Advertisement

ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ

09:54 AM Mar 08, 2019 | |

ಶಿವಮೊಗ್ಗ: ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲಿ ಸಹ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾ ನೋಡೆಲ್‌ ಕಾರ್ಯದರ್ಶಿ ಚಕ್ರವರ್ತಿ ಮೋಹನ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

Advertisement

 ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ. ಬೇಸಿಗೆಯಲ್ಲಿ 216 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಬಹುದು ಎಂದು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಕ್ರಮಗಳನ್ನು ಕೈಗೊಳ್ಳಬೇಕು. ಪೈಪ್‌
ಲೈನ್‌ ಅಳವಡಿಕೆ, ಕುಡಿಯುವ ನೀರಿನ ಮೂಲಗಳನ್ನು ಗುರುತಿಸುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳಬೇಕು. 

ಶಿವಮೊಗ್ಗ ನಗರದಲ್ಲಿ ಕೆಲವು ಏರಿಯಾಗಳಲ್ಲಿ 24*7 ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಲಾಗಿದ್ದರೂ, ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂಬ ದೂರುಗಳಿವೆ. ಇದನ್ನು ಸರಿಪಡಿಸಬೇಕು ಎಂದು ಹೇಳಿದರು.

 ಬೆಳೆಯುತ್ತಿರುವ ಶಿವಮೊಗ್ಗ ನಗರದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನೀರಿನ ಮರು ಬಳಕೆ, ತ್ಯಾಜ್ಯ ನೀರು ಸಂಸ್ಕರಣೆ ಇತ್ಯಾದಿಗಳ ಕುರಿತು ಯೋಜನೆ ಸಿದ್ಧಪಡಿಸಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅನುಷ್ಠಾನಗೊಳಿಸಬಹುದಾಗಿದೆ ಎಂದು ಅವರು ಹೇಳಿದರು. 

ಬರ ಪರಿಹಾರ: ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸೊರಬ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ತಲಾ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ತಾಲೂಕುಗಳಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಅವರು ತಿಳಿಸಿದರು.

Advertisement

ಅಂಗನವಾಡಿಗಳಿಗೆ ನಿವೇಶನ: ಎಲ್ಲಾ ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ನಡೆಯಬೇಕಾಗಿದ್ದು, ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸಬೇಕು. ಪ್ರಸ್ತುತ 1902 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿದ್ದು, 200 ಅಂಗನವಾಡಿಗಳು ನಿರ್ಮಾಣ ಹಂತದಲ್ಲಿವೆ.

252 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, 102 ಅಂಗನವಾಡಿಗಳಿಗೆ ನಿವೇಶನ ಗುರುತಿಸಲಾಗಿದೆ. ಇನ್ನುಳಿದ ಅಂಗನವಾಡಿಗಳಿಗೆ ನಿವೇಶನ ಗುರುತಿಸುವ ಕಾರ್ಯವನ್ನು ಆದಷ್ಟು ಬೇಗನೆ ಮಾಡುವಂತೆ ಅವರು ಸೂಚಿಸಿದರು. ವೃದ್ಧಾಪ್ಯ ವೇತನ ಇತ್ಯಾದಿ ಸೌಲಭ್ಯಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ಅಂಗವಿಕಲ ಅಭ್ಯರ್ಥಿಗಳಿಗೆ ನೆರವು ನೀಡುವಂತೆ ಅವರು ಸೂಚನೆ ನೀಡಿದರು. 
 
ಸಾಲಮನ್ನಾ ವಿವರ: ಜಿಲ್ಲೆಯಲ್ಲಿ ಸಾಲಮನ್ನಾ ಯೋಜನೆಯಡಿ 33886 ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಈ ವರೆಗೆ 5004 ಫಲಾನುಭವಿಗಳ 2170.89 ಲಕ್ಷ ರೂ. ಮೊತ್ತದ ಸಾಲ ಮನ್ನಾ ಮಾಡಲಾಗಿದೆ. ಹಂತ ಹಂತವಾಗಿ ಸಾಲ ಮನ್ನಾ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಸಂಪೂರ್ಣ ಸಾಲಮನ್ನಾಕ್ಕಾಗಿ 13938.59 ಲಕ್ಷ ರೂ. ಅನುದಾನ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರು ಮಾಹಿತಿ ನೀಡಿದರು.  ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವರಾಮೇ ಗೌಡ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next