Advertisement

ಗರ್ಭಿಣಿಯರ ಆರೋಗ್ಯ ಕಾಳಜಿ ವಹಿಸಿ

05:03 PM Aug 05, 2022 | Team Udayavani |

ಯಾದಗಿರಿ: ಹೆರಿಗೆ ಪೂರ್ವ ಮತ್ತು ನಂತರದಲ್ಲಿ ವಿಶೇಷ ಆರೋಗ್ಯ ಕಾಳಜಿ ವಹಿಸಿ ತಾಯಿ ಮರಣ ಪ್ರಮಾಣ “ಶೂನ್ಯ’ ಆಗಿರುವಂತೆ ನಿಗಾವಹಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಯಂದಿರ ಮರಣದ ಪ್ರಗತಿ ಪರಿಶೀಲನಾ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಗರ್ಭಿಣಿ ಮರಣ ಹೊಂದುವುದು ಆತಂಕಕಾರಿ ವಿಷಯ. ಪ್ರಸವ ಪೂರ್ವ ಹಾಗೂ ನಂತರದ ತಾಯಿ ಹಾಗೂ ಮಗುವಿನ ಆರೋಗ್ಯ ರಕ್ಷಣೆಗೆ ಹಾಗೂ ಪೌಷ್ಟಿಕತೆ ಕಾಪಾಡಲು ಸರಕಾರ ವಿಶೇಷ ಅನುದಾನ ನೀಡುತ್ತಿದ್ದು ಅದರ ಸದುಪಯೋಗ ಆಗಬೇಕು. ಜಿಲ್ಲೆಯಲ್ಲಿ ಪ್ರಸವ ಸಮಯದಲ್ಲಿ ಮರಣ ಹೊಂದುವ ಒಂದು ಪ್ರಕರಣವೂ ನಡೆಯಬಾರದು. ಆ ನಿಟ್ಟಿನಲ್ಲಿ ಪ್ರಯತ್ನ ಆಗಬೇಕೆಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ನಿರ್ದೇಶಿಸಿದರು.

ವೈದ್ಯಾಧಿಕಾರಿಗಳು ತಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರ ನಿಗದಿಪಡಿಸಿದ ಸಮಯದವರೆಗೂ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಖಾಲಿ ಇರುವ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು (ಮಹಿಳಾ) ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು. ಎಲ್ಲ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಬಾಲ್ಯ ವಿವಾಹದ ಮಾಹಿತಿಯನ್ನು ತಮಗೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

Advertisement

ಡಾ| ಗುರುರಾಜ ಹಿರೇಗೌಡ, ಡಾ| ಮಲ್ಲಪ್ಪ ಕಣಜಿಕರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ|ನೀಲಮ್ಮ, ಪ್ರಸೂತಿ ತಜ್ಞೆ ಡಾ| ಪ್ರೀತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಧಿಕಾರಿ ಪ್ರಭಾಕರ್‌ ಕವಿತಾಳ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮನೋಹರ್‌ ಪಾಟೀಲ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ವ್ಯವಸ್ಥಾಪಕ ಶಂಕರಾನಂದ ಹಾಗೂ ಇನ್ನಿತರ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಹೆಣ್ಣಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಹಳ್ಳಿ-ಹಳ್ಳಿಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಲಾಗಿದೆ. ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಗರ್ಭಿಣಿಯರ ಕುರಿತು ಪ್ರತಿ ತಿಂಗಳು ತಪಾಸಣೆಯನ್ನು ನಿಯಮಿತವಾಗಿ ಮಾಡಿ, ಪ್ರತಿದಿನ ಮನೆಗೆ ಭೇಟಿ ನೀಡಿ ಆರೋಗ್ಯದ ಕುರಿತು ತಿಳಿವಳಿಕೆ ನೀಡಿ ಅವರವರ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. -ಸ್ನೇಹಲ್‌ ಆರ್‌., ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next