Advertisement

ಕೆಎಫ್‌ಡಿ ಲಸಿಕೆ ಪೂರೈಕೆಗೆ ಕ್ರಮ ಕೈಗೊಳ್ಳಿ

11:40 AM Feb 16, 2019 | Team Udayavani |

ಕೊಪ್ಪ: ತಾಲೂಕಿನ ಹೇರೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಾಡುಗಾರಿನಲ್ಲಿ ವ್ಯಕ್ತಿಯೊಬ್ಬರ ರಕ್ತದ ಮಾದರಿಯಲ್ಲಿ ಕೆಎಫ್‌ಡಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಾಲೂಕಿಗೆ ಅಗತ್ಯವಿರುವ ಕೆಎಫ್‌ಡಿ ಲಸಿಕೆ ಪೂರೈಕೆಗೆ ತಕ್ಷಣ ಕ್ರಮವಹಿಸುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ತಾಪಂ ಅಧ್ಯಕ್ಷೆ ಜಯಂತಿ ನಾಗರಾಜ್‌ ಸೂಚಿಸಿದರು.  ಶುಕ್ರವಾರ ನಡೆದ ತಾಲೂಕು ಪಂಚಾಯತ್‌ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ಸೂಚನೆ ನೀಡಿದರು.

Advertisement

ಹೇರೂರು ಭಾಗದ ಸದಸ್ಯ ಎನ್‌.ಕೆ. ಉದಯ ವಿಷಯ ಪ್ರಸ್ತಾಪಿಸಿ ಹೇರೂರು ಭಾಗದಲ್ಲಿ ಇತ್ತೀಚೆಗೆ ಮಂಗನ ಕಾಯಿಲೆ ಸೋಂಕು ಇರುವ ಉಣುಗು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಮಹೇಂದ್ರ ಕಿರೀಟಿ, ತಾಲೂಕಿನ ಹೇರೂರಿನ ಹಾಡುಗಾರು ಭಾಗದ ಇಬ್ಬರ ರಕ್ತದ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ ಒಬ್ಬರಿಗೆ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿದೆ. 

ಇನ್ನೊಬ್ಬರ ಫಲಿತಾಂಶ ಇನ್ನೂ ಬರಬೇಕಿದೆ. ಈಗಾಗಲೇ ತಾಲೂಕಿನ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಲಸಿಕೆ ನೀಡಲು ತೀರ್ಮಾನಿಸಿ 5000 ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ. ಈ ವರೆಗೂ ಲಸಿಕೆ ಪೂರೈಕೆಯಾಗಿಲ್ಲ. ಇನ್ನೂ ಎರಡು ಮೂರು ದಿನ ವಿಳಂಬವಾಗಬಹುದು. ಬೇರೆ ಎಲ್ಲೂ ಈ ಲಸಿಕೆ ಲಭ್ಯವಿಲ್ಲದ ಕಾರಣ ಶಿವಮೊಗ್ಗದಿಂದ ಪೂರೈಕೆಯಾಗುವವರೆಗೆ ಕಾಯಬೇಕಿದೆ ಎಂದರು. 

