ಬಲ್ಲಿಯಾ : ಆಗ್ರಾದಲ್ಲಿರುವ ವಿಶ್ವಪ್ರಸಿದ್ಧ ತಾಜ್ ಮಹಲ್ ಶೀಘ್ರದಲ್ಲಿಯೇ ರಾಮ್ ಮಹಲ್ ಆಗಿ ಮರುನಾಮಕರಣಗೊಳ್ಳಲಿದೆ ಎಂದು ಉತ್ತರ ಪ್ರದೇಶದ ಬಲ್ಲಿಯಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಶನಿವಾರ ಈ ಬಗ್ಗೆ ಮಾಧ್ಯಮಗಳ ಜೊತೆ ಮಾತಾಡಿರುವ ಸಿಂಗ್, ಆಗ್ರಾದಲ್ಲಿರುವ ತಾಜ್ ಮಹಲ್ ಶಿವನ ದೇವಸ್ಥಾನವಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕಾರಾವಧಿಯಲ್ಲಿ ಅದು ಪುನಃ ರಾಮ ಮಹಲ್ ಆಗಿ ಮರುನಾಮಕರಣವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಛತ್ರಪತಿ ಶಿವಾಜಿಯ ವಂಶಸ್ಥರು ಎಂದು ಬಣ್ಣಿಸಿರುವ ಸಿಂಗ್, ಶಿವಾಜಿಯ ವಂಶಸ್ಥರು ಉತ್ತರ ಪ್ರದೇಶಕ್ಕೆ ಆಗಮಿಸಿದ್ದಾರೆ. ಸಮರ್ಥ ಗುರು ರಾಮದಾಸ ಶಿವಾಜಿಯನ್ನ ಭಾರತಕ್ಕೆ ನೀಡಿದಂತೆ, ಉತ್ತರ ಪ್ರದೇಶಕ್ಕೆ ಗೋರಖನಾಥ್ ಅವರು ಯೋಗಿ ಆದಿತ್ಯನಾಥ್ ಅವರನ್ನು ಕರುಣಿಸಿದ್ದಾರೆ ಎಂದಿದ್ದಾರೆ.
ಇತ್ತೀಚಿಗೆ ಮೊರದಾಬಾದ್‍ನಲ್ಲಿ ನಡೆದ ಪತ್ರಕರ್ತರ ಮೇಲೆ ಸಮಾಜವಾದಿ ಪಕ್ಷದ ನಾಯಕರ ಹಲ್ಲೆ ಪ್ರಕರಣವನ್ನು ಸಿಂಗ್ ಖಂಡಿಸಿದ್ದಾರೆ. ಈ ಘಟನೆ ಆ ಪಕ್ಷದ ವರ್ತನೆ, ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಆದರೆ, ಯೋಗಿಜಿ ಅವರ ಆಡಳಿತದಲ್ಲಿ ಇಂತಹದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಎಂಎಲ್‍ಎ ಸುರೇಂದ್ರ ಸಿಂಗ್ ನೇರ ಹಾಗೂ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾದವರು. ಈ ಹಿಂದೆಯೂ ಸಾಕಷ್ಟು ಕಾಂಟ್ರವರ್ಸಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು.