Advertisement

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

02:27 AM May 19, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಒತ್ತಡಗಳಿಗೆ ಸೃಷ್ಟಿಯಾದ ಹೊಸ ತಾಲೂಕುಗಳು ಈಗ ಬಹುತೇಕ “ಅನಾಥ’ ಎಂಬಂತಾಗಿದೆ. ಎಚ್‌. ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ರಾಜಕೀಯ ಒತ್ತಡ ಹಾಗೂ ಪ್ರತಿಷ್ಠೆಗಾಗಿ ರಚನೆಯಾದ 25ಕ್ಕೂ ಹೆಚ್ಚು ನೂತನ ತಾಲೂಕುಗಳಿಗೆ ಇದುವರೆಗೂ ಕಾಯಕಲ್ಪ ದೊರೆತಿಲ್ಲ.

Advertisement

ಹೊಸ ತಾಲೂಕುಗಳ ರಚನೆಗೆ ಒತ್ತಡ ಹಾಗೂ ಆಸಕ್ತಿ ತೋರಿದ ಸ್ಥಳೀಯ ಶಾಸಕರು ಆ ಬಳಿಕ ಕಚೇರಿಗಾಗಿ ಜಾಗ ಹುಡುಕಿ ಕೊಡುವ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂಬುದು ಸರಕಾರದ ವಾದ. ಆದರೆ ಹಣಕಾಸು ಇಲಾಖೆ ಅನುದಾನ ಕೊಡದ ಕಾರಣ ಯಾವುದೇ ಪ್ರಗತಿ ಆಗಿಲ್ಲ ಎಂಬುದು ಶಾಸಕರ ಆರೋಪ. ಕೆಲವೆಡೆ ಅತ್ತ ಕಚೇರಿಯೂ ಇಲ್ಲ, ಇತ್ತ ತಹಶೀಲ್ದಾರ್‌ ನೇಮಕವೂ ಆಗಿಲ್ಲ. ಬೇರೆ ಪ್ರಮುಖ ಇಲಾಖೆಗಳೂ ವರ್ಗಾವಣೆ ಆಗಿಲ್ಲ. ಹೆಸರಿಗಷ್ಟೇ ತಾಲೂಕು ಕೇಂದ್ರವಾದಂತಾಗಿದೆ.

2017ರಿಂದೀಚೆಗೆ ಹೊಸದಾಗಿ ರಚನೆಯಾದ 58 ತಾಲೂಕುಗಳಲ್ಲಿ 25 ಕಡೆ ಕಾರ್ಯಾರಂಭ ಆಗಿಲ್ಲ. 8 ಕಡೆ ಮಿನಿ ವಿಧಾನಸೌಧ (ತಾಲೂಕು ಆಡಳಿತ ಸೌಧ) ನಿರ್ಮಾಣಗೊಂಡಿದೆ.

ಅನುದಾನವೇ ಇಲ್ಲ
ಪ್ರಮುಖವಾಗಿ ತಾಲೂಕುಗಳ ರಚನೆಯಾದ ಬಳಿಕ ಕಂದಾಯ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಿಬಂದಿ ನೇಮಕ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ. 30 ಇಲಾಖೆಗಳಿಗೆ ಸಂಬಂಧಿಸಿ ಅಧಿಕಾರಿಗಳು ಆಯಾ ತಾಲೂಕಿಗೆ ನೇಮಕವಾಗಬೇಕಾಗುತ್ತದೆ.

ಪ್ರತಿ ತಾಲೂಕು ರಚನೆ ಬಳಿಕ ತಹಶೀಲ್ದಾರ್‌ ಸಹಿತ ಸಿಬಂದಿ ನೇಮಕ, ತಾಲೂಕು ಕಚೇರಿ ನಿರ್ಮಾಣ ಸೇರಿ ಮೂಲಸೌಕರ್ಯಗಳಿಗೆ ಕನಿಷ್ಠ 50ರಿಂದ 100 ಕೋಟಿ ರೂ. ಅಗತ್ಯವಿದೆ. ಇದಕ್ಕೆ ಹಣಕಾಸು ಇಲಾಖೆಯ ಅನುಮತಿ ಬೇಕಾಗಿದೆ. ಆದರೆ ಹೊಸದಾಗಿ ರಚನೆಯಾದ ತಾಲೂಕುಗಳಿಗೆ ಬೇಕಾದ ಅನುದಾನವನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡಿಲ್ಲ.

