ಔರಾದ: ಔರಾದ ಕ್ಷೇತ್ರ ಸೇರಿದಂತೆ ಜಿಲ್ಲೆಯ ಸಾಕಷ್ಟು ಕಡೆಗಳಲ್ಲಿ ರೈತರ ಬೆಳೆನಷ್ಟಕ್ಕೆ ಕಾರಣವಾಗುತ್ತಿರುವ ಬಸವನ (ಶಂಖದ) ಹುಳುವಿನ ಹತೋಟಿ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಸೂಚಿಸಿದರು.
ತಾಲೂಕಿನ ಏಕಂಬಾ ಗ್ರಾಪಂ ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅತಿವೃಷ್ಟಿಯಿಂದ ಬೆಳೆ ಹಾನಿಯಾಗುತ್ತಿರುವ ಕಾರಣ ರೈತರು ಈಗಾಗಲೇ ಸಾಕಷ್ಟು ಸಮಸ್ಯೆಯಲ್ಲಿದ್ದಾರೆ. ಎಲ್ಲ ಬೆಳೆ ನಾಶಪಡಿಸುತ್ತಿರುವ ಬಸವನ ಹುಳುವಿನ ಕಾಟ ರೈತರಿಗೆ ಇನ್ನಷ್ಟು ತಲೆ ನೋವಾಗಿ ಪರಿಣಮಿಸಿದೆ. ಜಿಲ್ಲೆಯ ಸಾಕಷ್ಟು ಭಾಗಗಳಲ್ಲಿ ರೋಗ ಬಾಧೆಯಿಂದ ಸೋಯಾಬಿನ್, ತೊಗರಿ, ಉದ್ದು, ಹೆಸರು ಬೆಳೆದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಬಸವನ ಹುಳು ಹತೋಟಿಗೆ ನಿರ್ವಹಣೆ ಕ್ರಮಗಳ ಬಗ್ಗೆ ಎಲ್ಲ ರೈತರಿಗೂ ತಿಳಿಹೇಳಬೇಕು. ಜಾಗೃತಿ ಕಾರ್ಯಕ್ರಮಗಳು ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು ಎಂದು ತಿಳಿಸಿದರು.
ಬಸವನ ಹುಳು ನಿರ್ಮೂಲನೆ ಮಾಡಲು ಹೊಲದಲ್ಲಿರುವ ಎಲ್ಲ ಬಸವನ ಹುಳುಗಳನ್ನು ಒಂದೆಡೆ ಸೇರಿಸಿ ದಪ್ಪ ಉಪ್ಪನ್ನು ಸುರಿಸುವುದರಿಂದ ಅವು ಸಾಯುತ್ತವೆ. ಹೀಗೆ ಸತ್ತ ಹುಳುಗಳನ್ನು ಗುಂಡಿ ತೋಡಿ ಮುಚ್ಚುವುದರಿಂದ ಬಸವನ ಹುಳುವಿನ ಬಾಧೆ ಶಾಶ್ವತವಾಗಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ಸಚಿವರು ರೈತರಿಗೆ ಸಲಹೆ ನೀಡಿದರು.
ಕೆವಿಕೆ ಮುಖ್ಯಸ್ಥ ಸುನೀಲಕುಮಾರ ಮಾತನಾಡಿ, ಶಂಖದ ಹುಳು ತನ್ನ ಜೀವಿತಾವಧಿಯಲ್ಲಿ ಸುಮಾರು 500 ಮೊಟ್ಟೆ ಇಡುವುದರಿಂದ ಇವುಗಳ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತದೆ. ಗಿಡದ ಎಲೆ, ದೇಟು, ಕಾಂಡ ಮತ್ತು ತೊಗಟೆ ಕೆರೆದು ತಿನ್ನುವುದರಿಂದ ಬೆಳೆ ನಾಶವಾಗುತ್ತದೆ. ಬಸವನ ಹುಳುವಿನ ಹತೋಟಿಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಸಂಪೂರ್ಣ ಬೆಳೆ ನಾಶವಾಗುವ ಸಾಧ್ಯತೆ ಇರುವುದರಿಂದ ರೈತರು ಜಾಗೃತಿ ವಹಿಸಬೇಕು ಎಂದರು.
ಈ ವೇಳೆ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್, ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಕೃಷಿ ಉಪ ನಿರ್ದೇಶಕ ಕೆಂಗೇಗೌಡ, ಸಹಾಯಕ ನಿರ್ದೇಶಕ ಎ.ಕೆ. ಅನ್ಸಾರಿ, ತಾಪಂ ಇಒ ಬೀರೇಂದ್ರ ಸಿಂಗ್ ಇತರರಿದ್ದರು.