕ ಆಚರಣೆಯಾದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನೂ ನಡೆಸದೆ ಒಂದು ವರ್ಷ ಮುಂದೂಡಿದ್ದರು. ನಂತರ ಕೆರೆಗಳಿಗೆ ನೀರು ಬಂದಿತಾದರೂ ತಾಂತ್ರಿಕ ದೋಷಗಳ ಕಾರಣದಿಂದಾಗಿ ಇನ್ನೂ ಈ ಯೋಜನೆ ವ್ಯಾಪ್ತಿಯ ಎಲ್ಲಾ ಕೆರೆಗಳಿಗೂ ನೀರು ಸಮರ್ಪಕವಾಗಿ ಹರಿದು ಬರುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ತಾಂತ್ರಿಕ ದೋಷಗಳು ಸರಿಯಾಗದೆ ಅಧಿಕೃತವಾಗಿ ಚಾಲನೆ ನೀಡುವುದು ಬೇಡ. ಈ ಯೋಜನೆಯಡಿ ಬರುವ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಚಾಲನೆ ನೀಡಿದರೆ ರೈತರು ಮೊಗದಲ್ಲಿ ಮಂದಹಾಸ ಮೂಡುತ್ತದೆ. ಆದ್ದರಿಂದ ಇದೇ ತಿಂಗಳು 28 ರಂದು ಸಿರಿಗೆರೆ ಮಠದಲ್ಲಿ ಭರಮಸಾಗರ, ದಾವಣಗೆರೆ ಹಾಗೂ ಜಗಳೂರು ಕೆರೆಗಳ ವ್ಯಾಪ್ತಿಯ ರೈತರ ಸಭೆ
ಕರೆಯುವಂತೆ ತರಳಬಾಳು ಜಗದ್ಗುರುಗಳು ಸೂಚಿಸಿದರು.

ಸಭೆಯಲ್ಲಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು, ಇಂಜಿನಿಯರ್‌ಗಳು, ಜನಪ್ರತಿನಿಧಿಗಳು ಭಾಗವಹಿಸಬೇಕು. ಸಭೆಯಲ್ಲಿನ ಅಭಿಪ್ರಾಯ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರಮಸಾಗರ ವ್ಯಾಪ್ತಿಯ 33 ಕೆರೆಗಳಿಗೆ ರಾಜನಹಳ್ಳಿ ಏತನೀರಾವರಿ ಯೋಜನೆಯಡಿ ನೀರು ತುಂಬಿಸಲು 250 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಈ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಡಿಪಿಆರ್‌ ಆಗಿದ್ದು ಸರ್ವೆ ಕಾರ್ಯವನ್ನು ಖಾಸಗಿ ಸಂಸ್ಥೆಯೊಂದರಿಂದ ಮಾಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಗೆ ಮಂಜೂರಾಗಿರುವ 250 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸುವ ಮಂಜೂರಾತಿ ಪತ್ರವನ್ನು ಪಡೆದುಕೊಳ್ಳುವಂತೆ ಮಾಜಿ ಸಚಿವ ಆಂಜನೇಯ ಅವರಿಗೆ ಸೂಚಿಸಿದರು.

 ಈ ಯೋಜನೆ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಲ್ಲಿ ಈಗಾಗಲೇ ಚರ್ಚೆ ನಡೆಸಲಾಗಿದೆ. ಅವರು ಹಣ ಬಿಡುಗಡೆ ಮಾಡುತ್ತಾರೆಂಬ ವಿಶ್ವಾಸವಿದೆ ಎಂದ ಆಂಜನೇಯ, ತಾವು ಕಾರ್ಯಕ್ರಮದ ದಿನಾಂಕ ಸೂಚಿಸಿದರೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುವ ಯೋಚನೆ ಇದೆ ಎಂದರು.

Advertisement

ಈ ಸಂದರ್ಭದಲ್ಲಿ ಭರಮಸಾಗರದ ಮುಖಂಡ ಎಸ್‌.ಎಂ.ಎಲ್‌. ತಿಪ್ಪೇಸ್ವಾಮಿ, ಚೌಲಿಹಳ್ಳಿ ಶಶಿ ಪಾಟೀಲ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಹನುಮಂತಪ್ಪ, ಜಿ.ಬಿ. ತೀರ್ಥಪ್ಪ, ನಾರಪ್ಪ, ಈಶಣ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next