Advertisement

ದಕ್ಷಿಣ ಕನ್ನಡ, ಉಡುಪಿ ಉತ್ತಮ
ಹಣಕಾಸು ಇಲಾಖೆ ಒಪ್ಪಿಗೆ ಸಿಗದೆ 25ಕ್ಕೂ ಹೆಚ್ಚು ತಾಲೂಕುಗಳಲ್ಲಿ ತಹಶೀಲ್ದಾರ್‌ ನೇಮಕ ವಾಗಿಲ್ಲ. ತಾಲೂಕು ಕಚೇರಿಯೂ ಪ್ರಾರಂಭ ವಾಗಿಲ್ಲ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಘೋಷಣೆಯಾದ ಹೊಸ ತಾಲೂಕು ಗಳು ಕಾರ್ಯಾರಂಭ ಆಗಿದ್ದು, ಉಳಿದೆಡೆ ಯಾವುದೇ ಪ್ರಗತಿಯಾಗಿಲ್ಲ ಎಂಬುದು ಸರಕಾರದ ಅಂಕಿ-ಅಂಶಗಳಿಂದಲೇ ಗೊತ್ತಾಗುತ್ತದೆ.

ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ ವಿಭಾಗಗಳ ಪೈಕಿ ಕಲಬುರಗಿ, ಬೆಳಗಾವಿ ವಿಭಾಗ ಗಳಲ್ಲಿ ಘೋಷಣೆಯಾದ ನೂತನ ತಾಲೂಕುಗಳಲ್ಲಿ ಹೆಚ್ಚಿನ ಕಡೆ ಕಚೇರಿ ನಿರ್ಮಾಣವಾಗಿಲ್ಲ ಹಾಗೂ ತಹಶೀಲ್ದಾರ್‌ ನೇಮಕವಾಗಿಲ್ಲ.

ಉದಾಹರಣೆಗೆ ನೂತನ ತಾಲೂಕು ರಚನೆ ಯಾಗಿ ಮೂರ್‍ನಾಲ್ಕು ವರ್ಷಗಳಾದರೂ ಚಿಕ್ಕಬಳ್ಳಾ ಪುರದ ಚೇಳೂರು, ಮಂಚೇನಹಳ್ಳಿ, ರಾಮನಗರದ ಹಾರೋಹಳ್ಳಿ, ಹಾಸನದ ಶಾಂತಿ ಗ್ರಾಮ, ಮೈಸೂರಿನ ಸರಗೂರು, ಸಾಲಿಗ್ರಾಮ, ಚಿಕ್ಕ ಮಗಳೂರಿನ ಅಜ್ಜಂಪುರ, ಕಳಸಾ ತಾಲೂಕು ಗಳಲ್ಲಿ ತಹಶೀಲ್ದಾರ್‌ಗಳ ನೇಮಕವೂ ಆಗಿಲ್ಲ.

ಈ ಮಧ್ಯೆ, ನೂತನ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಸಮಿತಿ ರಚಿಸಬೇಕು ಎಂಬ ಬೇಡಿಕೆಯೂ ಕೇಳಿಬರುತ್ತಿದೆ. ಈ ಹಿಂದೆ ಪ್ರಾದೇಶಿಕ ಅಸಮತೋ ಲನ ನಿವಾರಣೆಗೆ ರಚಿಸಲಾಗಿದ್ದ ನಂಜುಂಡಪ್ಪ ಸಮಿತಿಯಂತೆ ಈಗಲೂ ಮತ್ತೂಂದು ಸಮಿತಿ ರಚನೆಯಾಗಬೇಕು. ಅದರ ಆಧಾರದಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಶಾಸಕರಿಂದ ಕೇಳಿಬಂದಿದೆ.

ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಡಾ| ಡಿ.ಎಂ.ನಂಜುಂಡಪ್ಪ ವರದಿ ಆಧಾರದ ಮೇಲೆ ಆಗಿನ 175 ತಾಲೂಕುಗಳಲ್ಲಿ 114 ತಾ| ಹಿಂದುಳಿದ ಹಾಗೂ 39 ಅತ್ಯಂತ ಹಿಂದುಳಿದ ತಾಲೂಕುಗಳು ಎಂದು ಗುರುತಿಸ ಲಾಗಿತ್ತು. 114 ತಾಲೂಕುಗಳ ಅಭಿವೃದ್ಧಿಗಾಗಿ 2007ರಿಂದ 2014ರ ವರೆಗೆ 31 ಸಾವಿರ ಕೋಟಿ ರೂ. ಅಗತ್ಯ ಎಂದು ಶಿಫಾರಸು ಮಾಡ ಲಾಗಿತ್ತು. 2015-16ರಿಂದ 2019-20ರ ವರೆಗೆ ಪ್ರತೀವರ್ಷ 3 ಸಾವಿರ ಕೋಟಿ ರೂ. ಒದಗಿಸಲಾಗಿದೆ.

ಸಮೀಕ್ಷೆಯಲ್ಲೂ ಪ್ರಸ್ತಾವ
ಆರ್ಥಿಕ ಸಮೀಕ್ಷೆಯಲ್ಲೂ ಹಾಲಿ ಇರುವ ತಾಲೂಕುಗಳ ಅಭಿವೃದ್ಧಿ ಹಾಗೂ ಹೊಸದಾಗಿ ಘೋಷಣೆಯಾದ ತಾಲೂಕು ಗಳಲ್ಲಿ ಮೂಲಸೌಕರ್ಯ ಕಲ್ಪಿಸದ ಕಾರಣ ಅಭಿವೃದ್ಧಿಯಲ್ಲಿ ಹಿಂದುಳಿದಿರುವಿಕೆ ಬಗ್ಗೆ ಪ್ರಸ್ತಾವಿಸಲಾಗಿದೆ. ಕೃಷಿ, ಜಲಸಂಪನ್ಮೂಲ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು. ಶಿಕ್ಷಣದಲ್ಲಿ ಕಲಿಕೆ ಮತ್ತು ಫ‌ಲಿತಾಂಶಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರು, ಶಿಕ್ಷಕರ ನೇಮಕಕ್ಕೆ ಆದ್ಯತೆ ನೀಡ ಬೇಕು. ಕಲಬುರಗಿ ವಿಭಾಗದಲ್ಲಿ ಹಲವಾರು ವಿಷಯಗಳಲ್ಲಿ ತಾಲೂಕುಗಳು ಹಿಂದುಳಿದಿರುವಿಕೆ ಬಗ್ಗೆ ಪ್ರಸ್ತಾವಿಸಲಾಗಿದೆ.

ರಾಜಕೀಯ ಕಾರಣಗಳಿಗೆ ತಾಲೂಕುಗಳನ್ನು ಘೋಷಿಸಿ ಈಗ ಅಭಿವೃದ್ಧಿಯಾಗುತ್ತಿಲ್ಲ ಎಂದು ಆರೋಪಿಸ ಲಾಗುತ್ತಿದೆ. ತಾಲೂಕು ಕಚೇರಿಗಳಿಗೆ ಜಾಗ ಹುಡುಕಿಕೊಟ್ಟ ತತ್‌ಕ್ಷಣ ತಹಶೀಲ್ದಾರ್‌ ಸೇರಿ ಇತರ ಸಿಬಂದಿ ನೇಮಕ ಮಾಡುವುದಾಗಿ ಶಾಸಕರಿಗೆ ಮಾಹಿತಿ ನೀಡಿದ್ದೇವೆ. ಆರ್ಥಿಕ ದೃಷ್ಟಿಯಿಂದ ಹೊಸ ತಾಲೂಕು ಅಥವಾ ಜಿಲ್ಲೆಗಳ ರಚನೆ ಬಗ್ಗೆ ಸಾಕಷ್ಟು ಯೋಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.
– ಆರ್‌. ಅಶೋಕ್‌,
ಕಂದಾಯ ಸಚಿವ

ದಾವಣಗೆರೆಯ ನ್ಯಾಮತಿ ಹೊಸ ತಾಲೂಕು ಆಗಿ ಘೋಷಿಸಲಾಗಿತ್ತು. ಅಲ್ಲಿ ಮುಖ್ಯಮಂತ್ರಿಗಳ ವಾಸ್ತವ್ಯದ ಬಳಿಕ ತಹಶೀಲ್ದಾರ್‌ ನೇಮಕವಾಗಿದೆ. ಜಾಗ ಸಿಕ್ಕಿದ ಕೂಡಲೇ ತಾಲೂಕು ಕಟ್ಟಡ ನಿರ್ಮಾಣದ ಭರವಸೆಯೂ ಸಿಕ್ಕಿದೆ. ಘೋಷಣೆಯಾಗಿರುವ ಹೊಸ ತಾಲೂಕುಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಬೇಕು.
-ಎಂ.ಪಿ.ರೇಣುಕಾಚಾರ್ಯ, ಹೊನ್ನಾಳಿ ಶಾಸಕ

 ಎಸ್‌. ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next