ದಾವಣಗೆರೆ: ನಿರ್ಮಾಣ ಕಾರ್ಯಕ್ಕೆ ಮರಳು ಸುಲಭ ಹಾಗೂ ಸಮರ್ಪಕವಾಗಿ ಮರಳು ಒದಗಿಸುವುದು, ಕಟ್ಟಡ ಕಾರ್ಮಿಕ ವಲಸೆ ತಡೆಗೆ ಸೂಕ್ತ ಕ್ರಮ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಸೋಮವಾರಮೆರವಣಿಗೆ ನಡೆಸಿ, ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ.
ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಮಿಕರು ಬಹಿರಂಗ ಸಭೆ ನಡೆಸಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವರ ಮನೆವರೆಗೂ ಮೆರವಣಿಗೆಯಲ್ಲಿ ಸಾಗಿ, ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಬಹಿರಂಗ ಸಭೆ ಉದ್ದೇಶಿಸಿ, ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಜಿ. ಉಮೇಶ್, ಮರಳಿನ ಅಭಾವ ಜಿಲ್ಲೆಯಲ್ಲಿ ತೀವ್ರವಾಗಿದೆ.
ಮರಳು ಸಮರ್ಪಕವಾಗಿ ಪೂರೈಕೆ ಆಗದೇ ಇರುವುದರಿಂದ ಅನೇಕ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಕಾರ್ಮಿಕರ ಪರಿಸ್ಥಿತಿಯನ್ನ ಜಿಲ್ಲಾಡಳಿತ ಅರಿಯಬೇಕು ಎಂದರು. ನಮ್ಮ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಹರಿಯುತ್ತದೆ. ಜಿಲ್ಲಾಡಳಿತ ಇಲ್ಲಿಯೇ ಯಾರ್ಡ್ ನಿರ್ಮಿಸಿ, ಮರಳು ವಿತರಣೆಗೆ ಕ್ರಮ ಕೈಗೊಳ್ಳಬೇಕು.
ಆದರೆ, ಇದುವರೆಗೆ ಈ ಕಾರ್ಯ ಮಾಡಿಲ್ಲ. ಇಲ್ಲಿನ ಮರಳು ಬೆಂಗಳೂರಿಗೆ ಸಾಗಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು. ಇನ್ನು ಕಟ್ಟಡ ಕಾರ್ಮಿಕರು ಇದೀಗ ಬೆಂಗಳೂರು, ಗೋವಾ ಕಡೆ ಗುಳೇಹೋಗುತ್ತಿದ್ದಾರೆ. ತಮ್ಮ ಕುಟುಂಬ, ಸಣ್ಣ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಪರಸ್ಥಳಗಳಿಗೆ ಹೋಗುವ ಈ ಜನರ ಪಾಡು ಅಲ್ಲಿ ಹೇಗೆ ಇರುತ್ತದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.
ಗುಳೇ ತಡೆಗೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ನೀಡಲಾಗುವ ಸವಲತ್ತುಗಳು ಸಕಾಲದಲ್ಲಿ ಸಿಗುತ್ತಿಲ್ಲ. ಅರ್ಜಿ ಸಲ್ಲಿಸಿ, ವರ್ಷ ಕಳೆದರೂ ಸವಲತ್ತು ಲಭ್ಯವಾಗುತ್ತಿಲ್ಲ. ಸರ್ಕಾರ ಈ ಕುರಿತು ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಹೇಳಿದರು.
ಆವರಗೆರೆ ಹಳ್ಳದ ದಂಡೆ, ನಿಟುವಳ್ಳಿ ಎ.ಕೆ. ಕಾಲೋನಿಯಲ್ಲಿ ಅನೇಕ ಕುಟುಂಬಗಳು ಗುಡಿಸಲು ಹಾಕಿಕೊಂಡು ಜೀವನ ಮಾಡುತ್ತಿವೆ.ಇವರಿಗೆ ಇದುವರೆಗೆ ಹಕ್ಕುಪತ್ರ ನೀಡಿಲ್ಲ. ತಕ್ಷಣ ಅವರಿಗೆ ಹಕ್ಕುಪತ್ರ ನೀಡಿ, ಮನೆ ಕಟ್ಟಿಕೊಳ್ಳಲು ಧನ ಸಹಾಯ ನೀಡಬೇಕು. ಇದಲ್ಲದೆ, ಆವರಗೆರೆ ಸರ್ವೆ ನಂ.213ರಲ್ಲಿದ್ದ 66 ಎಕರೆ 22 ಗುಂಟೆ ಜಾಗ ಅಕ್ರಮಿಸಲಾಗಿದೆ.
ತಕ್ಷಣ ಸರ್ವೇ ಮಾಡಿಸಿ, ಆ ಜಾಗದಲ್ಲಿ ಬಡ ಕಟ್ಟಡ ಕಾರ್ಮಿಕರಿಗೆ ನಿವೇಶನ ನಿರ್ಮಿಸಿ, ಹಂಚಬೇಕು ಎಂದು ಅವರು ಮನವಿ ಮಾಡಿದರು. ಸಂಘಟನೆಯ ಕಾರ್ಯಾಧ್ಯಕ್ಷ ಪಿ.ಕೆ. ಲಿಂಗರಾಜ್, ಭಜನೆ ಹನುಮಂತಪ್ಪ, ಸುರೇಶ್ ಯರಗುಂಟೆ, ಪಿ. ಷಣ್ಮುಖಸ್ವಾಮಿ ಇತರರು ಮೆರವಣಿಗೆ ನೇತೃತ್ವ ವಹಿಸಿದ್ದರು.