ಬೀದರ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾದ ಹಾನಿಗೆ ಬೆಳೆವಿಮೆ ಮಾಡಿಸಿಕೊಂಡ ಜಿಲ್ಲೆಯ ಅಂದಾಜು 1.98 ಲಕ್ಷ ರೈತರಿಗೆ ತಕ್ಷಣ ಬೆಳೆ ವಿಮಾ ಮೊತ್ತ ಪಾವತಿಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಸಂಬಂಧಿಸಿದ ವಿಮಾ ಸಂಸ್ಥೆ ಅಧಿಕಾರಿಗಳು ಮತ್ತು ಕೃಷಿ ಇಲಾಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕುಂದುಕೊರತೆ ನಿವಾರಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2016-17, 2018-2019 ಮತ್ತು 2019-20ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿಕೊಂಡಿರುವ ರೈತರಿಗೆ ಬೆಳೆ ವಿಮೆ ಪರಿಹಾರ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಬೇಕು.
ಈ ಮೂರು ವರ್ಷಗಳ ಅವಧಿಯಲ್ಲಿ ಉಳಿಸಿಕೊಂಡಿರುವ ಬಾಕಿ ವಿಮಾ ಪರಿಹಾರ ಮೊತ್ತವನ್ನು ಕೂಡಲೇ ರೈತರಿಗೆ ಸಂದಾಯ ಮಾಡಲು ಸಂಬಂಧಿಸಿದ ವಿಮಾ ಸಂಸ್ಥೆಯವರು ಹೆಚ್ಚಿನ ಗಮನ ಹರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೃಷಿಯೇ ರೈತರ ಆದಾಯದ ಮೂಲವಾಗಿದೆ. ಸಾಕಷ್ಟು ಖರ್ಚು ವೆಚ್ಚ ಮಾಡಿ ಬಿತ್ತನೆ ಮಾಡುವ ರೈತನಿಗೆ ನಿರೀಕ್ಷಿಸಿದಷ್ಟು ಆದಾಯ ಬರದೇ ಇದ್ದಾಗ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಇದ್ದನ್ನರಿತು ಜಿಲ್ಲೆಯ ರೈತರ ಹಿತ ಕಾಪಾಡಲು ಅವರಿಗೆ ಬಾಕಿ ಇರುವ ವಿಮಾ ಮೊತ್ತ ರೈತರ ಕೈಸೇರುವಂತೆ ಅನುಕೂಲವಾಗಲು ತಾವುಗಳು ಉತ್ತಮ ಸಮನ್ವಯ ಸಾಧಿಸಬೇಕು ಎಂದು ಜಿಲ್ಲಾಧಿಕಾರಿಗಳು ಇದೆ ವೇಳೆ ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್., ಉಪ ನಿರ್ದೇಶಕರಾದ ಸೋಮಶೇಖರ ಬಿರಾದಾರ, ಸೂರ್ಯಕಾಂತ ಬಿರಾದಾರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣ ಯದಲಾಪುರೆ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎಂ. ಕಮತಗಿ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಇದ್ದರು.
2016-17ನೇ ಸಾಲಿನಲ್ಲಿ ಬಾಕಿ ಇರುವ 33 ರೈತರ ಉಳಿತಾಯ ಖಾತೆ ಮತ್ತು ಆಧಾರ್ ಸಂಖ್ಯೆ ಜೋಡಣೆ ಪ್ರಕ್ರಿಯೆ ತೀವ್ರ ನಡೆಸಬೇಕು. 2018-19ನೇ ಸಾಲಿನಲ್ಲಿ 8076 ರೈತರ ಅರ್ಜಿಗಳನ್ನು ವಿಮಾ ಕಂಪನಿಯವರು ತಿರಸ್ಕರಿಸಿದ್ದು, ವಿಮಾ ಕಂಪನಿಯವರು ಈ ಮಾಹಿತಿಯನ್ನು ಕೂಡಲೇ ಎಲ್ಲ ರೈತರಿಗೆ ತಿಳಿಸಿ ಅವರಿಂದ ಆಕ್ಷೇಪಣೆ ಇದ್ದರೆ ವಿಮಾ ಕಂಪನಿಯ ಪ್ರತಿನಿಧಿಗಳು ಅದನ್ನು ಕೂಡಲೇ ಪಡೆಯಬೇಕು.
ರಾಮಚಂದ್ರನ್ ಆರ್., ಜಿಲ್ಲಾಧಿಕಾರಿ