ಭಾರತದಲ್ಲಿ ಕಲೆ, ಕಲಾವಿದ ಧರ್ಮ, ಜಾತಿಯನ್ನು ಮೀರಿದೆ ಎನ್ನುವುದಕ್ಕೆ ಅನೇಕರು ಸಾಕ್ಷಿಯಾಗಿದ್ದಾರೆ. ಕಲಾವಿದರನ್ನು ಎಲ್ಲರೂ ಸ್ವೀಕರಿಸಿರುವುದು ಅವರಲ್ಲಿನ ಕಲಾ ಪ್ರತಿಭೆಗಾಗಿ ಅನ್ನುವುದೇ ಭಾರತೀಯತೆಯ ವೈಶಿಷ್ಟ್ಯ. ಪಕ್ಕವಾದ್ಯವಾಗಿ ಬಳಕೆಯಾಗುವ ತಾಳವಾದ್ಯ ತಬಲಾ ಮೂಲಕ ಸರಸ್ವತಿಯ ವರ ಪುತ್ರನೆನಿಸಿಕೊಂಡ ಜಾಕೀರ್ ಹುಸೇನ್ ಅವರು ತನ್ನ ಕೈಚಳಕ, ಲಯ ಲಾಸ್ಯದ ಮೂಲಕ ಜಗತ್ತಿನ ಕೋಟ್ಯಂತರ ಜನರ ಮನಗೆದ್ದು ಮರೆಯಾದವರು. ಆದರೆ ಸಂಗೀತ ಪ್ರಪಂಚದಲ್ಲಿ ಅಳಿಸಲಾರದ ಹೆಸರಾಗಿ ಉಳಿಯಲಿದ್ದಾರೆ ಉಸ್ತಾದ್..
ಬಾಲ್ಯದಲ್ಲೇ ಸರಸ್ವತಿಯ ಮಂತ್ರ!
ತಬಲಾ ಮಾಸ್ಟರ್ ಅಲ್ಲಾ ರಾಖಾ ಖುರೇಷಿ ಅವರ ಪುತ್ರನಾಗಿ ಜನಿಸಿದ ಜಾಕೀರ್ ಅವರಿಗೆ ಬಾಲ್ಯದಲ್ಲೇ ಕಲಾ ಪ್ರಪಂಚದ ಸಂಸ್ಕಾರ ಮೈಗೂಡಿತ್ತು. ಅದು ಸಂಗೀತ ಲೋಕದ ಮೇರು ಶಿಖರವನ್ನು ಏರಲು ಸಹಕಾರಿಯಾಯಿತು.
ಜಾಕೀರ್ ಹುಸೇನ್ ಅವರು ಸಂದರ್ಶನವೊಂದರಲ್ಲಿ ಬಾಲ್ಯದಲ್ಲಿ ನಡೆದ ವಿಚಾರವನ್ನು ಹಂಚಿಕೊಂಡಿದ್ದರು. ಕೆಲವೇ ದಿನದ ಹಸುಗೂಸಾಗಿದ್ದ ವೇಳೆ ಮನೆಗೆ ತಾಯಿಯೊಂದಿಗೆ ಬಂದಾಗ, ತಂದೆ ಇಸ್ಲಾಂ ಸಂಪ್ರದಾಯದಂತೆ ಮಗುವಿನ ಕಿವಿಯಲ್ಲಿ ದೇವರ ಪ್ರಾರ್ಥನೆಯನ್ನು ಹೇಳುವುದು ವಾಡಿಕೆ. ಆದರೆ ಅಲ್ಲಾ ರಾಖಾ ಖುರೇಷಿ ಅವರು ಜಾಕೀರ್ ಅವರ ಕಿವಿಯಲ್ಲಿ ಪ್ರಾರ್ಥನೆ ಬದಲಾಗಿ ತಬಲಾದ ತಾಳ, ಲಯವನ್ನು ಉಚ್ಚರಿಸಿದರು. ಎಲ್ಲರೂ ಅಚ್ಚರಿಗೊಳಗಾಗಿ ಇದೇನು ಮಾಡುತ್ತಿದ್ದಾರೆ ಎಂದು ಆಲೋಚಿಸಿದರು. ಪ್ರಶ್ನಿಸಿದ ಪತ್ನಿಗೆ, ಅಲ್ಲಾ ರಾಖಾ ಖುರೇಷಿ ಅವರು, ನಾನು ಸರಸ್ವತಿ ಮತ್ತು ಗಣೇಶನ ಆರಾಧಕ. ನಾನು ನುಡಿಸುವ ಸಂಗೀತ ನನ್ನ ಪ್ರಾರ್ಥನೆ. ಆ ಪ್ರಾರ್ಥನೆಯನ್ನೇ ಮಗುವಿನ ಕಿವಿಯಲ್ಲಿ ಹೇಳಿದ್ದೇನೆ.ನನ್ನ ಮಗನೂ ನನ್ನ ಪರಂಪರೆಯನ್ನೇ ಮುಂದುವರಿಸಬೇಕೆಂಬುದು ನನ್ನ ಬಯಕೆ ಎಂದಿದ್ದರು.. ಎಂದು ಜಾಕೀರ್ ಅವರು ತನ್ನ ಕಲಾ ಆರಾಧನೆಯ ಯಶಸ್ಸಿನ ಗುಟ್ಟುಬಿಟ್ಟುಕೊಟ್ಟಿದ್ದರು.
