Advertisement

ಕೋವಿಡ್‌ ಸೋಂಕದಂತೆ ಮಕ್ಕಳ ಮೇಲೆ ನಿಗಾವಹಿಸಿ

05:17 PM Jan 13, 2022 | Shwetha M |

ವಿಜಯಪುರ: ಕೋವಿಡ್‌ 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚುವ ಅಪಾಯದ ಕುರಿತು ತಜ್ಞರು ತಿಳಿಸಿದ್ದಾರೆ. ಇದಲ್ಲದೇ ಜಿಲ್ಲೆಯಲ್ಲಿ ಈಗಾಗಲೇ 50 ಮಕ್ಕಳು ಕೋವಿಡ್‌ ಸೋಂಕು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತ ಮಕ್ಕಳಿಗೆ ವೈದ್ಯಕೀಯ ಸೌಲಭ್ಯಕ್ಕೆ ಅಗತ್ಯ ಇರುವ ಸೌಲಭ್ಯಗಳ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್‌ ಮತ್ತು ಬೆಳೆಹಾನಿ ಕುರಿತ ಪರಿಶೀಲನಾ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ಆ ರಾಜ್ಯದಿಂದ ಬರುವರ ಮೇಲೆ ಸರ್ಕಾರ ತೀವ್ರ ಇರಿಸಿದೆ. ಗಡಿಯಲ್ಲಿ ಚೆಕ್‌ಪೋಸ್ಟ್‌ ತೆರೆದಿದ್ದು, ಅಲ್ಲಿಯೇ ಕೋವಿಡ್‌ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಇದರ ಹೊರತಾಗಿ ಕೋವಿಡ್‌ ಮೂರನೇ ಅಲೆ ಬಾಧಿಸದಂತೆ ಅದರಲ್ಲೂ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಅಪಾಯದ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಜಿಲ್ಲಾಡಳಿತದಿಂದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹಳೆ ಡಯಾಲಿಸಿಸ್‌ ವಾರ್ಡ್‌ ಅನ್ನು ಬದಲಾಯಿಸಿ 10 ವೆಂಟಿಲೇಟರ್‌ ಸಹಿತ ಚಿಕ್ಕಮಕ್ಕಳ ತುರ್ತು ಚಿಕಿತ್ಸಾ ನಿಗಾ ಘಟಕ ತೆರೆಯಲಾಗಿದೆ. ಸಿವಿಲ್‌ ಹಾಗೂ ವಿದ್ಯುದೀಕರಣ ಕಾಮಾಗಾರಿ ಅಂತಿಮ ಹಂತದಲ್ಲಿದೆ. 14 ಹಾಸಿಗೆಯ ಎಚ್‌ಡಿಯು ಸಾಮಾನ್ಯ ತೀವ್ರ ನಿಗಾ ಘಟಕ ಸ್ಥಾಪಿಸಲಾಗಿದೆ. 15-18 ವಯಸ್ಸಿನ ಮಕ್ಕಳಿಗೆ ಲಸಿಕಾಕರಣದಲ್ಲಿ ಈಗಾಗಲೇ ಶೇ.50ರಷ್ಟು ಪ್ರಗತಿ ಸಾಧಿಸಲಾಗಿದೆ. ಮಕ್ಕಳ ಲಸಿಕೆಯಲ್ಲಿ ಶೇ.100ರಷ್ಟು ಸಾಧನೆಗೆ ಆಯಾ ಶಾಲೆಗಳ ವರ್ಗ ಶಿಕ್ಷಕರಿಗೆ ಜವಾಬ್ದಾರಿ ನೀಡಬೇಕು ಎಂದರು.

ಜನವರಿ 1ರಿಂದ ಈ ವರೆಗೆ 15,842 ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, 180 ಜನರಲ್ಲಿ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇ1.14ರಷ್ಟಿದೆ. ಜಿಲ್ಲೆಯಲ್ಲಿ ಸಕ್ರೀಯ 160 ಸಕ್ರೀಯ ಪ್ರಕರಣಗಳಲ್ಲಿ 12 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರರು ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದಾರೆಂದು ವಿವರಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಮ್ಯಾನಿಫೋಲ್ಡ್‌ನಿಂದ ತುರ್ತು ನಿಗಾ ಘಟಕ 3 ಘಟಕಗಳಿಗೆ ಸರಾಗವಾಗಿ ಆಮ್ಲಜನಕ ಪೂರೈಕೆ ಪ್ರತ್ಯೆಕ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದ ಬಳಿ 642 ಆಕ್ಸಿಜನ್‌ ಕಾನ್ಸೆಂಟ್ರೇಟರ್‌ ಗಳನ್ನು ಹಂಚಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲಾಡಳಿತದ ಜಿಲ್ಲಾ ತಜ್ಞರ ಸಮಿತಿ, ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ನಡೆಸಲಾಗಿದೆ. ಸೋಂಕಿತರಿಗಾಗಿ ಶೇ.75 ರಷ್ಟು ಹಾಸಿಗೆಗಳನ್ನು ಸೊಂಕಿತರಿಗೆ ಮೀಸಲಿಡಲಾಗಿದೆ ಎಂದರು.

Advertisement

ಆಮ್ಲಜನಕ ಘಟಕಗಳ ನಿರ್ಮಾಣ

ಜಿಲ್ಲೆಯಲ್ಲಿ ಒಟ್ಟಾರೆಯಾಗಿ 5 ಆಮ್ಲಜನಕ ಉತ್ಪಾದನಾ ಘಟಕಗಳು ಮಂಜೂರಾಗಿದ್ದು ಕಾಮಗಾರಿ ಪೂರ್ಣಗೊಂಡಿವೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಅಳವಡಿಸಲಾಗಿರುವ 1000 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಘಟಕದ ನಿರ್ವಹಣೆಯಲ್ಲಿ ತಾಂತ್ರಿಕ ತೊಂದರೆಗಳು ಕಂಡುಬಂದಿವೆ. ಇದನ್ನು ಶೀಘ್ರವಾಗಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಶಾಸಕ ರಮೇಶ ಭೂಸನೂರು, ವೂಡಾ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಪಂ ಸಿಇಒ ಗೋವಿಂದರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next