ಪಾಂಡವಪುರ: ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಿರುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಅಳವಡಿಸಿರುವ ಸೋಪಾನ ಕಟ್ಟೆಗಳ ಚಪ್ಪಡಿ ಕಲ್ಲುಗಳು ಸಂಪೂರ್ಣ ಹಾಳಾಗಿದ್ದು, ಉಪಯೋಗಕ್ಕೆ ಬಾರದಂತಹ ದುಸ್ಥಿತಿಗೆ ತಲುಪಿದೆ.
ವಿಶ್ವೇಶ್ವರಯ್ಯ ನಾಲೆ ಪಟ್ಟಣದ ಮೂಲಕ ಹಾದು ಹೋಗಿರುವ ಕೃಷ್ಣನಗರ ಬಡಾವಣೆ ಸಮೀಪ ಸೋಪಾನ ಕಟ್ಟೆ, ಉದ್ಯಾನವನ ಹಿಂಭಾಗ ಸೋಪಾನ ಕಟ್ಟೆ, ಶಾಂತಿನಗರ ಬಡಾವಣೆ, ಶನಿದೇವರ ದೇವಸ್ಥಾನ, ಬನಘಟ್ಟ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪ ಒಳಗೊಂಡಂತೆ ಅನೇಕ ಸ್ಥಳದಗಳಲ್ಲಿ ವಿವಿಧ ಸೋಪಾನ ಕಟ್ಟೆಗಳು ಸಂಪೂರ್ಣ ಹಾಳಾಗಿವೆ.
ಪಟ್ಟಣದಿಂದ ಬನಘಟ್ಟದವರೆಗೆ ಸುಮಾರು ಮೂರು ಕಿ.ಮೀ. ದೂರದ ವಿಶ್ವೇಶ್ವರಯ್ಯ ನಾಲಾ ವ್ಯಾಪ್ತಿಯಲ್ಲಿ ಅನೇಕ ಸೋಪಾನ ಕಟ್ಟೆಗಳು ಉಪಯೋಗಕ್ಕೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಪಾನ ಕಟ್ಟೆಗೆ ಅಳವಡಿಸಿರುವ ಚಪ್ಪಡಿ ಕಲ್ಲು, ಸೈಜು ಕಲ್ಲುಗಳು ಕಿತ್ತು ಹಾಳಾಗಿವೆ. ಕೃಷ್ಣನಗರ ಬಡಾವಣೆ ಸಮೀಪದ ಸೋಪಾನೆ ಕಟ್ಟೆ ಸಂಪೂರ್ಣ ಹಾಳಾಗಿದೆ.
ಜಾರಿದರೆ ಸಾವೇ ಗತಿ: ಚಪ್ಪಡಿ ಕಲ್ಲು ಕಿತ್ತುಕೊಂಡು ಎಲ್ಲಂದರಲ್ಲಿ ಉರುಳಿ ಬಿದ್ದಿವೆ. ಕೆಲ ಸೈಜು ಕಲ್ಲು ಹಾಗೂ ಚಪ್ಪಡಿ ಕಲ್ಲುಗಳು ಕಳ್ಳತನವಾಗಿ ಸೋಪಾನ ಕಟ್ಟೆಯಲ್ಲಿ ನಾಲೆಗೆ ಇಳಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಹಿಳೆಯರು ಬಟ್ಟೆ ತೊಳೆಯಲು ಕಷ್ಟವಾಗಿದೆ. ವಿಶ್ವೇಶ್ವರಯ್ಯ ನಾಲೆಗೆ ನೀರು ತುಂಬಿ ಹರಿಯುತ್ತಿದ್ದಾಗ ಸೋಪಾನ ಕಟ್ಟೆ ನೀರಿನಲ್ಲಿ ಮುಳುಗಿರುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಅಪರಿಚಿತರು ಸೋಪಾನ ಕಟ್ಟೆಗೆ ಇಳಿಯಲು ಕಾಲಿಟ್ಟರೆ ಜಾರಿ ನಾಲೆಯಲ್ಲಿ ಮುಳುಗುವ ಸಾಧ್ಯತೆಗಳು ಇವೆ.