ಉಡುಪಿ ಕೃಷ್ಣಮಠಕ್ಕೆ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ವೇಳೆ ಅಪಾರ ಸಂಗೀತ ಪ್ರೇಮಿಗಳ ಸಮ್ಮುಖದಲ್ಲಿ ”ಗಣಪತಿಯ ಅನುಗ್ರಹ, ಕೃಷ್ಣನ ಶಂಖನಾದ, ಈಶ್ವರನ ಆಶೀರ್ವಾದ ನನ್ನ ನನ್ನ ಮೇಲೆ ಇರುವುದರಿಂದ ಈ ಹಂತಕ್ಕೆ ಬಂದು ನಿಂತಿದ್ದೇನೆ” ಎಂದು ವೇದಿಕೆಯಲ್ಲಿ ಉಸ್ತಾದ್ ಜಾಕೀರ್ ಹುಸೇನ್ ಹೇಳಿಕೊಂಡಿದ್ದರು.
ಸಾವಿರಾರು ಸಮ್ಮಾನಗಳು
1988 ರಲ್ಲಿ ಪ್ರಖ್ಯಾತಿಯ ಉತ್ತುಂಗದಲ್ಲಿದ್ದ ವೇಳೆ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗುರುತಿಸಿತ್ತು. ಆಗ ಅವರು 37 ರ ಯುವಕ. ಜಗತ್ತಿನೆಲ್ಲೆಡೆ ಸಂಗೀತ ಲೋಕದ ನಾದ ಹೆಚ್ಚಿಸಿ ಸಂಪಾದಿಸಿದ ಗೌರವ ಅಳತೆ ಮಾಡಲು ಸಾಧ್ಯವಾಗದಷ್ಟು. ಸಾಧನೆಯಲ್ಲಿ ಹಿಂದಿರುಗಿ ನೋಡದ ಉಸ್ತಾದರು ತಬಲಾಗಳೊಂದಿಗೆ ವಿಶ್ವದ ಎಲ್ಲ ಸಂಗೀತ ಪರಿಕರಗಳೊಂದಿಗೂ ಸಾಥಿಯಾಗಿ ವಿಶ್ವ ಮನ್ನಣೆ ಪಡೆದರು. ಅದು ಹಿಂದುಸ್ಥಾನಿಯ ಹಾರ್ಮೋನಿಯಂ ಇರಲಿ, ವೀಣೆ ಇರಲಿ, ವಾಯ್ಲಿನ್, ಗಿಟಾರ್, ಸಂತೂರ್, ಸೀತಾರ್, ಬಾನ್ಸುರಿ… ಜತೆಯಾದಲ್ಲೆಲ್ಲ ದಿಗ್ಗಜರೊಂದಿಗೆ ತನ್ನ ಕೈ ಬೆರಳುಗಳ ಊಹಿಸಲಸಾಧ್ಯವಾದ ಚುರುಕುತನದಿಂದ ಮೋಡಿ ಮಾಡಿದರು. ಅಭಿಮಾನಿಗಳ ಚಪ್ಪಾಳೆಯ ಸುರಿಮಳೆಯಲ್ಲಿ ಮಿಂದೆದ್ದರು. ಅರ್ಹವಾಗಿ ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗೂ ಭಾಜನರಾದರು.
ಒಂದೇ ರಾತ್ರಿ ಮೂರು ಗ್ರ್ಯಾಮಿ!!!
