Advertisement

ಟಿ20 ವಿಶ್ವಕಪ್‌: ಭಾರತಕ್ಕೆ ಇಂದು ಜಿಂಬಾಬ್ವೆ ಸವಾಲು

11:00 PM Nov 05, 2022 | Team Udayavani |

ಮೆಲ್ಬರ್ನ್: ಟಿ20 ವಿಶ್ವಕಪ್‌ ಕೂಟದಲ್ಲಿ ರವಿವಾರ ಬಣ ಎರಡರಲ್ಲಿ ಮೂರು ಸೂಪರ್‌ 12 ಪಂದ್ಯಗಳು ನಡೆಯಲಿವೆ. ಎಲ್ಲ ತಂಡಗಳಿಗೆ ಗೆಲುವು ಅತೀ ಮುಖ್ಯವಾಗಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವು ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದ್ದರೆ ದ್ವಿತೀಯ ಪಂದ್ಯವು ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ನಡುವೆ ನಡೆಯಲಿದೆ. ಮೂರನೇ ಪಂದ್ಯದಲ್ಲಿ ಭಾರತವು ಜಿಂಬಾಬ್ವೆಯನ್ನು ಎದುರಿಸಲಿದೆ.

Advertisement

ಸದ್ಯ ಬಣ ಎರಡರಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನದಲ್ಲಿದೆ. ಒಂದು ವೇಳೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದರೆ ಈ ಎರಡು ತಂಡಗಳು ಸೆಮಿಫೈನಲಿಗೇರಲಿದೆ. ಒಂದು ವೇಳೆ ಭಾರತ ಸೋತರೆ ಪಾಕಿಸ್ಥಾನವು ಬಾಂಗ್ಲಾದೇಶದ ವಿರುದ್ಧ ಜಯ ಸಾಧಿಸಿದರೆ ಆದು ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಸೆಮಿಫೈನಲಿಗೆ ಏರಲಿದೆ.

ಸದ್ಯ ದ್ವಿತೀಯ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾವು ರವಿವಾರದ ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಸೋತರೆ ಪಾಕಿಸ್ಥಾನವು ಬಾಂಗ್ಲಾ ವಿರುದ್ಧ ಗೆದ್ದರೆ ಅದು ಭಾರತದ ಜತೆ ಸೆಮಿಫೈನಲಿಗೇರುವ ಸಾಧ್ಯತೆಯಿದೆ. ಒಂದು ವೇಳೆ ಭಾರತ ಗೆದ್ದು ಬಣದ ಅಗ್ರಸ್ಥಾನ ಪಡೆದರೆ ಸೆಮಿಫೈನಲ್‌ನಲ್ಲಿ ಅದು ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯ ಅಡಿಲೇಡ್‌ನ‌ಲ್ಲಿ ನಡೆಯಲಿದೆ.

ಬ್ಯಾಟಿಂಗ್‌ ಕಡೆ ಗಮನ
ಗೆಲ್ಲಲೇಬೇಕಾದ ಈ ಮಹತ್ವದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ ಕಡೆ ಹೆಚ್ಚಿನ ಗಮನ ಹರಿಸಲಿದೆ. ನಾಯಕ ರೋಹಿತ್‌ ಶರ್ಮ ಜಿಂಬಾಬ್ವೆ ವಿರುದ್ಧ ಭರ್ಜರಿ ಆಟದ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಅವರ ಜತೆ ಪ್ರಚಂಡ ಫಾರ್ಮ್ನಲ್ಲಿರುವ ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಕೂಡ ಉತ್ತಮ ನಿರ್ವಹಣೆ ನೀಡಲು ಹಾತೊರೆಯುತ್ತಿದ್ದಾರೆ. ಕಳೆದ ನಾಲ್ಕು ಪಂದ್ಯಗಳಲ್ಲಿ 74 ರನ್‌ ಗಳಿಸಿರುವ ನಾಯಕ ರೋಹಿತ್‌ಗೆ ಮೆಲ್ಬರ್ನ್ನ ಈ ಪಿಚ್‌ ನೆಚ್ಚಿನ ತಾಣವಾಗಿದೆ. ಇಲ್ಲಿ ಅವರು ಬಿಳಿ ಚೆಂಡಿನಲ್ಲಿ ಕೆಲವು ಶತಕ ಸಿಡಿಸಿದ್ದಾರೆ.

