Advertisement

ದಸರಾ ಸಂಭ್ರಮಕ್ಕೆ ವೈವಿಧ್ಯ ಸ್ತಬ್ಧ ಚಿತ್ರ!

01:24 PM Oct 04, 2022 | Team Udayavani |

ಮಹಾನಗರ: ನವರಾತ್ರಿ ಮಹೋತ್ಸವದಲ್ಲಿ ಜನಸಮುದಾಯದ ಭಕ್ತಿಯ ಸಿಂಚನದ ಜತೆಗೆ ಶಾರದಾ ಮಾತೆಯ ಭವ್ಯ ಮೆರವಣಿಗೆಗೆ ಆಧ್ಯಾತ್ಮಿಕ ಹಾಗೂ ಸಮಾಜಮುಖೀ ಸಂದೇಶ ಗಳೊಂದಿಗೆ ಮೆರುಗು ತುಂಬುವುದೇ ಸ್ತಬ್ಧ ಚಿತ್ರಗಳು!

Advertisement

ಭವ್ಯ ಶೋಭಾಯಾತ್ರೆಯಲ್ಲಿ ಶಾರದಾ ಮಾತೆಯು ಭಕ್ತಿಯ ಕೇಂದ್ರ ವಾದರೆ, ಸ್ತಬ್ಧಚಿತ್ರಗಳು ಸಂದೇಶ ಸಾರುವ ಆಕರ್ಷಕ ಪರಿಕಲ್ಪನೆ. ಮಂಗಳೂರು ದಸರಾ, ಮಂಗಳಾದೇವಿ ಸಹಿತ ವಿವಿಧ ಕಡೆಗಳಲ್ಲಿ ನಡೆಯುವ ದಸರಾ ಶೋಭಾಯಾತ್ರೆಗೆ ಟ್ಯಾಬ್ಲೋಗಳು ಬಹು ವಿಧದಲ್ಲಿ ಜನಾಕರ್ಷಕ.

ಪೌರಾಣಿಕ ಹಿನ್ನೆಲೆ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸಂದೇಶಗಳನ್ನು ಸಾರುವುದು ಟ್ಯಾಬ್ಲೋಗಳ ಮುಖ್ಯ ಆದ್ಯತೆ. ಇದಕ್ಕಾಗಿ ಆಕರ್ಷಕ ವಿಗ್ರಹಗಳನ್ನು ರಚಿಸಿ ಅದಕ್ಕೆ ಬಣ್ಣ ಹಾಗೂ ವಸ್ತ್ರ ಶೃಂಗಾರದೊಂದಿಗೆ ಕಂಗೊಳಿಸುವಂತೆ ಮಾಡಲಾಗುತ್ತದೆ.

ಬೆಳಕಿನ ಚಿತ್ತಾರದೊಂದಿಗೆ ಗಮನ ಸೆಳೆಯುವಂತೆ ಮಾಡಲಾಗುತ್ತದೆ. ಹಿನ್ನೆಲೆ ಧ್ವನಿ ಮತ್ತಷ್ಟು ಆಕರ್ಷಿಸುತ್ತದೆ. ಈ ಮಧ್ಯೆ, ಕೆಲವು ಸ್ತಬ್ಧ ಚಿತ್ರಗಳಲ್ಲಿ ಹುಲಿ ವೇಷ ಸಹಿತ ನೃತ್ಯವೇ ಪ್ರಧಾನವಾಗಿರುತ್ತದೆ.

ಕರಾವಳಿ ಮಾತ್ರವಲ್ಲದೆ ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುವ ದಸರಾ ಅಥವಾ ಇತರ ಉತ್ಸವ ಸಂದರ್ಭಗಳಿಗೆ ಟ್ಯಾಬ್ಲೋಗಳನ್ನು ಮಂಗಳೂರು ಕೇಂದ್ರಿತವಾಗಿಯೇ ಪಡೆದುಕೊಂಡು ಪ್ರದರ್ಶಿಸಲಾಗುತ್ತದೆ ಎಂಬುದು ವಿಶೇಷ. ಹಲವು ಕಲಾವಿದರು ಇದಕ್ಕಾಗಿ ವಿಶೇಷವಾಗಿ ಶ್ರಮಿಸುತ್ತಿದ್ದಾರೆ.