ಸಂಗೀತ ಕ್ಷೇತ್ರದ ಸಾಧಕರಿಗೆ ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ರೆಕಾರ್ಡಿಂಗ್ ಆರ್ಟ್ಸ್ & ಸೈನ್ಸಸ್ ಕೊಡ ಮಾಡುವ ಅತ್ಯುನ್ನತ ಗ್ರ್ಯಾಮಿ(GRAMMY) ಪ್ರಶಸ್ತಿಯನ್ನು ಐದು ಬಾರಿ ಪಡೆದಿರುವುದು ಶ್ರೇಷ್ಠತೆಗೆ ಸಂದ ಮಹಾ ಗೌರವ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಚಾರ. ಪ್ರತಿಷ್ಠಿತ ಗ್ರಾಮ್ಮಿ ಮೌಲ್ಯವೇ ಅತಿ ಹೆಚ್ಚು ಬೆಲೆಬಾಳುವ ಮತ್ತು ಅಳೆಯಲಾಗದಂತಹದ್ದು. 2024 ರ ಲ್ಲಿ ಒಂದೇ ರಾತ್ರಿ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದು ಜಾಕೀರ್ ಹುಸೇನ್ ಇತಿಹಾಸ ನಿರ್ಮಿಸಿದರು, ಒಂದೇ ರಾತ್ರಿ ಮೂರು ಗ್ರ್ಯಾಮಿಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮೂರು ವಿಭಾಗಗಳಲ್ಲಿ This Moment ಗಾಗಿ ಅತ್ಯುತ್ತಮ ಜಾಗತಿಕ ಸಂಗೀತ ಆಲ್ಬಮ್, Pashto ಗಾಗಿ ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ ಮತ್ತು As We Speak ಗಾಗಿ ಅತ್ಯುತ್ತಮ ಸಮಕಾಲೀನ ವಾದ್ಯಗಳ ಆಲ್ಬಮ್ ಮೂಲಕ ಮಹೋನ್ನತ ಸಾಧಕನ ಕೀರಿಟಕ್ಕೆ ಇನ್ನೂ ಮೂರು ಗರಿಗಳನ್ನು ಸಿಲುಕಿಸಿಕೊಂಡರು.
ಇನ್ನಷ್ಟು ಕಾಲ ಬದುಕಬೇಕಿತ್ತು
ಅಮೆರಿಕ ದಂತಹ ಆರೋಗ್ಯ ಕ್ಷೇತ್ರದ ಮುಂಚೂಣಿಯಲ್ಲಿರುವ ದೇಶದಲ್ಲಿ ಜಾಕೀರ್ ಹುಸೇನ್ ಅವರಂತಹ ದಿಗ್ಗಜ ಕಲಾವಿದನಿಗೆ ಸೂಕ್ತ ಚಿಕಿತ್ಸೆ ನೀಡುವುದು ಸಾಧ್ಯವಾಗಲಿಲ್ಲವೇ ಎನ್ನುವ ಪ್ರಶ್ನೆಯೂ ಹಲವರನ್ನು ಕಾಡಿರಬಹುದು. ಅದಕ್ಕೆ ಕಾರಣ ಅವರ ಕೊನೆಯ ಕ್ಷಣದಲ್ಲಿ ಹಬ್ಬಿದ ಗೊಂದಲಕಾರಿ ಸುದ್ದಿಗಳೂ ಇನ್ನೊಂದೆಡೆ.
ತಬಲಾ ಮಾಂತ್ರಿಕ ಜಾಕೀರ್ ಅವರ ಜೀವನದ ಅಂತ್ಯಕ್ಕೆ ಕಾರಣವಾದುದು ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್, ದೇಹವನ್ನು ದುರ್ಬಲಗೊಳಿಸುವ ಕಾಯಿಲೆ ಎಂದು ವೈದ್ಯರು ಹೇಳಿದ್ದಾರೆ.ಈ ಕಾಯಿಲೆ ಬಂದರೆ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುವುದಿಲ್ಲ, ಇದಕ್ಕೆ ಶ್ವಾಸಕೋಶದ ಕಸಿ ಮಾತ್ರ ನಿರ್ಣಾಯಕ ಚಿಕಿತ್ಸೆ. ಅದೂ ಕೂಡ ಸರಿಯಾದ ಸಮಯದಲ್ಲಿ ಮಾಡಿದರೆ ಮಾತ್ರ ಎಂದು ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಗಳ ಉಸಿರಾಟ ಮತ್ತು ಕ್ರಿಟಿಕಲ್ ಕೇರ್ ವಿಭಾಗದ ಹಿರಿಯ ಸಲಹೆಗಾರ ಡಾ ಅವಧೇಶ್ ಬನ್ಸಾಲ್ ಹೇಳಿದ್ದಾರೆ.