ಸರಿಯಾಗಿ ಎರಡು ವಾರಗಳ ಹಿಂದೆ ಈ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವಣ ಮಹೋನ್ನತ ಹೋರಾಟ ನಡೆದಿತ್ತು. ಈ ಪಂದಲ್ಲಿ ಕೊಹ್ಲಿ ತನ್ನ ಜೀವಮಾನದ ಶ್ರೇಷ್ಠ ಆಟ ಆಡಿ ಭಾರತಕ್ಕೆ ಗೆಲುವು ದೊರಕಿಸಿಕೊಟ್ಟಿದ್ದರು. ರವಿವಾರವೂ ಜಿಂಬಾಬ್ವೆ ವಿರುದ್ಧ ಗೆದ್ದರೆ ಭಾರತ ಯಾವುದೇ ಚಿಂತೆಯಿಲ್ಲದೇ ಸೆಮಿಫೈನಲ್‌ ತಲುಪಲಿದೆ.

Advertisement

ಈ ಕೂಟದಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದ್ದ ಜಿಂಬಾಬ್ವೆ ಆಬಳಿಕ ನೀರಸವಾಗಿ ಆಡಿದೆ. ಜಿಂಬಾಬ್ವೆಯ ಬ್ಯಾಟಿಂಗ್‌ ಸಾಧಾರಣ ಮಟ್ಟದಲ್ಲಿದೆ. ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಮತ್ತು ಮೊಹಮ್ಮದ್‌ ಶಮಿ ಅವರ ದಾಳಿಯೆದುರು ಭರ್ಜರಿ ಬ್ಯಾಟಿಂಗ್‌ ನಿರ್ವಹಣೆ ನೀಡಲು ಜಿಂಬೆಬ್ವೆಗೆ ಕಷ್ಟವೆಂದು ಹೇಳಬಹುದು. ಕ್ರೆಗ್‌ ಇರ್ವಿನ್‌, ಸೀನ್‌ ಇರ್ವಿನ್‌, ರಿಯಾನ್‌ ಬರ್ಲ್ ಮತ್ತು ಸೀನ್‌ ವಿಲಿಯಮ್ಸ್‌ ಅವರು ಭಾರತೀಯ ದಾಳಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.

ಪಾಕಿಸ್ಥಾನದಲ್ಲಿ ಹುಟ್ಟಿದ ಸಿಕಂದರ್‌ ರಾಜ ಸ್ವಲ್ಪಮಟ್ಟಿಗೆ ಭಾರತಕ್ಕೆ ಹೊಡೆತ ನೀಡುವ ನಿರೀಕ್ಷೆಯಿದೆ. ಉತ್ತಮ ನಿರ್ವಹಣೆ ನೀಡುತ್ತಿರುವ ಅವರು ಭಾರತ ವಿರುದ್ಧ ಮಿಂಚುವ ಉತ್ಸಾಹದಲ್ಲಿದ್ದಾರೆ.

ಇಂದಿನ ಪಂದ್ಯ
ದ. ಆಫ್ರಿಕಾ-ನೆದರ್ಲೆಂಡ್ಸ್‌
ಆರಂಭ: ಬೆಳಗ್ಗೆ 5.30
ಸ್ಥಳ: ಅಡಿಲೇಡ್‌

ಪಾಕಿಸ್ಥಾನ-ಬಾಂಗ್ಲಾದೇಶ
ಆರಂಭ: ಬೆಳಗ್ಗೆ 9.30
ಸ್ಥಳ: ಅಡಿಲೇಡ್‌

ಭಾರತ-ಜಿಂಬಾಬ್ವೆ
ಆರಂಭ: ಮ. 1.30
ಸ್ಥಳ: ಮೆಲ್ಬರ್ನ್
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next