Advertisement

ಕಬ್ಬಿನ ಹುಡುಗನ ತಾಜಾ ಪ್ರೀತಿ!: ತಾಜ್ ಮಹಲ್ 2 ಚಿತ್ರ ವಿಮರ್ಶೆ

01:07 PM Sep 03, 2022 | Team Udayavani |

ಆತ ಸ್ವಾಭಿಮಾನಿ ಬಡ ಕುಟುಂಬದ ಹುಡುಗ ಭಗತ್‌. ತಾನಾಯಿತು ತನ್ನ ಕೆಲಸವಾಯಿತು ಅಂಥ ಕಬ್ಬಿನ ಹಾಲು ಮಾರಿಕೊಂಡು ಆರಾಮಾಗಿದ್ದ ಈ ಹುಡುಗನ ಜೀವನದಲ್ಲಿ, ಅಚಾನಕ್‌ ಆಗಿ ಬರುವ ಹುಡುಗಿಯೊಬ್ಬಳಿಂದಾಗಿ ಆತನ ಜೀವನವೇ ಬದಲಾಗುತ್ತದೆ. ಮೇಲ್ವರ್ಗದ ಹುಡುಗಿ ಕೆಳವರ್ಗದ ಹುಡುಗನ ನಡುವೆ ಮೂಡುವ ಪ್ರೀತಿಯ ಹಿಂದೆಯೇ, ಅಲ್ಲೊಂದು ಜಾತಿ ವೈಷಮ್ಯವೂ ಹುಟ್ಟಿಕೊಳ್ಳುತ್ತದೆ. ಅಲ್ಲಿಂದ ಈ ಪ್ರೇಮದ ಜೋಡಿ ಏನೇನು ಸಂತೋಷ, ಸಂಕಟ, ಸಂಘರ್ಷಗಳನ್ನು ಎದುರಿಸುತ್ತದೆ. ಅಂತಿಮವಾಗಿ ಹೃದಯದಲ್ಲಿ “ತಾಜ್‌ಮಹಲ್‌’ ಕಟ್ಟಲು ಹೊರಟ ಪ್ರೇಮಿಗಳ ಕಥೆ ಏನಾಗುತ್ತದೆ ಅನ್ನೋದೆ ಈ ವಾರ ತೆರೆಗೆ ಬಂದಿರುವ “ತಾಜ್‌ಮಹಲ್‌-2′ ಚಿತ್ರದ ಕಥಾಹಂದರ.

Advertisement

ಹೆಸರೇ ಹೇಳುವಂತೆ, “ತಾಜ್‌ಮಹಲ್‌ -2′ ಒಂದು ಅಪ್ಪಟ ಲವ್‌ಸ್ಟೋರಿ ಸಿನಿಮಾ. ಲವ್‌ ಸ್ಟೋರಿಯ ಜೊತೆಗೆ ಆ್ಯಕ್ಷನ್‌, ಸೆಂಟಿಮೆಂಟ್‌, ಫ್ರೆಂಡ್‌ಶಿಪ್‌, ಮೆಲೋಡಿ ಸಾಂಗ್ಸ್‌ ಹೀಗೆ ಬೇಕಾದ ಎಲ್ಲ ಎಂಟರ್‌ಟೈನ್ಮೆಂಟ್‌ ಅಂಶಗಳನ್ನೂ ಹದವಾಗಿ ಸೇರಿಸಿ ಮಾಸ್‌ ಸಿನಿಪ್ರಿಯರಿಗೆ ಇಷ್ಟವಾಗುವಂತೆ ಕಮರ್ಷಿಯಲ್‌ ಆಗಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ದೇವರಾಜ್‌ ಕುಮಾರ್‌.

ಕೆಲ ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಡೆದಿದ್ದು ಎನ್ನಲಾದ ಮರ್ಯಾದ ಹತ್ಯೆಯ ನೈಜ ಘಟನೆಯನ್ನು ಕನ್ನಡ ನೇಟಿವಿಟಿಕೆ ತಕ್ಕಂತೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.  ಕಥೆಗೆ ತಕ್ಕಂತೆ ಚಿತ್ರಕಥೆ, ನಿರೂಪಣೆಗೆ ಕೊಂಚ ವೇಗ ಸಿಕ್ಕಿದ್ದರೆ, “ತಾಜ್‌ಮಹಲ್‌-2′ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುವ ಸಾಧ್ಯತೆಗಳಿದ್ದವು.

ಇನ್ನು ನಾಯಕನ ಪಾತ್ರದಲ್ಲಿ ಕೆಳಮಧ್ಯಮ ವರ್ಗದ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿರುವ ದೇವರಾಜ್‌ ಕುಮಾರ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಸಮೃದ್ಧಿ ಶುಕ್ಲಾ ಕೂಡ ಅಂದಕ್ಕೊಪ್ಪುವ ಅಭಿನಯ ನೀಡಿದ್ದಾರೆ. ಉಳಿದಂತೆ ರಿತೇಶ್‌, ತಬಲನಾಣಿ, ಶೋಭರಾಜ್‌, ಕಾಕ್ರೋಚ್‌ ಸುಧಿ, ಕಡ್ಡಿಪುಡಿ ಚಂದ್ರು, ವಿಕ್ಟರಿ ವಾಸು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ತಾಂತ್ರಿಕವಾಗಿ ಛಾಯಾಗ್ರಹಣ, ಸಂಕಲನ ಕಾರ್ಯ ಗಮನ ಸೆಳೆಯುತ್ತದೆ. ಚಿತ್ರದ ಒಂದೆರಡು ಹಾಡುಗಳು ಥಿಯೇಟರ್‌ ಹೊರಗೂ ಗುನುಗುಡುವಂತಿದೆ. ಹಿನ್ನೆಲೆ ಸಂಗೀತ, ಸೌಂಡ್‌ ಎಫೆಕ್ಟ್ ಕಾರ್ಯಗಳ ಕಡೆಗೆ ಇನ್ನಷ್ಟು ಗಮನ ಕೊಡಬಹುದಿತ್ತು. ಒಟ್ಟಾರೆ ಯಾವುದೇ ಬಿಗ್‌ ಸ್ಟಾರ್ ಇಲ್ಲದೆ ತೆರೆಗೆ ಬಂದಿರುವ “ತಾಜ್‌ಮಹಲ್‌-2′ ವಾರಾಂತ್ಯದಲ್ಲಿ ನೋಡಬಹುದಾದ ಕಂಪ್ಲೀಟ್‌ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಪ್ಯಾಕೇಜ್‌ ಇರುವ ಸಿನಿಮಾ ಎನ್ನಲು ಅಡ್ಡಿಯಿಲ್ಲ.

Advertisement

ಜಿ.ಎಸ್.ಕಾರ್ತಿಕ ಸುಧನ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next