Advertisement

ಸಂತೋಷ್‌ಜೀ ಆ್ಯಂಡ್‌ ಟೀಂ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ

12:57 PM Apr 28, 2017 | Team Udayavani |

ದಾವಣಗೆರೆ: ಸಂಘ ಪರಿವಾರದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಂತೋಷ್‌ ಜೀ ವಿರುದ್ಧ ರಾಷ್ಟ್ರೀಯ ನಾಯಕರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಸಂಘ ಪರಿವಾರ ತಾಯಿ ಇದ್ದಂತೆ. 

Advertisement

ನನ್ನಂತಹ ಸಾವಿರಾರು ನಾಯಕರನ್ನು ಬೆಳೆಸುತ್ತಿರುವ ಪರಿವಾರದ ಬಗ್ಗೆ ಅಪಾರ ಗೌರವ ಇದೆ. ರಾಜ್ಯ ಬಿಜೆಪಿ ತಮ್ಮ ಹಿಡಿತದಲ್ಲಿರಬೇಕು ಹಾಗೂ ಮುಖ್ಯಮಂತ್ರಿ ಆಗಬೇಕು ಎಂಬ ಹಗಲುಗನಸು ಕಾಣುತ್ತಿರುವ ಸಂತೋಷ್‌ಜೀ ಸಂಘ ಪರಿವಾರದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ನಡೆಯುತ್ತಿರುವ ವಿದ್ಯಮಾನದ ಹಿಂದೆ ಸಂತೋಷ್‌ ಜೀ ಕೂಟವೇ ಇದೆ.

ಅವರ ಬಗ್ಗೆ ಪಕ್ಷದ ರಾಷ್ಟ್ರೀಯ ಮುಖಂಡರಿಗೆ ತಿಳಿಸಲಾಗುವುದು ಮತ್ತು ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಗ್ರಾಪಂ ಸದಸ್ಯನಾಗಲಿಕ್ಕೂ ಲಾಯಕ್ಕಲ್ಲದ ದತ್ತಾತ್ರಿ ಎಂಬುವರನ್ನು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷನನ್ನಾಗಿ ಮಾಡಲಿಲ್ಲ ಎಂಬ ಏಕೈಕ ಕಾರಣಕ್ಕೆ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್‌ ಬೆಂಕಿ ಹಚ್ಚಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ಯಡಿಯೂರಪ್ಪ ಸಿಎಂ ಆಗಬಾರದು. ಮಿಷನ್‌ 150+ ಕೈಗೂಡಬಾರದು. 80-90 ಸ್ಥಾನ ಬರಬೇಕು ಎಂಬ ಉದ್ದೇಶದಿಂದ ಜೆಡಿಎಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಭಾನುಪ್ರಕಾಶ್‌ ಜೊತೆಗೆ ರಾಜ್ಯ ಕಾರ್ಯದರ್ಶಿ ನಿರ್ಮಲ್‌ಕುಮಾರ್‌ ಸುರಾನರನ್ನು ಪಕ್ಷದಿಂದ ಉಚ್ಚಾಟಿಸಲು ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ರದ ಮೂಲಕ ಮನವಿ ಮಾಡುವುದಾಗಿ ತಿಳಿಸಿದರು.

ದಾವಣಗೆರೆ ಜಿಲ್ಲೆಯ ಮಹಾನ್‌, ಅಪ್ರತಿಮ, ಬುದ್ಧಿವಂತ ನಾಯಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಸೋಮಣ್ಣ ಬೇವಿನಮರದ, ನಂದೀಶ್‌, ಗಿರೀಶ್‌, ಸಿದ್ದರಾಮಣ್ಣ ಅವರಂತವರೆಲ್ಲಾ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಾರೆ. ಅವರು ಹೇಳಿದಂತೆ ಕೇಳುವರು, ತಾಳಕ್ಕೆ ತಕ್ಕಂತೆ ಕುಣಿಯುವರು ಅಧ್ಯಕ್ಷರಾದರೆ ಮಾತ್ರ ಪಕ್ಷ ಸಂಘಟನೆ. ಅದೇ ಯಡಿಯೂರಪ್ಪನವರು ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರನ್ನ ನೇಮಿಸಿದರೆ ಅದು ಸಂಘಟನೆ ಅಲ್ಲ.

