Advertisement

ಟಿ20 ವಿಶ್ವಕಪ್‌ ಕ್ರಿಕೆಟ್‌: ಪ್ರತಿಯೊಬ್ಬರ ನಿರೀಕ್ಷೆ…ಭಾರತ-ಪಾಕ್‌ ಫೈನಲ್‌!

11:08 PM Nov 07, 2022 | Team Udayavani |

ಸಿಡ್ನಿ: “ತವರಿಗೆ ಹೊರಡಲು ಮೆಲ್ಬರ್ನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೊದಲ ತಂಡ’ ಎಂದು ಅಪಹಾಸ್ಯಕ್ಕೆ ಗುರಿಯಾದ ತಂಡ ಬಾಬರ್‌ ಆಜಂ ನೇತೃತ್ವದ ಪಾಕಿಸ್ಥಾನ.

Advertisement

ಟಿ20 ವಿಶ್ವಕಪ್‌ ಸೂಪರ್‌-12 ಹಂತದಲ್ಲಿ ಬದ್ಧ ಎದುರಾಳಿ ಭಾರತಕ್ಕೆ ಹಾಗೂ ದುರ್ಬಲ ಜಿಂಬಾಬ್ವೆಗೆ ಸೋತ ಬಳಿಕ ಪಾಕ್‌ ಇಂಥದೊಂದು ಅವಮಾನ, ಟೀಕೆಗಳನ್ನೆಲ್ಲ ಎದುರಿಸಿದ್ದು ಸಹಜವೇ ಆಗಿತ್ತು. ಆದರೆ ಅದೀಗ ನೆದರ್ಲೆಂಡ್ಸ್‌ ಹಾಗೂ ಅದೃಷ್ಟದ ನೆರವಿನಿಂದ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಇನ್ನು ಎಲ್ಲರ ನಿರೀಕ್ಷೆ ಒಂದೇ, ಭಾರತ-ಪಾಕಿಸ್ಥಾನ ತಂಡಗಳು ಫೈನಲ್‌ನಲ್ಲಿ ಎದುರಾಗಬೇಕು ಎಂಬುದು!

ಶೇನ್‌ ವಾಟ್ಸನ್‌, ಶೋಯಿಬ್‌ ಅಖ್ತರ್‌, ವಾಸಿಂ ಅಕ್ರಮ್‌, ಆಕಾಶ್‌ ಚೋಪ್ರಾ ಮೊದಲಾದ ಮಾಜಿ ಕ್ರಿಕೆಟಿಗರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶ್ವದ ಕ್ರಿಕೆಟ್‌ ಅಭಿಮಾನಿಗಳೂ ಈ ಸಾಂಪ್ರದಾಯಿಕ ಎದುರಾಳಿಗಳ ಫೈನಲ್‌ ಹಣಾಹಣಿಯನ್ನು ಕಾಣಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇದಕ್ಕೂ ಮುನ್ನ ಸೆಮಿಫೈನಲ್‌ ಫ‌ಲಿತಾಂಶ ಏನಾದೀತೆಂಬ ಕುತೂಹಲ, ನಿರೀಕ್ಷೆ ಕೂಡ ಬೆಟ್ಟದಷ್ಟಿದೆ.

ವಾಟ್ಸನ್‌ ಬಯಕೆಯೂ ಇದೇ…
“ಎಲ್ಲರ ಬಯಕೆ ಹಾಗೂ ನಿರೀಕ್ಷೆ ಒಂದೇ, ಅದು ಭಾರತ-ಪಾಕಿಸ್ಥಾನ ನಡುವೆ ಫೈನಲ್‌ ನಡೆಯಬೇಕೆಂಬುದು. ನಾನು ಕೂಡ ಇದನ್ನೇ ಬಯಸುತ್ತೇನೆ. ಬೃಹತ್‌ ಮೆಲ್ಬರ್ನ್ ಅಂಗಳದಲ್ಲಿ ಏಷ್ಯಾದ ಈ ಎರಡು ಬಲಿಷ್ಠ ತಂಡಗಳು ಮತ್ತೂಮ್ಮೆ ಎದುರಾಗುವುದನ್ನು ಕಾಣಬಯಸುತ್ತೇನೆ’ ಎಂಬುದು ಆಸ್ಟ್ರೇಲಿಯದ ಮಾಜಿ ಆಟಗಾರ ಶೇನ್‌ ವಾಟ್ಸನ್‌ ಆಸೆ.

