Advertisement

ಆಜ್ರಿಯಲ್ಲಿ ತಹಶೀಲ್ದಾರ್‌ ಗ್ರಾಮ ವಾಸ್ತವ್ಯ : ಸ್ಥಳದಲ್ಲೇ ಹಲವು ಸಮಸ್ಯೆಗಳಿಗೆ ಪರಿಹಾರ

09:46 PM Feb 20, 2021 | Team Udayavani |

ಸಿದ್ದಾಪುರ: ಕುಂದಾಪುರ ತಾಲೂಕು ಆಡಳಿತದಿಂದ ಗ್ರಾಮೀಣ ಭಾಗವಾದ ಆಜ್ರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು.

Advertisement

ಸ್ಥಳದಲ್ಲಿಯೇ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡುಕೊಳ್ಳಲಾಗಿದ್ದರೂ, ಇಲಾಖೆಗಳ ತಾಂತ್ರಿಕ ದೋಷದಿಂದ ಒಂದಿಷ್ಟು ಸಮಸ್ಯೆಗಳು ಇತ್ಯರ್ಥವಾಗಲಿಲ್ಲ. ಇಲಾಖೆಗಳ ಸಮಸ್ಯೆಯಿಂದಾಗಿ ವೃದ್ಧರಿಗೆ ಪಿಂಚಣಿ ಯೋಜನೆ, ವಿಧವೆಯರಿಗೆ ವಿಧವ ವೇತನ ಸೇರಿದಂತೆ ಅನೇಕ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆಧಾರ ತಿದ್ದುಪಡಿಗಳಲ್ಲಿ ಆಗಿರುವ ಲೋಪ ದೋಷ‌ಗಳ ಬಗ್ಗೆಯೂ ಗ್ರಾಮಸ್ಥರು ತಹಶೀಲ್ದಾರ್‌ ಮುಂದೆ ಅಹವಾಲುಗಳನ್ನು ಸಲ್ಲಿಸಿದರು.

ಕುಂದಾಪುರ ತಾಲೂಕು ತಹಶೀಲ್ದಾರ್‌ಆನಂದಪ್ಪ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಆಜ್ರಿ ಗ್ರಾ. ಪಂ. ವ್ಯಾಪ್ತಿಯ ಸರಕಾರಿ ಜಮೀನು, ಶ್ಮಶಾನ, ಅಂಗನವಾಡಿಗಳ ಭೇಟಿ ಕಾರ್ಯಕ್ರಮ ಜರಗಿತು. ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ಸೌಲಭ್ಯ ಮಂಜೂರಾತಿ, ಪಹಣಿ ಪತ್ರ ಲೋಪದೋಷ ತಿದ್ದುಪಡಿ, ಅರ್ಜಿ ಸ್ವೀಕೃತಿ, ಗ್ರಾಮಸ್ಥರ ಸಮಸ್ಯೆ ಬೇಡಿಕೆಗಳ ಸ್ಪಂದನೆ ಇನ್ನಿತ್ಯಾದಿಗಳ ಬಗ್ಗೆ ಸ್ಥಳದಲ್ಲೇ ಪರಿಹಾರ ದೊರಕಿಸುವ ಕಾರ್ಯ ನಡೆಯಿತು.

ಇದನ್ನೂ ಓದಿ:ನಾಡಿನ ಮಹಾಪುರಷರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಬೇಕು: ಅರವಿಂದ ಲಿಂಬಾವಳಿ

ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಕೇಂದ್ರ ಕಚೇರಿಯ ಜಾಗವನ್ನು ಹಲವಾರು ವರ್ಷಗಳಿಂದ ಮಂಜೂರಾತಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದರೂ, ಮಂಜೂರಾತಿ ಆಗಿಲ್ಲ. ಇನ್ನಾದರೂ ಖಾಯಂ ಮಂಜೂರಾತಿ
ಕಲ್ಪಿಸಬೇಕೆಂದು ಮನವಿ ಸಲ್ಲಿಸಿದರು.

Advertisement

ಅರ್ಜಿಗಳು
ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಒಟ್ಟು 58 ಅರ್ಜಿಗಳನ್ನು ಸ್ವೀಕರಿಸಿ, ಕ್ರಮ ಕೈಗೊಂಡರು. ಪಿಂಚಣಿಗೆ ಸಂಬಂಧಿಸಿದ 21 ಅರ್ಜಿಗಳು, 94ಸಿಗೆ ಸಂಬಂಧಿಸಿದ 12 ಅರ್ಜಿಗಳು, ಆರ್‌ಟಿಸಿಗೆ ಸಂಬಂಧಿಸಿದ 15 ಅರ್ಜಿಗಳು, ಇತರ ಇಲಾಖೆಗಳಿಗೆ ಸಂಬಂಧಿಸಿದ 3 ಅರ್ಜಿಗಳು ಮತ್ತು ಇತರ 7 ಅರ್ಜಿಗಳು ಸ್ವೀಕೃತಗೊಂಡವು.

