ಹುಮನಾಬಾದ: ದಿನೇ ದಿನೇ ಹೆಚ್ಚಾಗುತ್ತಿರುವ ಬಿಸಿಲಿನ ಪ್ರಖರತೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮದಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ನಗರದ ವಿವಿಧೆಡೆ ತಲೆ ಎತ್ತಿರುವ ದೇಶಿ ಪಾನೀಯ ಕಬ್ಬಿನ ಹಾಲು, ಎಳೆ ನೀರು ಮಳಿಗೆಗಳ ಮೊರೆ ಹೋಗುತ್ತಿದ್ದಾರೆ.
ಎರಡು ವಾರಗಳಿಂದ ಹೆಚ್ಚಾದ ಬಿಸಿಲಿನ ಪ್ರಖರತೆಯಿಂದಾಗಿ ಜನರು ಮನೆಬಿಟ್ಟು ಹೊರಗೆ ಬರುವುದು ದುಸ್ತರವಾಗಿದೆ. ಬೈಕ್ ಹಾಗೂ ಕಾಲ್ನಡಿಗೆಯಲ್ಲಿ ತೆರಳುವ ಜನ ಕಡ್ಡಾಯವಾಗಿ ಟೊಪ್ಪಿಗೆ ಧರಿಸುತ್ತಿದ್ದಾರೆ. ಆದರೆ ಟೊಪ್ಪಿಗೆ ಧರಿಸಲು ಆಗದ ಸರ್ಕಾರಿ ನೌಕರರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಸಂಚರಿಸುತ್ತಿದ್ದಾರೆ.
ಇನ್ನೂ ಕಿ.ಮೀ.ಗಟ್ಟಲೇ ದೂರ ಕಾಲ್ನಡಿಗೆಯಲ್ಲಿ ತೆರಳುವ ಜನ ಅಲ್ಲಲ್ಲಿ ದಾರಿ ಮಧ್ಯೆ ಕಬ್ಬಿನ ಹಾಲು, ಮಜ್ಜಿಗೆ, ಎಳೆ ನೀರು ಮತ್ತಿತರ ದೇಶಿ ಪಾನೀಯ ಮೊರೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ರಸ್ತೆ ಬದಿ ಕಲ್ಲಂಗಡಿ ಹಣ್ಣು ಸೇವಿಸಿ ಹಸಿವು, ಆಯಾಸ ಕಡಿಮೆ ಮಾಡಿಕೊಳ್ಳುವುದರತ್ತ ಚಿತ್ತ ಹರಿಸುತ್ತಿದ್ದಾರೆ.
ಸಾಲುಗಟ್ಟಿ ನಿಂತ ಜನ: ಹೆಚ್ಚು ಹಣ ತೆತ್ತು ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ರಾಸಾಯನಿಕ ಮಿಶ್ರಿತ ಪಾನೀಯಗಳನ್ನು ಕುಡಿಯುವ ಬದಲಿಗೆ ಅತ್ಯಲ್ಪ ಹಣ ನೀಡಿ, ಆರೋಗ್ಯಕ್ಕೂ ಪೂರಕ ಕಬ್ಬಿನ ಹಾಲು ಸವಿಯಲು ಗ್ರಾಹಕರು ಅಂಗಡಿಗಳ ಎದುರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಅದರಕ್ಕೆ ಸಿಹಿ: ಬಿಸಿಲಿನ ಪ್ರಖರತೆಯ ಈ ದಿನಗಳಲ್ಲಿ ಆರಂಭಗೊಂಡಿರುವ ದೇಶಿ ಪಾನೀಯ ಮತ್ತು ಹಣ್ಣಿನ ಅಂಗಡಿಗಳು ಗ್ರಾಹಕರ ಅದರಕ್ಕೆ ಸಿಹಿ ಅನುಭವವಾಗಿ ಆರೋಗ್ಯಕ್ಕೂ ಪೂರಕವಾಗಿವೆ.
ದೇಶಿ ಪಾನೀಯವಾದ ಕಬ್ಬಿನ ಹಾಲಿನಲ್ಲಿ ಔಷಧ ಗುಣಗಳಿರುವ ಕಾರಣ ಗ್ರಾಹಕರು ಅದನ್ನೇ ಸೇವಿಸಬೇಕು.
ದುಬಾರಿ ಹಣ ತೆತ್ತು ರಾಸಾಯನಿಕ ಮಿಶ್ರಣದಿಂದ ಕೂಡಿರುವ ಪಾನೀಯ ಸೇವನೆ ಮಾಡುವುದರಿಂದ ಆರೋಗ್ಯದ
ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
ಪ್ರೊ| ಮಮತಾ ಮಿತ್ರಾ, ಪರಿಸರ ಅಧ್ಯಯನ ಪ್ರಾಧ್ಯಾಪಕಿ
ಪ್ರೊ| ಮಮತಾ ಮಿತ್ರಾ, ಪರಿಸರ ಅಧ್ಯಯನ ಪ್ರಾಧ್ಯಾಪಕಿ
ಪ್ರತೀ ವರ್ಷ ಬೇಸಿಗೆ ಅವಧಿಯಲ್ಲಷ್ಟೇ ನಡೆಯುವ ಕಬ್ಬಿನ ಹಾಲಿನ ವ್ಯಾಪಾರದಿಂದ ಬರುವ ಆದಾಯದಲ್ಲಿ ಕುಟುಂಬವನ್ನು ವರ್ಷವಿಡೀ ಮುನ್ನಡೆಸಲು ಅನುಕೂಲವಾಗುತ್ತಿದೆ. ನೀರಿನ ಅಭಾವದಿಂದ ಈ ಬಾರಿ ಗುಣಮಟ್ಟದ ಕಬ್ಬು ಲಭ್ಯವಾಗುತ್ತಿಲ್ಲ. ಕಳೆದ ವರ್ಷಕ್ಕಿಂತ ಈ ಬಾರಿ ದುಬಾರಿ ಬೆಲೆ ಕೊಟ್ಟು ಕಬ್ಬು ತರುತ್ತಿದ್ದೇವೆ.
ಪ್ರೊ| ನಾರಾಯಣರಾವ್ ದೇಶಪಾಂಡೆ, ಕಬ್ಬಿನ ಹಾಲು ವ್ಯಾಪಾರಿ
ಪ್ರೊ| ನಾರಾಯಣರಾವ್ ದೇಶಪಾಂಡೆ, ಕಬ್ಬಿನ ಹಾಲು ವ್ಯಾಪಾರಿ
ಶಶಿಕಾಂತ ಕೆ.ಭಗೋಜಿ