“ಎಷ್ಟೋ ಪಂದ್ಯಾವಳಿಗಳಲ್ಲಿ ಇಂಥ ಅಚ್ಚರಿ, ಅನಿರೀಕ್ಷಿತಗಳು ಸಂಭವಿಸಿವೆ. ಇನ್ನೇನು ಹೊರಗೆ ಬಿತ್ತು ಎನ್ನುವಾಗಲೇ ತಂಡಕ್ಕೆ ಜೀವದಾನ ಲಭಿಸುತ್ತದೆ. ಅದು ಫೈನಲ್‌ ತನಕ ಬಂದು ಟ್ರೋಫಿಯನ್ನೂ ಎತ್ತಿದ ಬಹಳಷ್ಟು ನಿದರ್ಶನಗಳಿವೆ. ಹೀಗಾಗಿ ಪಾಕಿಸ್ಥಾನ ಫೈನಲ್‌ ಪ್ರವೇಶಿಸಿದರೆ ಅಚ್ಚರಿ ಇಲ್ಲ. ಆಗ ಎದುರಾಳಿಯಾಗಿ ಭಾರತ ಇರಬೇಕು…’ ಎಂಬುದಾಗಿ ವಾಟ್ಸನ್‌ ಅಪೇಕ್ಷಿಸಿದರು.

Advertisement

“ಆಸ್ಟ್ರೇಲಿಯ ನಾಕೌಟ್‌ನಲ್ಲಿ ಇಲ್ಲ ದಿದ್ದುದೊಂದು ಕೊರತೆ. ಆಸ್ಟ್ರೇಲಿಯ -ನ್ಯೂಜಿಲ್ಯಾಂಡ್‌ ನಡುವೆ ಫೈನಲ್‌ ನಡೆಯುವುದನ್ನು ನಾನು ಬಯಸಿದ್ದೆ. ಉದ್ಘಾಟನ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ನಾವು ಸೇಡು ತೀರಿಸಿಕೊಂಡು ಕಪ್‌ ಉಳಿಸಿಕೊಳ್ಳಬೇಕಿತ್ತು. ಅದಿನ್ನು ಸಾಧ್ಯವಿಲ್ಲ. ಹೀಗಾಗಿ ಭಾರತ-ಪಾಕಿಸ್ಥಾನ ನಡುವೆ ಫೈನಲ್‌ ಕಾಣಬಯಸುವೆ’ ಎಂದು ವಾಟ್ಸನ್‌ ಹೇಳಿದರು.

“2007ರ ಚೊಚ್ಚಲ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ ತಂಡಗಳೇ ಫೈನಲ್‌ನಲ್ಲಿ ಮುಖಾಮುಖೀ ಆಗಿದ್ದವು. ಅಂದಿನ ಆ ರಸಗಳಿಗೆ, ರೋಮಾಂಚನವನ್ನು ಮರೆಯಲಸಾಧ್ಯ. . ಇದು ಪುನರಾವರ್ತನೆ ಗೊಳ್ಳಬೇಕೆಂಬುದು . ಬಹುತೇಕ ಮಂದಿಯ ಬಯಕೆ’ ಎಂದರು.

ಹೊರಬಿದ್ದು ಒಳಬಂದ ಪಾಕ್‌!
ಈ ಕೂಟದಲ್ಲಿ ಪಾಕಿಸ್ಥಾನದ್ದು “ಲಕ್ಕಿ ಜರ್ನಿ’. ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ, ಬಳಿಕ ಜಿಂಬಾಬ್ವೆ ವಿರುದ್ಧ ಸೋಲಿನೇಟು ಅನುಭವಿಸಿದ ಬಾಬರ್‌ ಪಡೆ ಕೂಟದಿಂದ ಬಹುತೇಕ ಹೊರಬಿದ್ದಿತ್ತು. ಅಕಸ್ಮಾತ್‌ ನೆದರ್ಲೆಂಡ್ಸ್‌ ದೊಡ್ಡದೊಂದು ಏರುಪೇರಿನ ಫ‌ಲಿತಾಂಶ ದಾಖಲಿಸದೇ ಹೋಗಿದ್ದರೆ ಈ ವೇಳೆ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ನಲ್ಲಿ ಇರುತ್ತಿತ್ತು. ಆದರೆ ಪಾಕಿಸ್ಥಾನದ ಅದೃಷ್ಟ ದೊಡ್ಡದಿತ್ತು!

