Advertisement

ರೈತನ ಕೈ ಹಿಡಿದ ತೈವಾನ್‌ ಪಿಂಕ್‌: ಒಂದು ಎಕರೆಯಲ್ಲಿ ಲಕ್ಷ ರೂ. ಆದಾಯ

06:11 PM Jun 18, 2024 | Team Udayavani |

ಉದಯವಾಣಿ ಸಮಾಚಾರ
ರಾಣಿಬೆನ್ನೂರ: ಕೃಷಿಯಿಂದ ಬೇಸತ್ತು ವಿಮುಕ್ತಿ ಹೊಂದುತ್ತಿರುವ ಸಂದರ್ಭದಲ್ಲಿ ಇಲ್ಲೊಬ್ಬ ರೈತ ತೋಟಗಾರಿಕೆ ಇಲಾಖೆ ಮಾರ್ಗದರ್ಶನ ಪಡೆದು ನರೇಗಾ ಯೋಜನೆಯಡಿ ಒಂದು ಎಕರೆ ಜಮೀನಿನಲ್ಲಿ ತೈವಾನ್‌ ಪಿಂಕ್‌ ತಳಿಯ ಪೇರಲು ಹಣ್ಣು ಬೆಳೆದು ವರ್ಷಕ್ಕೆ ಒಂದು ಲಕ್ಷ ರೂ.ವರೆಗೆ ಆದಾಯ ಪಡೆದು ಇತರರಿಗೆ ಮಾದರಿಯಾಗಿದ್ದಾರೆ.

Advertisement

ರಾಣಿಬೆನ್ನೂರು ತಾಲೂಕಿನ ಸುಣಕಲ್‌ಬಿದರಿ ಗ್ರಾಮದ ಮಂಜಪ್ಪ ಸಿರಿಗೇರಿ ಎಂಬುವರು ಪೇರಲ ಬೆಳೆದು ಯಶಸ್ಸು ಕಂಡಿದ್ದಾರೆ. ಇವರು ಮೊದಲು ತಮ್ಮ ಒಂದು ಎಕರೆ ಜಮೀನಿನಲ್ಲಿ ಹತ್ತಿ ಅಥವಾ ಮೆಕ್ಕೆಜೋಳ ಬೆಳೆಯುತ್ತಿದ್ದರು. ಅದರಿಂದ ವರ್ಷಕ್ಕೆ ಖರ್ಚು ವೆಚ್ಚ ತೆಗೆದು 30ರಿಂದ 40 ಸಾವಿರ ರೂ. ಗಳಿಸಲು ಮಾತ್ರ ಸಾಧ್ಯವಾಗುತ್ತಿತ್ತು. ಆದರೆ ಗ್ರಾಪಂ ಮಾರ್ಗದರ್ಶನದಲ್ಲಿ ನರೇಗಾ ಯೋಜನೆಯಡಿ ಒಂದು ಎಕರೆ ಜಮೀನಿನಲ್ಲಿ ಕಳೆದ ವರ್ಷ 500 ಪೇರಲ ಸಸಿ ನಾಟಿ ಮಾಡಿದ್ದಾರೆ.

ತೋಟಗಾರಿಕೆ ಇಲಾಖೆ ತಾಂತ್ರಿಕ ಮಾರ್ಗದರ್ಶನದಲ್ಲಿ 8×8 ಅಡಿ ಅಂತರದಲ್ಲಿ ಪೇರಲು ನಾಟಿ ಮಾಡಿದ್ದು, ಸಮೃದ್ಧವಾಗಿ ಬೆಳೆದ ಪೇರಲ ಈಗ ಫಲ ನೀಡುತ್ತಿದೆ. ಇದು ವರ್ಷದಲ್ಲಿ ಎರಡು ಬಾರಿ ಫಲ ನೀಡುತ್ತಿದ್ದು, ಈಗಾಗಲೇ ಸುಮಾರು 60 ಬಾಕ್ಸ್‌ ಹಣ್ಣನ್ನು ಮಾರಾಟ ಮಾಡಲಾಗಿದೆ. ಪ್ರತಿ ಬಾಕ್ಸ್‌ಗೆ ಐದು ನೂರು ರೂಪಾಯಿಯಂತೆ ಮಾರಾಟಗಾರರು ತೋಟಕ್ಕೆ ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ. ಈಗಾಗಲೇ 30 ಸಾವಿರ ರೂ. ಆದಾಯ ಬಂದಿದ್ದು, ಇನ್ನೂ 40 ಸಾವಿರ ರೂ. ಆದಾಯ ನಿರೀಕ್ಷಿಸಿದ್ದಾರೆ.

