Advertisement

ಕೋವಿಡ್ ತಡೆಗೆ ಕ್ರಮ ಕೈಗೊಳ್ಳಿ: ಪ್ರಿಯಾಂಕ್‌

01:18 PM Aug 03, 2020 | Suhan S |

ಚಿತ್ತಾಪುರ: ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಚಿತ್ತಾಪುರ ತಾಲೂಕಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸೋಂಕು ಹರಡದಂತೆ ತಡೆಯಬೇಕು ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಟಾಸ್ಕ್ಫೋಸ್ಕ್ ಸಭೆಯಲ್ಲಿ ಮಾತನಾಡಿದ ಅವರು, ಚಿತ್ತಾಪುರ, ಕಾಳಗಿ ಹಾಗೂ ಶಹಾಬಾದ್‌ ತಹಶೀಲ್ದಾರ್‌ ಅವರು ಒಟ್ಟಾಗಿ ಕುಳಿತು ಚರ್ಚೆ ಮಾಡಿ ತಾಲೂಕಿನಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯಲು ಕ್ರಮಕೈಗೊಳ್ಳಬೇಕು. ಶಾಸಕನಾಗಿ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ಚಿತ್ತಾಪುರ ಪಟ್ಟಣದ ನಾಗಾವಿ ಕ್ಯಾಂಪಸ್‌ ನಲ್ಲಿ ಈಗಾಗಲೇ 100 ಬೆಡ್‌ಗಳ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪಿಸಲಾಗಿದೆ. ಇನ್ನೂ 50 ಬೆಡ್‌ಗಳ ಮತ್ತೂಂದು ಕೇರ್‌ ಸೇಂಟರನ್ನು ವಾಡಿ ಪಟ್ಟಣದಲ್ಲಿ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸೋಂಕಿತರನ್ನು ಪತ್ತೆ ಹಚ್ಚಲು ಹಾಗೂ ಸೋಂಕು ಹರಡದಂತೆ ತಡೆಯಲು ಸಮುದಾಯ ಪರೀಕ್ಷೆ ನಡೆಸುವ ಅಗತ್ಯವಿದೆ. ಅದಕ್ಕಾಗಿ ಆರೋಗ್ಯ, ಕಂದಾಯ, ಪಂಚಾಯತ, ಶಿಕ್ಷಣ ಇಲಾಖೆ ಹಾಗೂ ಇತ್ಯಾದಿ ಸಂಬಂಧಿ ಸಿದ ಇಲಾಖೆ ಅಧಿಕಾರಿಗಳು ಒಗ್ಗಟ್ಟಾಗಿ ಸೋಂಕು ತಡೆಯುವ ಪ್ರಕ್ರಿಯೆಯಲ್ಲಿ ತೊಡಗಿದರೆ ನನ್ನ ಕಡೆಯಿಂದ ಬೇಕಾಗುವ ವೈದ್ಯಕೀಯ ಸಲಕರಣೆಗಳಾದ ಫೀವರ್‌, ಸ್ಕ್ರೀನಿಂಗ್‌ ಮಷಿನ್‌, ಬಿಪಿ, ಶುಗರ್‌ ಹಾಗೂ ಆಕ್ಸಿಜನ್‌ ತಪಾಸಣಾ ಯಂತ್ರ, ಸ್ಯಾನಿಟೈಸರ್‌ ಮತ್ತು ಫೇಸ್‌ ಶೀಲ್ಡ್‌ ಒದಗಿಸುವುದರ ಜೊತೆಗೆ ಅಗತ್ಯ ಸ್ವಯಂ ಸೇವಕರನ್ನು ಕೂಡಾ ನೇಮಿಸಲಾಗುವುದು ಎಂದು ಹೇಳಿದರು.

ತಾಲೂಕಿನಲ್ಲಿ ಒಟ್ಟು 4,510 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 4,080 ಆರ್‌ಟಿಪಿಸಿಆರ್‌ ಹಾಗೂ ಉಳಿದ 430 ರೇಪಿಡ್‌ನ‌ಲ್ಲಿ ಪರೀಕ್ಷೆ ಮಾಡಲಾಗಿದೆ. ಇದುವರೆಗೆ ಒಟ್ಟು 552 ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, 398 ಜನ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ಪ್ರಸ್ತುತ 152 ಜನ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಶಾಸಕರಿಗೆ ಮಾಹಿತಿ ನೀಡಿದರು.

Advertisement

ತನಿಖೆಗೆ ಆದೇಶ: ಭೀಮನಳ್ಳಿ, ಅಳ್ಳೋಳ್ಳಿ, ದಿಗ್ಗಾಂವ, ನಾಲವಾರ ಹಾಗೂ ಮಾಡಬೂಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನವಸತಿ ಮನೆಗಳು ಹಾಗೂ ವಿತರಿಸಲಾದ ಜಾಬ್‌ ಕಾರ್ಡ್‌ಗಳ ಹೊಂದಾಣಿಕೆ ಕಂಡುಬರದ ಹಿನ್ನೆಲೆಯಲ್ಲಿ ತನಿಖೆ ನಡೆಸಿ 15 ದಿನಗಳಲ್ಲಿವರದಿ ಸಲ್ಲಿಸಬೇಕು ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಅವರಿಗೆ ಸೂಚಿಸಿದರು. ಜಿಪಂ ಸದಸ್ಯರಾದ ಶಿವಾನಂದ ಪಾಟೀಲ್‌, ಶಿವರುದ್ರ ಭೀಣಿ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್‌, ಉಪಾಧ್ಯಕ್ಷ ಹರಿನಾಥ ಚವ್ಹಾಣ, ಇಒ ಬಸಲಿಂಗಪ್ಪ ಡಿಗ್ಗಿ, ಸಿಪಿಐ ಕಲ್ಲದೇವರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next