ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಪರಿಣಾಮ ಕಳೆದ ಎರಡು ತಿಂಗಳಿಂದ ಮುಚ್ಚಲ್ಪಟ್ಟಿದ್ದ, ಕೇಂದ್ರ ಸರ್ಕಾರದ ರಕ್ಷಣೆಗೊಳಪಟ್ಟಿರುವ ಸ್ಮಾರಕಗಳಾದ ತಾಜ್ ಮಹಲ್ ಸೇರಿದಂತೆ ಇನ್ನತರ ಪ್ರಸಿದ್ಧ ಸ್ಥಳಗಳನ್ನು ಜೂನ್ 16ರಿಂದ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಎಎಸ್ ಐ(ಭಾರತೀಯ ಪುರಾತತ್ವ ಸಮೀಕ್ಷಾ) ತಿಳಿಸಿದೆ.
ಇದನ್ನೂ ಓದಿ:ಮದುವೆ ಮಾಡುವುದು ತಡವಾದ್ದರಿಂದ ಮೊಬೈಲ್ ಟವರ್ ಕಂಬ ಏರಿ ಕುಳಿತ ಯುವಕ
ಸ್ಮಾರಕಕ್ಕೆ ಭೇಟಿ ನೀಡುವ ಪ್ರವಾಸಿಗರು ಪ್ರವೇಶ ಟಿಕೆಟ್ ಅನ್ನು ಆನ್ ಲೈನ್ ನಲ್ಲಿ ಕಾಯ್ದಿರಿಸಬಹುದಾಗಿದೆ. ಆದರೆ ಯಾವುದೇ ಆಫ್ ಲೈನ್ (ಸ್ಥಳದಲ್ಲಿಯೇ ಟಿಕೆಟ್ ನೀಡುವುದು) ಟಿಕೆಟ್ ಬುಕಿಂಗ್ ವ್ಯವಸ್ಥೆ ಇಲ್ಲ ಎಂದು ಎಎಸ್ ಐ ವಿವರಿಸಿದೆ.
ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಎಲ್ಲಾ ಕೇಂದ್ರೀಕೃತ ಸಂರಕ್ಷಿತ ಸ್ಮಾರಕ, ವಸ್ತುಸಂಗ್ರಹಾಲಯಗಳನ್ನು ಜೂನ್ 16ರಿಂದ ತೆರೆಯಲು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಬಿಡುಗಡೆ ಮಾಡಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಎರಡನೇ ಕೋವಿಡ್ ಅಲೆ ಹರಡಲು ಪ್ರಾರಂಭವಾದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ಏಪ್ರಿಲ್ 15ರಿಂದ ತಾಜ್ ಮಹಲ್, ಕೆಂಪು ಕೋಟೆ, ಅಜಂತಾ ಗುಹೆ ಸೇರಿದಂತೆ ಪ್ರಮುಖ ಸ್ಮಾರಕಗಳನ್ನು ಬಂದ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.