ಗೋಕರ್ಣ: ವಾತಾವರಣ ವೈಪರಿತ್ಯದಿಂದಾಗಿ ಮೀನುಗಾರರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಳ ಸಮುದ್ರದಲ್ಲಿ ಮೀನು ಕೂಡ ಸರಿಯಾಗಿ ಸಿಗದಿರುವುದರಿಂದ ಮೀನುಗಾರರು ಮೀನಿಲ್ಲದೇ ದಡಕ್ಕೆ ವಾಪಸ್ಸಾಗುವಂತಾಗಿದೆ. ಹೀಗಾಗಿ ಕೆಲವರು ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ.
ಇಲ್ಲಿಯ ಸಮೀಪದ ತದಡಿ ಬಂದರು ರಾಜ್ಯದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಈ ಬಂದರಿನಲ್ಲಿ ಮೀನುಗಾರಿಕೆ ಮಾತ್ರ
ನಡೆಯುತ್ತದೆ. ಉತ್ತಮ ಮೀನು ಸಿಕ್ಕಾಗ ಅದನ್ನು ಖರೀದಿಸುವುದು, ಸಾಗಿಸುವುದು ಸೇರಿದಂತೆ ಪ್ರತ್ಯಕ್ಷ ಪರೋಕ್ಷವಾಗಿ ಉದ್ಯೋಗ
ಸೃಷ್ಟಿಯಾಗುತ್ತಿದ್ದವು. ಆದರೆ ಈಗ ಮೀನು ಶಿಕಾರಿಗೆ ಹೋದರೆ ಬೋಟ್‌ನ ಇಂಧನದ ಖರ್ಚು ಕೂಡ ಆಗುವುದಿಲ್ಲ ಎಂಬ ಕಾರಣಕ್ಕಾಗಿ ಮೀನುಗಾರಿಕೆ ಸ್ಥಗಿತಗೊಳಿಸಿದ್ದು ಇಲ್ಲಿಯ ಅಂಗಡಿಕಾರರು ಕೂಡ ವ್ಯಾಪಾರವಿಲ್ಲದೇ ಕೈಕಟ್ಟಿ ಕುಳಿತಿದ್ದಾರೆ.
ದಿನಕ್ಕೆ ನೂರಾರು ಬೋಟ್‌ಗಳು ತದಡಿ ಬಂದರಿಗೆ ಆಗಮಿಸುತ್ತಿದ್ದವು. ಆದರೆ ಈಗ ಅಲ್ಲಲ್ಲಿ ಒಂದೆರಡು ಬೋಟ್‌ಗಳನ್ನು ಬಿಟ್ಟರೆ ಹೆಚ್ಚಿನ ಬೋಟ್‌ಗಳು ಬಂದರಿನಲ್ಲಿ ಕಾಣಸಿಗುವುದಿಲ್ಲ. ಹೀಗಾಗಿ ಇಲ್ಲಿಯ ಉಳಿದ ವ್ಯಾಪಾರ-ವಹಿವಾಟಿನ ಮೇಲೆ ಪರೋಕ್ಷವಾಗಿ ಭಾರೀ ಪ್ರಮಾಣದ ಏಟು ಬಿದ್ದಂತಾಗಿದೆ. ಮಂಜುಗಡ್ಡೆ ಕಾರ್ಖಾನೆಯವರಿಗೆ ಬೇಡಿಕೆ ಇಲ್ಲದೇ ತಟಸ್ಥರಾಗಿದ್ದಾರೆ.
ಈ ಹಿಂದೆ ತದಡಿ ಬಂದರಿನಿಂದಲೇ ಅತಿ ಹೆಚ್ಚು ಮೀನುಗಳನ್ನು ಬೇರೆ ರಾಜ್ಯಗಳಿಗೆ ರಫು¤ ಮಾಡಲಾಗುತ್ತಿತ್ತು. ಆದರೆ ಈಗ ದೊಡ್ಡ ಮಟ್ಟದಲ್ಲಿ ರಫ್ತು ಮಾಡುವುದಿರಲಿ, ಇಂಧನಕ್ಕೆ ಖರ್ಚು ಮಾಡಿದ್ದನ್ನೂ ಗಳಿಸಲಾಗುತ್ತಿಲ್ಲ ಎನ್ನುವುದೇ ಮೀನುಗಾರರ ಅಳಲಾಗಿದೆ. ಹೀಗಾಗಿ ಮೀನುಗಾರಿಕೆ ಇಲ್ಲದೆ ತದಡಿ ಬಂದರು ಮಂಕಾಗಿದೆ.