ಸೋಪಾನಕಟ್ಟೆಗಿಳಿದರೆ ದುರಂತ: ಪಟ್ಟಣದ ಮಹಿಳೆಯರು ಸೇರಿದಂತೆ ನಿವಾಸಿಗಳು ಸೋಪಾನ ಕಟ್ಟೆಯಲ್ಲಿ ಬಟ್ಟೆ ಸ್ವಚ್ಛಗೊಳಿಸಲು ಹಾಗೂ ಜಾನುವಾರುಗಳಿಗೆ ನೀರು ಕುಡಿಯಲು ಸೋಪಾನ ಕಟ್ಟೆ ಮೆಟ್ಟಿಲು ಅಂತ ತಿಳಿದು ಇಳಿದು ಜಾರಿ ಬಿದ್ದಿ ನಾಲೆ ಮುಳುಗಿ ಹೋಗಿರುವ ಘಟನೆಗಳೂ ಇವೆ. ಜತೆಗೆ ವಿಶ್ವೇಶ್ವರಯ್ಯ ನಾಲೆಯ ಪಕ್ಕದಲ್ಲಿ ಟಿಎಪಿಸಿಎಂಎಸ್ ಕಲ್ಯಾಣ ಮಂಟಪವಿದೆ. ದಿನನಿತ್ಯ ಮದುವೆ ಮತ್ತಿತರೆ ಕಾರ್ಯಕ್ರಮಗಳು ನಡೆಯುತ್ತವೆ. ಮದುವೆಗೆ ಬಂದಿರುವ ಜನರು ಸೋಪಾನ ಕಟ್ಟೆಯಲ್ಲಿ ಇಳಿಯಲು ಪ್ರಯತ್ನಿ ಸುತ್ತಾರೆ. ಇಂತಹ ಸಂದರ್ಭದಲ್ಲೂ ದುರ್ಘಟನೆಗಳು ನಡೆದಿರುವ ನಿದರ್ಶನಗಳಿವೆ.
ದಿನವೂ ಓಡಾಡುವ ಸಚಿವರು: ಪಟ್ಟಣದ ಕೃಷ್ಣನಗರಕ್ಕೆ ಸೇತುವೆ ಮೂಲಕ ಸಂಪರ್ಕ ಕಲ್ಪಸಲಾಗಿದೆ. ಕೃಷ್ಣನಗರ ಬಡಾವಣೆ ನಾಲೆ ಸಮೀಪದಲ್ಲೇ ಸಣ್ಣ ನೀರಾವರಿ ಸಚಿವ ಪುಟ್ಟರಾಜು ಅವರ ನಿವಾಸವಿದೆ. ಸಚಿವರ ನಿವಾಸದ ಸಮೀಪ ನಾಲೆಯ ಸೋಪಾನ ಕಟ್ಟೆಗಳು ಹಾಳಾಗಿವೆ. ವಿಪರ್ಯಾಸವೆಂದರೆ ನೀರಾವರಿ ಇಲಾಖೆ ಅಧಿಕಾರಿ ಇದೇ ಸೇತುವೆ ಮೇಲೆ ನಿತ್ಯ ಹೋಡಾಡುವ ಅಧಿಕಾರಿಗಳು ಪಕ್ಕದಲ್ಲಿರುವ ಸೋಪಾನ ಕಟ್ಟೆ ಸ್ಥಿತಿ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ಜಾಣ ಕುರುಡುತನ ಪ್ರದರ್ಶ ಮಾಡುತ್ತಿದ್ದಾರೆ. ಜತೆಗೆ ಸಚಿವ ಪುಟ್ಟರಾಜು ಅದೇ ಸೇತುವೆ ಮೇಲೆ ಸಂಚರಿಸುತ್ತಾರೆ ಎನ್ನುವುದು ಮತ್ತೂಂದು ವಿಪರ್ಯಾಸವಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ನಾಲೆಯಲ್ಲಿ ನೀರು ನಿಲ್ಲಿಸಿದ ಸಂದರ್ಭದಲ್ಲಿ ಮಾತ್ರ ಸೋಪಾನ ಕಟ್ಟೆ ಹಾಳಾಗಿರುವುದು ಗೊತ್ತಾಗುತ್ತದೆ. ಹಾಳಾಗಿರುವ ಸೋಪಾನ ಕಟ್ಟೆ ದುರಸ್ತಿ ಕೆಲಸ ಮಾಡಿಸುವಲ್ಲಿ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ ವಹಿಸಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ವಿಶ್ವೇಶ್ವರಯ್ಯ ನಾಲೆಯ ಸೋಪಾನ ಕಟ್ಟೆಗಳನ್ನು ಕೂಡಲೇ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಬೇಕಿದೆ.
● ಕುಮಾರಸ್ವಾಮಿ