ಬೆಂಗಳೂರು: “ಸತ್ಯಶೋಧ ಮಿತ್ರಮಂಡಳಿ’ ಎಂಬ ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಬರಹಗಳನ್ನು ಬರೆಯುತ್ತಿದ್ದು, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಮಹಿಳಾ ಸಂಘಟನೆ ಸದಸ್ಯರು ಭಾನುವಾರ ನಗರದ ಪುರಭವನ ಮುಂಭಾಗ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಬಗ್ಗೆ ಅವಾಚ್ಯವಾಗಿ ಬರೆದು ನಿಂದಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಅದೇರೀತಿ ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ನಾರೀ ಸುರಕ್ಷಾ ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ, ಸಾಮಾಜಿಕ ಜಾಲತಾಣದಲ್ಲಿ ಕೆಲವರು “ಸತ್ಯಶೋಧ ಮಿತ್ರಮಂಡಳಿ’ ಎಂಬ ಗುಂಪು ರಚಿಸಿ ಮಹಿಳೆಯರ ಬಗ್ಗೆ ಅತ್ಯಂತ ಕೀಳು ಶಬ್ಧಗಳಲ್ಲಿ ಹಾಗೂ ವೈಯಕ್ತಿಕವಾಗಿ ಕೆಲ ಮಹಿಳೆಯರ ಶೀಲದ ಬಗ್ಗೆ ಶಂಕೆ ಬರುವ ರೀತಿ ಬರೆದು ಮಾನಸಿಕವಾಗಿ ಆಘಾತ ಉಂಟುಮಾಡುತ್ತಿದ್ದಾರೆ. ಈ ಗುಂಪಿನ ವಿರುದ್ಧ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
“ಸತ್ಯಶೋಧ ಮಿತ್ರಮಂಡಳಿ’ಯ ಶಾಂತಾರಾಮ ಹೆಗಡೆ ಕಟ್ಟೆ, ಮಹಾಂತೇಶ್ ದೊಡ್ಡಮನಿ, ಗಣಪತಿ ಭಟ್, ಪ್ರಕಾಶ್ ಕಾಕಲ, ಬಾಲಚಂದ್ರ ಹೆಗಡೆ ಮುಂತಾದವರ ವಿರುದ್ಧ ಹಿಂದುಳಿದ ಮುಕ್ರಿ ಸಮಾಜದ ಮಹಿಳೆಯರು ಸೇರಿದಂತೆ, ಅನೇಕ ಹೆಣ್ಣು ಮಕ್ಕಳು ದೂರು ನೀಡಿದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಸಂಶಯ ಉಂಟುಮಾಡುತ್ತಿದೆ. ಸರ್ಕಾರಕ್ಕೆ ನಿಜವಾಗಿಯೂ ಮಹಿಳೆಯರ ಬಗ್ಗೆ ಗೌರವ ಹಾಗೂ ಕಾಳಜಿ ಇದ್ದರೆ ಸತ್ಯಶೋಧ ಮಿತ್ರಮಂಡಳಿ ವಿರುದ್ಧ 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ಮುಕ್ರಿ ಸಮಾಜದ ಮಂಜುಳಾ ಮುಕ್ರಿ, ರಂಣ ರಾಜಿಣಿ ಸಂಘಟನೆಯ ರಾಜ್ಯ ಪ್ರಮುಖರಾದ ಕು.ಭವ್ಯಾ ಗೌಡ, ಅಖೀಲ ಹವ್ಯಕ ಮಹಾಸಭೆಯ ರಾಜಲಕ್ಷಿ ಬೇಳೂರು, ಮಡಿವಾಳ ಸಮಾಜದ ಜಯಮ್ಮ, ಹವ್ಯಕ ಮಹಾಮಂಡಲದ ಈಶ್ವರೀ ಬೇರ್ಕಡವು, ಕಲ್ಪನಾ ತಲವಾಟ, ಸಂಧ್ಯಾ ಹೊನ್ನಾವರ, ಹೈಕೋರ್ಟ್ ವಕೀಲರಾದ ದಿವ್ಯಾ, ನಾರೀ ಸುರಕ್ಷಾದ ಅನುರಾಧಾ, ಶಿಲ್ಪಾ, ಅಕ್ಷತಾ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.