ಕುಂದಾಪುರ ತಾಲೂಕು ಉಪ ತಹಶೀಲ್ದಾರ್‌ ಎಸ್‌. ವಿ. ವಿನಯ್‌, ಕೆ. ಶಂಕರ್‌, ಕಂದಾಯ ನಿರೀಕ್ಷಕ ರಾಘವೇಂದ್ರ, ಕಾತರಾಜು, ಗ್ರಾಮ ಲೆಕ್ಕಿಗ ಚಂದ್ರಶೇಖರ್‌, ಮೊನೀಶ್‌, ಆಜ್ರಿ ಗ್ರಾಮ ಪಂಚಾಯ ತ್‌ ಆಡಳಿತಾಧಿಕಾರಿ ರಾಜೇಂದ್ರ, ಪಂಚಾ ಯತ್‌ ಅಭಿವೃದ್ಧಿ ಅಧಿಕಾರಿ ಗೋಪಾಲ ದೇವಾಡಿಗ, ಗ್ರಾಮ ಸಹಾಯಕರು ಮತ್ತಿತರರು ಉಪಸ್ಥಿತರಿದ್ದರು.

ತಾಂತ್ರಿಕ ಸಂಕಷ್ಟ
ಸರಕಾರದ ತಾಂತ್ರಿಕ ದೋಷದ ಪರಿಣಾಮ ಸಂಧ್ಯಾ ಸುರಕ್ಷ, ವಿಧವ ವೇತನ, ಅಂಗವಿಕಲ ವೇತನ, ಮನಸ್ವಿನಿ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಸಿಗದೆ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಕೊರೊನಾ ಹಿನ್ನೆಲೆಯಲ್ಲಿ ಆದಾಯ ಇಲ್ಲದೆ ಜನರು ಪರಿತಪಿಸುತ್ತಿದ್ದರೆ ಇನ್ನೊಂದೆಡೆ ಇಲಾಖೆಗಳಿಂದ ಸಿಗಬೇಕಾದ ಸೌಲಭ್ಯಗಳು ಸಿಗದೆ ಇನ್ನೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸರಕಾರ, ಇಲಾಖೆಗಳು ಗಮನ ಹರಿಸಬೇಕು ಎನ್ನುವ ಆಗ್ರಹಗಳು ಕೇಳಿಬಂದವು.

ಅಹವಾಲು
ಅರಣ್ಯ ಇಲಾಖೆಯ ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಮತ್ತು ಇತರ ಸಮಸ್ಯೆಯಿಂದಾಗಿ 94ಸಿ ಹಕ್ಕುಪತ್ರ, ಆರ್‌ಟಿಸಿ, ಭೂಮಿಯ ಮಂಜೂರಾತಿ ಆಗಿದ್ದರೂ, ಆರ್‌ಟಿಸಿ ಆಗದಿರುವ ಬಗ್ಗೆ ಜನರು ಅಸಮಾಧಾನ ವ್ಯಕ್ತ ಪಡಿಸಿದರು. ಹಿಂದೆ ಅಕ್ರಮ ಸಕ್ರಮ ಅಡಿಯಲ್ಲಿ ಅರ್ಜಿ ನಮೂನೆ 53 ಮತ್ತು 57ನಲ್ಲಿ ನೀಡಿರುವ ಅರ್ಜಿಗಳು ಇತ್ಯರ್ಥ ಆಗದಿರುವ ಬಗ್ಗೆ, ಒಂದಿಷ್ಟು ಮಂಜೂರಾತಿ ಆಗಿದ್ದರೂ, ಆರ್‌ಟಿಸಿ ಆಗಿಲ್ಲ. ಅನಂತರ ಸರಕಾರಿ ಜಾಗದಲ್ಲಿ ಕುಳಿತಿರುವವ ಅನುಕೂಲಕ್ಕಾಗಿ 94ಸಿ ಜಾರಿಗೆ ಬಂದರೂ, ಡೀಮ್ಡ್ ಫಾರೆಸ್ಟ್‌ ಸಮಸ್ಯೆಯಿಂದಾಗಿ ಕೆಲವರಿಗೆ ಮಂಜೂರಾತಿ ಸಿಗದಿರುವ ಬಗ್ಗೆ ಹೇಳಿದರು. ಗ್ರಾಮದ ಕೆಲವೊಂದು ಭಾಗಗಳಲ್ಲಿ ಸಂಪೂರ್ಣ ಡೀಮ್ಡ್ ಫಾರೆಸ್ಟ್‌ ಹಾಗೂ ಇನ್ನೂ ಕೆಲವು ಭಾಗಗಳಲ್ಲಿ ಭಾಗಶಃ ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಇರುದರಿಂದ ಫಲಾನುಭವಿಗಳಿಗೆ ಹಕ್ಕು ಪತ್ರ ಸಿಗದೆ ಸಮಸ್ಯೆಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next