ಗದಗ: ಸತತ ಮಳೆಯಿಂದ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿದ್ದು ಮಳೆ ಪ್ರಮಾಣ ಕಡಿಮೆಯಾದ ತಕ್ಷಣವೇ ಸಂಬಂಸಿದ ಇಲಾಖೆಗಳು ರಸ್ತೆ ಸುಧಾರಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಜರುಗಿದ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿ ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಹಾಗೂ 24×7ಕುಡಿಯುವ ನೀರಿನ ಯೋಜನೆ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ವಾರ ವಿವಿಧ ಯೋಜನೆಗಳ ಅನುಷ್ಠಾನಗೊಳ್ಳಿಸುತ್ತಿರು ವ ಅನುಷ್ಠಾನ ಸಂಸ್ಥೆಗಳ ಸಭೆ ಕರೆದು ನಿರ್ದೇಶನ ನೀಡಲಾಗುತ್ತಿದೆ. ನಗರಸಭೆ, ಲೋಕೋಪಯೋಗಿ ಇಲಾಖೆ, ರಾಜ್ಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ರಸ್ತೆ ಸುಧಾರಣೆಗೆ ಕ್ರಮವಹಿಸಲು ತಿಳಿಸಿದಂತೆ ಮಳೆ ಪ್ರಮಾಣ ಕಡಿಮೆಯಾದ ತಕ್ಷಣವೇ ಇಲಾಖೆಗಳು ರಸ್ತೆಗಳ ದುರಸ್ತಿ- ಗುಂಡಿ ಮುಚ್ಚಲು ಕ್ರಮವಹಿಸಬೇಕು ಎಂದರು.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ವತಿಯಿಂದ ಅಮೃತ ಯೋಜನೆಯಡಿಅನುಷ್ಠಾನಗೊಳ್ಳುತ್ತಿರುವ ಕಾಮಗಾರಿ ಹಾಗೂ ಕೆಯುಐಡಿಎಫ್‌ಸಿವತಿಯಿಂದ 24×7 ಕುಡಿಯುವ ನೀರಿನ ಯೋಜನೆಯಡಿ ಚಾಲ್ತಿ ಇರುವ ಕಾಮಗಾರಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಈಗಾಗಲೇ ಪ್ರತಿ ವಾರ ನಿಗದಿಪಡಿಸಿದಂತೆ ಸಭೆ ನಡೆಸಿ ಗಡುವು ನೀಡಲಾಗಿದ್ದು ಅನುಷ್ಠಾನ ಸಂಸ್ಥೆಗಳು ಕಾಮಗಾರಿ ಪೂರ್ಣಗೊಳಿಸಲು ವಿಳಂಬಮಾಡುತ್ತಿರುವುದು ಸರಿಯಲ್ಲ. ಕೂಡಲೇ ಕಾಮಗಾರಿ ನಿಗದಿತ ಅವಧಿ ಯೊಳಗೆ ಪೂರ್ಣಗೊಳಿಸಬೇಕು. ಒಳಚರಂಡಿ ಕಾಮಗಾರಿ ಅನುಷ್ಠಾನದಲ್ಲಿ ಹಾಳಾದ ರಸ್ತೆಗಳನ್ನು ಒಂದು ತಿಂಗಳಲ್ಲಿ ಪುನರ್ ನಿರ್ಮಿಸಲು ಗಡುವು ನೀಡಿದರು.
ಈ ವೇಳೆ ಕೆಯುಐಡಿಎಫ್‌ಸಿ ಮುಖ್ಯ ಅಭಿಯಂತರ ಎಂ. ಬಿ.ಜಗತೇರಿ, ಕೆಯುಡಬ್ಲೂಎಸ್ ಮುಖ್ಯ ಅಭಿಯಂತರರು ಚಾಮರಾಜಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ರುದ್ರೇಶ ಎಸ್.ಎನ್., ನಗರಸಭೆಗದಗ-ಬೆಟಗೇರಿ ಪೌರಾಯುಕ್ತ ರಮೇಶ ಜಾಧವ ಇತರರು ಇದ್ದರು.