Advertisement

ಸ್ತಬ್ಧ ಚಿತ್ರ ರಚನೆ ಹೇಗೆ?

ಖ್ಯಾತ ಕಲಾವಿದ, ಕಲಾಕೃತಿಗಳನ್ನು ರಚನೆ ಮಾಡುವ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ, ಬಾಲಕೃಷ್ಣ ಅವರು “ಸುದಿನ’ ಜತೆಗೆ ಮಾತನಾಡಿ, “ಸ್ತಬ್ಧತ್ರಗಳ ನಿರ್ಮಾಣದಲ್ಲಿ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ಮಂಗಳೂರು, ಮೈಸೂರು, ಮಡಿಕೇರಿ ದಸರಾಗಳಿಗೆ ಟ್ಯಾಬ್ಲೋಗಳನ್ನು ಸಿದ್ಧಪಡಿಸಿ ನೀಡಲಾಗುತ್ತದೆ.

ಈ ಬಾರಿ ಉಚ್ಚಿಲ ದಸರಾಕ್ಕೂ ಹಲವು ಟ್ಯಾಬ್ಲೋ ಇಲ್ಲಿಂದಲೇ ಸಿದ್ಧಪಡಿ ಸಲಾಗುತ್ತದೆ. ಉಳಿದಂತೆ ಮೊಸರು ಕುಡಿಕೆ ಸಹಿತ ವಿವಿಧ ಕಡೆಗಳ ಉತ್ಸವ ಗಳಿಗೆ ಸರಕಾರಿ ಉತ್ಸವಗಳಿಗೆ ಟ್ಯಾಬ್ಲೋ ಸಿದ್ಧ ಪಡಿಸಲಾಗುತ್ತದೆ’ ಎನ್ನುತ್ತಾರೆ.ಆವೆಮಣ್ಣು, ಬೈ ಹುಲ್ಲು, ಉಮಿ (ಭತ್ತದ ಸಿಪ್ಪೆ) ಮಿಶ್ರಣ ಮಾಡಿ ವಿಗ್ರಹ ತಯಾರಿಸಲಾಗುತ್ತದೆ. ಅನಂತರ ಅದರ ಮೇಲೆ ಚಿತ್ರದ ರೂಪ ಮಾಡಲಾಗುತ್ತದೆ.

ಪೈಬರ್‌ ಅಚ್ಚಿನಿಂದ ಇತರ ಪೂರಕ ಚಿತ್ರಗಳನ್ನು ಮಾಡಲಾಗುತ್ತದೆ. ಬಳಿಕ ವಿಗ್ರಹದ ಚಲನೆಗೆ ಬೇಕಾದ ಕಬ್ಬಿಣದ ಕೆಲಸ ಮಾಡಲಾಗುತ್ತದೆ. ಇವುಗಳಿಗೆ ಬಣ್ಣ ಬಳಿಯುವುದರಿಂದ ಹಾಗೂ ಆಭರಣಗಳನ್ನು ತೊಡಿಸುವುದರಿಂದ ನೈಜತೆ ಕಂಡಕೊಳ್ಳಲಾಗುತ್ತದೆ ಎನ್ನುತ್ತಾರೆ ಅವರು.

ಸ್ತಬ್ಧಚಿತ್ರ ರಚಿಸಲು ಮರದ ತುಂಡು, ಕಬ್ಬಿಣದ ಪರಿಕರ ಬಳಕೆ ಮಾಡಲಾಗುತ್ತದೆ. ಆವೆ ಮಣ್ಣಿನ ಕೆಲಸದ ಉಪಯೋಗಕ್ಕೆ ಮರದ ಉಪಕರಣ ಬಳಸಲಾಗುತ್ತದೆ. ವೆಲ್ಡಿಂಗ್‌ ಮಿಷನ್‌, ಕಟ್ಟಿಂಗ್‌ ಮಿಷನ್‌, ಕಂಪ್ರೈಸರ್‌, ಸೋಲ್ಡರಿಂಗ್‌ ಮಿಷನ್‌ ಮುಂತಾದ ಉಪಕರಣ ಅತೀ ಅಗತ್ಯ. ಪ್ರದರ್ಶನಕ್ಕೆ ಅನುಕೂಲವಾಗುವ ವಾಹನವೂ ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next