ವರ್ಷದಲ್ಲಿ ಒಂದು ಬೆಳೆಗೆ ಸುಮಾರು ಖರ್ಚು ವೆಚ್ಚ ತೆಗೆದು 60ರಿಂದ 70 ಸಾವಿರ ಆದಾಯ ಗಳಿಸಲು ಸಾಧ್ಯವಾಗಿದೆ. ವರ್ಷಕ್ಕೆರಡು ಬೆಳೆ ಬಂದರೆ ಸುಮಾರು ಒಂದು ಲಕ್ಷ ರೂ.ವರೆಗೆ ಆದಾಯ ಬರುತ್ತದೆ. ರಾತ್ರಿ ವೇಳೆ ಕಾಯಿ ಕೊರೆಯುವ ಹುಳು ನಿಯಂತ್ರಣ ಮಾಡಲು ಪತಂಗ ಆಕರ್ಷಣೀಯ ಬುಟ್ಟಿ ಅಳವಡಿಸಿದ್ದರಿಂದ ಚುಕ್ಕೆ ಅಥವಾ ಕಾಯಿ ಕೊರಕ ರೋಗದ ಬಾಧೆಯಿಂದ ಪೇರಲ ಗಿಡ ಮತ್ತು ಹಣ್ಣುಗಳು ಮುಕ್ತವಾಗಿವೆ. ಇದರಿಂದ ರಾಸಾಯನಿಕ ಸಿಂಪಡಣೆಯ ಖರ್ಚೂ ಕಡಿಮೆಯಾಗಿದೆ. ಅಲ್ಲದೇ ಸಾವಯವ ಗೊಬ್ಬರ ಬಳಸಲಾಗಿದೆ. ಪತಂಗ ಆಕರ್ಷಣೀಯ ಬುಟ್ಟಿಗಳಿಗೆ ಸೋಲಾರ್‌ ವ್ಯವಸ್ಥೆ ಅಳವಡಿಸಲಾಗಿದೆ.

ಗ್ರಾಪಂ ಹಾಗೂ ತೋಟಗಾರಿಕೆ ಇಲಾಖೆ ಮಾರ್ಗದರ್ಶನದಲ್ಲಿ 500 ಪೇರಲ ಸಸಿ ನಾಟಿ ಮಾಡಿದ್ದು, ಈಗ ಸಮೃದ್ಧವಾಗಿ ಫಲ ನೀಡುತ್ತಿವೆ. ವರ್ಷದಲ್ಲಿ ಎರಡು ಬಾರಿ ಫಲ ನೀಡುತ್ತಿದ್ದು, ಈಗಾಗಲೇ ಸುಮಾರು 60 ಬಾಕ್ಸ್‌ ಹಣ್ಣನ್ನು ಮಾರಾಟ ಮಾಡಲಾಗಿದೆ. ರೈತರು ನರೇಗಾ ಯೋಜನೆ ಅಡಿ ಬಹುವಾರ್ಷಿಕ ಪೇರಲು ಬೆಳೆದರೆ ಆರ್ಥಿಕವಾಗಿ ಸುಧಾರಣೆಯಾಗಲು ಸಾಧ್ಯ.
●ಮಂಜಪ್ಪ ಸಿರಿಗೇರಿ,
ಸುಣಕಲ್‌ಬಿದರಿ ರೈತ.

Advertisement

ತಾಲೂಕಿನ ಸುಣಕಲ್‌ಬಿದರಿ ಗ್ರಾಮದ ಮಂಜಪ್ಪ ಸಿರಿಗೇರಿ ಅವರು ತೈವಾನ್‌ ಪಿಂಕ್‌ ತಳಿಯ ಪೇರಲ ಬೆಳೆದು ಯಶಸ್ವಿಯಾಗಿದ್ದಾರೆ. ಪೇರಲು ಬೆಳೆಗೆ ರೋಗ ನಿಯಂತ್ರಣ ಮಾಡಲು ಸೋಲಾರ್‌ ವ್ಯವಸ್ಥೆಯಲ್ಲಿ ಪತಂಗ ಆಕರ್ಷಣೀಯ ಬುಟ್ಟಿ ಅಳವಡಿಸಿದ್ದರಿಂದ ಪೇರಲದ ಹಣ್ಣುಗಳು ಯಾವುದೇ ಚುಕ್ಕೆ ಅಥವಾ ಕಾಯಿ ಕೊರಕ ರೋಗದ ಬಾಧೆಗೆ ತುತ್ತಾಗಿಲ್ಲ. ಕೀಟನಾಶಕ ಬಳಸದ ಕಾರಣ ಈ ಹಣ್ಣು ಆರೋಗ್ಯ ರಕ್ಷಣೆಗೆ ಉತ್ತಮ.
●ನೂರಅಹ್ಮದ್‌ ಹಲಗೇರಿ, ಹಿರಿಯ ಸಹಾಯಕ
ನಿರ್ದೇಶಕ, ತೋಟಗಾರಿಕೆ ಇಲಾಖೆ

■ ಮಂಜುನಾಥ ಎಚ್‌ ಕುಂಬಳೂರ

Advertisement

Udayavani is now on Telegram. Click here to join our channel and stay updated with the latest news.

Next