Advertisement

ಸೊಳ್ಳೆ ತಾಣಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳಿ

12:29 PM Jun 02, 2022 | Team Udayavani |

ಕಾರವಾರ: ಮನೆಯ ಸುತ್ತಮುತ್ತ ಸೊಳ್ಳೆಗಳ ನಿಯಂತ್ರಣ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನಾ ಕಾರ್ಯಕ್ರಮದಲ್ಲಿ ಗ್ರಾಪಂಗಳ ಭಾಗವಹಿಸುವಿಕೆ ಮುಖ್ಯ. ಇದರಿಂದ ಗ್ರಾಮೀಣ ಪ್ರದೇಶಗಳ ನೈರ್ಮಲ್ಯ ಕಾಪಾಡಲು ಸಾಧ್ಯ ಎಂದು ಜಿಪಂ ಸಿಇಒ ಪ್ರಿಯಾಂಕಾ ಹೇಳಿದರು.

Advertisement

ಜಿಪಂ ಸಭಾಭವನದಲ್ಲಿ ನಡೆದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಹಾಗೂ ತಡೆಗೆ ಅಂತರ್‌ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮತನಾಡಿದ ಅವರು, ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ತಗ್ಗು ಪ್ರದೇಶಗಳು ಹಾಗೂ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿ ಆಗುವುದರಿಂದ ಡೆಂಘೀ, ಮಲೆರಿಯಾ ಅನೇಕ ಕಾಯಿಲೆಗಳು ಹರಡುವ ಸಾಧ್ಯತೆ ಇರುವುದರಿಂದ ಗುಂಡಿಗಳಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನೀರಿನ ಪೈಪುಗಳ ಸೋರುವಿಕೆ ಗುರುತಿಸಿ, ಸರಿಪಡಿಸಬೇಕು ಹಾಗೂ ನೀರು ಸರಬರಾಜು ಮಾಡುವ ಮೊದಲು ನೀರಿಗೆ ಸರಿಯಾದ ಪ್ರಮಾಣದಲ್ಲಿ ಕ್ಲೋರಿನೇಶನ್‌ ಮಾಡಬೇಕು. ನೈರ್ಮಲ್ಯ ಲೈನ್‌ ಮತ್ತು ಸರಬರಾಜು ಲೈನ್‌ ಗಳನ್ನು ಪರಿವೀಕ್ಷಣೆಗೊಳಪಡಿಸಿ ದೋಷಗಳಿದ್ದರೆ ಸರಿಪಡಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ಹೇಳಿದರು.

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೂ ರೋಗವಾಹಕ ಆಶ್ರಿತ ರೋಗಗಳಾದ ಡೆಂಘೀ, ಚಿಕನ್‌ ಗುನ್ಯಾ, ಮಲೇರಿಯಾ, ಪೈಲೇರಿಯಾ ಮತ್ತು ಮೆದುಳು ಜ್ವರ ರೋಗ ಲಕ್ಷಣಗಳ ಹರಡುವಿಕೆ ಮತ್ತು ತಡೆಗಟ್ಟವಿಕೆ, ನಿಯಂತ್ರಣದ ಕುರಿತು ಸಾರ್ವಜನಿಕರಿಗೆ ಸಮೂಹ ಮಾಧ್ಯಮಾಗಳ ಮೂಲಕ ಅರಿವು ಮೂಡಿಸಬೇಕು ಎಂದರು.

ಜಿಲ್ಲೆಗೆ ವಲಸೆ ಬರುವ ಮೀನುಗಾರರಿಗೆ ರೋಗವಾಹಕ ಆಶ್ರಿತ ರೋಗಗಳ ಕುರಿತು ಮುಂಜಾಗ್ರತೆಯಾಗಿ ವೈದ್ಯರು ರಕ್ತ ತಪಾಸಣಾ ಶಿಬಿರ ಹಮ್ಮಿಕೋಳ್ಳಬೇಕು ಹಾಗೂ ಲಾರ್ವಹಾರಿ ಮೀನುಗಳ ನಿರ್ವಹಣೆಗಾಗಿ ಹ್ಯಾಚರಿಸ್‌ ಮೀನಿನ ಮರಿ ಮನೆಗಳನ್ನು ನಿರ್ಮಿಸಬೇಕು. ಜಿಲ್ಲೆಯ ನೀರಿನ ಮೂಲಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡಲು ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರಿಕೆ ಇಲಾಖೆಗೆ ಸೂಚಿಸಿದರು.

Advertisement

ಸಾರಿಗೆ ಇಲಾಖೆಯ ಡಿಪೋಗಳಲ್ಲಿ ಉಪಯೋಗಿಸದ ಟಾಯರ್‌ಗಳು ಹಾಗೂ ಬಿಡಿಭಾಗಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳಾಗಿದ್ದು, ಅವುಗಳನ್ನು ನಿರ್ಮೂಲನೆ ಮಾಡುವುದು ಅಥವಾ ಟರ್ಪಾಲ್‌ನಿಂದ ಸೊಳ್ಳೆಗಳು ನುಸುಳದಂತೆ ಮುಚ್ಚಬೇಕು ಎಂದು ಸಾರಿಗೆ ಇಲಾಖೆಗೆ ಹೇಳಿದರು.

ಶಾಲೆಗಳಲ್ಲಿ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಮಕ್ಕಳಿಗೆ ಲಾರ್ವಾಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಲಾರ್ವಾ ಉತ್ಪತ್ತಿ ತಾಣಗಳ ಬಗ್ಗೆ ಹಾಗೂ ಅವುಗಳ ನಾಶದ ಬಗ್ಗೆ ಮಾಹಿತಿ ನೀಡಿ ತಮ್ಮ ಮನೆಯ ಸುತ್ತಮುತ್ತಲಿನ ಸ್ವತ್ಛತೆ ಕುರಿತು ಅರಿವು ಮೂಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ತಿಳಿಸಿದರು.

ಸರ್ಕಾರಿ ಕಟ್ಟಡ ನಿರ್ಮಾಣ ಹಾಗೂ ಸರ್ಕಾರಿ ಆಸ್ಪತ್ರೆ ಕ್ವಾರ್ಟರ್ಸ್‌ಗಳಿಗೆ ನವೀಕರಣಗಳು ಇನ್ನು ಬಾಕಿ ಇರುವ ಕಾರಣ ಕೂಡಲೇ ಕೆಲಸವನ್ನು ಪೂರ್ಣಗಳಿಸಬೇಕು ಎಂದು ಇಂಜಿನೀಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next