ಕೊರಟಗೆರೆ: ಸಸ್ಯ ಸಂಜೀವಿನಿ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಸಿದ್ದರಬೇಟ್ಟದ ಶ್ರೀಸಿದ್ದೇಶ್ವರ ಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಕೊರಟಗೆರೆ ತಹಶೀಲ್ದಾರ್ ನಾಹೀದಾ ಸಿದ್ದೇಶ್ವರ ಸ್ವಾಮಿಗೆ ಆರತಿ ಬೆಳಗಿ ಭಕ್ತಾಧಿಗಳಿಗೆ ದಾಸೋಹ ಬಡಿಸುತ್ತಿರುವ ವಿಡಿಯೋಗಳು ಸಾಮಾಜಿಕತಾಣದಲ್ಲಿ ವೈರಲ್ ಆಗುತ್ತಿವೆ.
ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಸಿದ್ದರಬೆಟ್ಟದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಶ್ರೀಸಿದ್ದೇಶ್ವರ ಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮದ ವೇಳೆ ತಹಶೀಲ್ದಾರ್ ನಾಹೀದಾ ಆರತಿ ಬೆಳಗಿ ಪೂಜೆ ಮತ್ತು ಭಕ್ತರಿಗೆ ಊಟ ಬಡಿಸಿದ ವಿಚಾರ ತಡವಾಗಿ ಸುದ್ದಿಯಾಗುತ್ತಿದೆ.
ಮುಜರಾಯಿ ಇಲಾಖೆಯಿಂದ ಏರ್ಪಡಿಸಲಾಗಿದ್ದ ಸಿದ್ದರಬೆಟ್ಟದ ಶ್ರೀಸಿದ್ದೇಶ್ವರ ಸ್ವಾಮಿಯ ರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶೀಲ್ದಾರ್ ನಾಹೀದಾ ನಂತರ ಸಿದ್ದೇಶರ ಸ್ವಾಮಿಯ ದರ್ಶನ ಪಡೆದರು.
ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ದೇವಾಲಯದಿಂದ ದಾಸೋಹದ ಕೊಠಡಿಗೆ ತೆರಳಿ ಸಿದ್ದೇಶ್ವರ ಭಕ್ತರಿಗೆ ಸ್ವತಃ ತಾವೇ ಖುದ್ದಾಗಿ ಪ್ರಸಾದ ಬಡಿಸಿ ಸಮಾಜದಲ್ಲಿ ಸಾಮರಸ್ಯ ಮೆರೆದಿದ್ದಾರೆ. ನಾಹೀದಾರವರ ಕಾರ್ಯವೈಖರಿ ಸಮಾಜದಲ್ಲಿ ಪ್ರತಿನಿತ್ಯ ಸೃಷ್ಟಿ ಆಗುವ ಧರ್ಮ ದಂಗಲ್‌ಗೆ ಸಮರ್ಪಕ ಉತ್ತರ ನೀಡುವಂತಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಂಜನೇಯ ಸ್ವಾಮಿಗೂ ಪೂಜೆ
ಕ್ಯಾಮೇನಹಳ್ಳಿಯ ಆಂಜನೇಯ ಸ್ವಾಮಿಯ ರಥೋತ್ಸವದ ವೇಳೆಯು ಸಹ ಕೊರಟಗೆರೆ ತಹಶೀಲ್ದಾರ್ ನಾಹೀದಾ ಇದೇ ರೀತಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಜನಸ್ನೇಹಿ ಆಗಿರುವ ತಹಶೀಲ್ದಾರ್ ಪ್ರತಿನಿತ್ಯ ಬಡಜನರೊಂದಿಗೆ ಬೆರೆತು ಕೆಲಸ ಮಾಡುತ್ತಾರೆ. ದೇವಾಲಯದ ವಿಚಾರ ಬಂದರೆ ವಿಶೇಷ ಕಾಳಜಿ ವಹಿಸಿ ಪೂಜಾ ವಿಧಿ ವಿಧಾನದಂತೆಯೇ ಕೆಲಸ ನಿರ್ವಹಣೆ ಮಾಡುವುದು ಭಕ್ತರಲ್ಲಿ ಸಂತಸ ತಂದಿದೆ.