Advertisement

ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವರನ್ನು ಜಿಲ್ಲಾ ಅಧ್ಯಕ್ಷ, ರಾಜ್ಯ ಪದಾಧಿಕಾರಿಯಾಗಿ ನೇಮಿಸಲಿಲ್ಲ ಎನ್ನುವ ಕಾರಣಕ್ಕೆ ಪಕ್ಷ ಉಳಿಸಿ ಅಭಿಯಾನ ಮಾಡುತ್ತಾರೆ. ಯಡಿಯೂರಪ್ಪ ವಿರುದ್ಧ ಮಾತನಾಡುವರಲ್ಲಿ ಕೆಲವರು ಗ್ರಾಮ ಪಂಚಾಯತ್‌ ಸದಸ್ಯರಾಗಲಿಕ್ಕೂ ನಾಲಾಯಕ್‌ ಎಂದು ಮೂದಲಿಸಿದರು.

ಈಚೆಗೆ ನಡೆದ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಯಡಿಯೂರಪ್ಪನವರ ಕೈ ಮೇಲಾಗುತ್ತದೆ ಎಂಬ ಕಾರಣಕ್ಕೆ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಬಗ್ಗೆ ಬಿಜೆಪಿಯವರೇ ವ್ಯವಸ್ಥಿತ ಕೆಲಸ ಮಾಡಿದರು. ಅಂತಹವರು ಶಿಸ್ತು, ನೀತಿ, ಪಕ್ಷ ಸಂಘಟನೆಯ ಬಗ್ಗೆ ಮಾತನಾಡುತ್ತಾರೆ.

ಇಂತಹ ಕುತಂತ್ರ ರಾಜಕಾರಣ ನಡೆಯುವುದಿಲ್ಲ. ಯಡಿಯೂರಪ್ಪ ಬಗ್ಗೆ ಇಲ್ಲಸಲ್ಲದ  ಆರೋಪ ಮಾಡುವುದನ್ನು ಮುಂದುವರೆಸಿದ್ದಲ್ಲಿ ನಾವು ಹೋರಾಟಕ್ಕಿಳಿಯಬೇಕಾದಿತು ಎಂದರು. ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದ ಕಟ್ಟಿರುವ ಬಿಜೆಪಿಯನ್ನು ಕೆಲವರು ತಮ್ಮಸ್ವಾರ್ಥಕ್ಕೆ ಬಲಿಕೊಡಲು ಹೊರಟಿದ್ದಾರೆ.  

ಹಡಗನ್ನು ಮುಳುಗಿಸಲು ಮುಂದಾದರೆ ನಾವೂ ಮುಳುಗುತ್ತೇವೆ ಎಂಬುದನ್ನೇ ಮರೆತಿದ್ದಾರೆ.  ಕೆ.ಎಸ್‌. ಈಶ್ವರಪ್ಪ ಅವರನ್ನು ಮುಂದಿಟ್ಟುಕೊಂಡು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಪಕ್ಷ ಉಳಿಸಿ ಎನ್ನುವರಿಗೆ ಪರ್ಯಾಯ ಸಮಾವೇಶದ ಅವಶ್ಯಕತೆ,

ಬೆನ್ನಿಗೆ ಚೂರಿ ಹಾಕುವಂತಹ ಅವಶ್ಯಕತೆಯೇನಾದರೂ ಏನಿತ್ತು ಎಂದು ಖಾರವಾಗಿ ಪ್ರಶ್ನಿಸಿದ ಅವರು ಯಾವುದೇ ಕಾರಣಕ್ಕೂ ಕುತಂತ್ರ ರಾಜಕಾರಣಕ್ಕೆ ಪಕ್ಷವನ್ನು ಬಲಿಕೊಡಲು ಬಿಡುವುದೇ ಇಲ್ಲ ಎಂದು ತಿಳಿಸಿದರು. ಜಿಪಂ ಸದಸ್ಯ ಎಂ.ಆರ್‌. ಮಹೇಶ್‌, ಮುಖಂಡರಾದ ನರಸಗೊಂಡನಹಳ್ಳಿ ರವೀಂದ್ರನಾಥ್‌, ಕನಕದಾಸ್‌, ಮಾರುತಿನಾಯ್ಕ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next