ಈಗಾಗಲೇ ತಾಲೂಕಿನಲ್ಲಿ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿರುವುದರಿಂದ ತಾಲೂಕಿನ ಜನತೆ ಆತಂಕದಲ್ಲಿದ್ದಾರೆ. ಕೂಡಲೇ ಲಸಿಕೆ ತರಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಭ ಧೋರಣೆ ಸರಿಯಲ್ಲ. ಕಾಡು ಪ್ರದೇಶದ ಜನರಿಗೆ ಡಿಎಂಪಿ ಎಣ್ಣೆ ವಿತರಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಆಯುಷ್ಮಾನ್‌ ಭಾರತ್‌ ಮತ್ತು ಕರ್ನಾಟಕ ಆರೋಗ್ಯ ಕಾರ್ಡ್‌ಗಳನ್ನು ಒಟ್ಟು ಸೇರಿಸಲಾಗಿದ್ದು, ಬಿಪಿಎಲ್‌ ಕುಟುಂಬ ಸದಸ್ಯರಿಗೆ 5ಲಕ್ಷ ರೂ. ವರೆಗೆ ವೈದ್ಯಕೀಯ ಚಿಕಿತ್ಸೆ ಉಚಿತವಾಗಿರುತ್ತದೆ. ಎಪಿಎಲ್‌ ಕುಟುಂಬಗಳಿಗೆ ಶೇ. 30ರಷ್ಟು ರಿಯಾಯತಿ ಇರುತ್ತದೆ ಎಂದು ಆರೋಗ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸದಸ್ಯ ಎಚ್‌.ಎಸ್‌. ಪ್ರವೀಣ ಕುಮಾರ್‌ ವಿಚಾರ ಪ್ರಸ್ತಾಪಿಸಿ ಅಸಗೋಡು ಪಂಚಾಯತ್‌ ವ್ಯಾಪ್ತಿಯ ಬೇರುಕೊಡಿಗೆ ನಿವಾಸಿಗಳಾದ ದಲಿತ ಸಮುದಾಯದ ಗೌರಮ್ಮನವರು 15 ವರ್ಷಗಳ ಹಿಂದೆ ಶಿವಮ್ಮ ಎಂಬವರು 12 ವರ್ಷಗಳ ಹಿಂದೆ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Advertisement

ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಅಲ್ಲಿನ ಪಿಡಿಒ ಅರ್ಜಿಗಳನ್ನು 3 ಸಲ ವಜಾ ಮಾಡಿದ್ದಾರೆ. ಕಾರಣ ಏನು ತಿಳಿಸಿ? ಇಲ್ಲದಿದ್ದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆಯ ಶೇಷಮೂರ್ತಿ, ಅರ್ಜಿಗಳ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಅಸಗೋಡು ಪಂಚಾಯತ್‌ ಪಿಡಿಒ ವಿರುದ್ಧ ತುಂಬಾ ದೂರುಗಳಿದ್ದು ಜಿಲ್ಲಾಧಿಕಾರಿಗಳು ಅವರನ್ನು ಬೇರೆಡೆ ವರ್ಗಾವಣೆ ಮಾಡಿದ್ದಾರೆ. ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ. ಇಲಾಖೆ ವತಿಯಿಂದ ಲೋಪವಾಗಿದ್ದರೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕೃಷಿ ಅಧಿಕಾರಿಗಳು ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಉಳಿದಂತೆ ಇತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.  ಉಪಾಧ್ಯಕ್ಷೆ ಜೆ.ಎಸ್‌. ಲಲಿತಾ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ಕೆ. ಕಿರಣ, ಸದಸ್ಯರಾದ ಮಂಜುಳಾ ಮಂಜುನಾಥ್‌, ಬಿ.ಕೆ. ಕೃಷ್ಣಯ್ಯ ಶೆಟ್ಟಿ, ಮಧುರಾ ಶಾಂತಪ್ಪ, ಬಿ. ಸುಧಾಕರ್‌, ಇಂದಿರಾ ಉಮೇಶ್‌, ಭವಾನಿ ಆರ್‌. ಹೆಬ್ಟಾರ್‌, ಇಒ ಕೆ. ಗಣಪತಿ ಉಪಸ್ಥಿತರಿದ್ದರು.
 
ಈಗಾಗಲೇ ತಾಲೂಕಿನಲ್ಲಿ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿರುವುದರಿಂದ ತಾಲೂಕಿನ ಜನತೆ ಆತಂಕದಲ್ಲಿದ್ದಾರೆ. ಕೂಡಲೇ ಲಸಿಕೆ ತರಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಭ ಧೋರಣೆ ಸರಿಯಲ್ಲ. ಕಾಡು ಪ್ರದೇಶದ ಜನರಿಗೆ ಡಿಎಂಪಿ
ಎಣ್ಣೆ ವಿತರಿಸಬೇಕು.
 ಜಯಂತಿ ನಾಗರಾಜ್‌, ತಾಪಂ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next