1992ರ ವಿಶ್ವಕಪ್‌ ನೆನಪು…
ಪಾಕಿಸ್ಥಾನದ ಈ ಲಕ್‌ ಗಮನಿಸುವಾಗ 1992ರ ಬೆನ್ಸನ್‌ ಆ್ಯಂಡ್‌ ಹೆಜಸ್‌ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ನೆನಪಾಗುತ್ತದೆ. ಅದು ರೌಂಡ್‌ ರಾಬಿನ್‌ ಲೀಗ್‌ ಮಾದರಿಯದ್ದಾಗಿತ್ತು. ವೆಸ್ಟ್‌ ಇಂಡೀಸ್‌, ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್‌ ಎಡವಿತ್ತು. ಇಂಗ್ಲೆಂಡ್‌ ವಿರುದ್ಧ 74 ರನ್ನಿಗೆ ಕುಸಿದು ಸೋಲನ್ನು ಖಚಿತಗೊಳಿಸಿತ್ತು. ಆದರೆ ಇಂಗ್ಲೆಂಡ್‌ ಚೇಸಿಂಗ್‌ ವೇಳೆ ಸುರಿದ ಮಳೆ ಪಾಕಿಸ್ಥಾನಕ್ಕೆ ಅದೃಷ್ಟವನ್ನೇ ಮೊಗೆದು ಕೊಟ್ಟಿತು. ಇಲ್ಲಿ ಅದು ಅಂಕ ಹಂಚಿಕೊಂಡಿತು. ಆಗಲೇ ಹೊರಬೀಳಬೇಕಿದ್ದ ಪಾಕ್‌ ಈ ಅಂಕದ ಬಲದಿಂದಲೇ ಸೆಮಿಫೈನಲ್‌ ಪ್ರವೇಶಿಸಿದ್ದನ್ನು ಮರೆಯುವಂತಿಲ್ಲ.

ಅಂದು ಸೆಮಿಫೈನಲ್‌ನಲ್ಲಿ ಎದುರಾದ ತಂಡ ನ್ಯೂಜಿಲ್ಯಾಂಡ್‌. ಆಕ್ಲೆಂಡ್‌ ಅಂಗಳದಲ್ಲಿ ಇಮ್ರಾನ್‌ ಬಳಗ ಕಿವೀಸ್‌ ರೆಕ್ಕೆ ಪುಕ್ಕ ಕತ್ತರಿಸಿತು. ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು 22 ರನ್ನುಗಳಿಂದ ಉರುಳಿಸಿ ವಿಶ್ವಕಪ್‌ ಎತ್ತಿಹಿಡಿಯಿತು.

ಹಾಗೆಯೇ 2007ರ ಚೊಚ್ಚಲ ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯಗಳನ್ನು ನೆನಪಿಸಿಕೊಳ್ಳಿ. ಅಂದಿನ ಮೊದಲ ಸ್ಪರ್ಧೆ ನ್ಯೂಜಿಲ್ಯಾಂಡ್‌-ಪಾಕಿಸ್ಥಾನ ನಡುವೆಯೇ ಸಾಗಿತ್ತು. ಕೇಪ್‌ಟೌನ್‌ ಕಾಳಗದಲ್ಲಿ ಪಾಕ್‌ 6 ವಿಕೆಟ್‌ ಜಯ ಸಾಧಿಸಿತ್ತು.

ಇನ್ನೊಂದು ಸ್ಪರ್ಧೆ ಏರ್ಪಟ್ಟಿದ್ದು ಭಾರತ-ಆಸ್ಟ್ರೇಲಿಯ ಮಧ್ಯೆ. ಇಲ್ಲಿ ಧೋನಿ ಪಡೆ 15 ರನ್ನುಗಳಿಂದ ಗೆದ್ದು ಬಂತು. ಫೈನಲ್‌ ಫ‌ಲಿತಾಂಶ ಗೊತ್ತೇ ಇದೆ. ಪಾಕಿಸ್ಥಾನ ವಿರುದ್ಧ 5 ರನ್‌ ರೋಚಕ ಜಯ!

ಮತ್ತೊಮ್ಮೆ ಏಷ್ಯಾದ ಕ್ರಿಕೆಟ್‌ ಬಲಾಡ್ಯರು ಪ್ರಶಸ್ತಿ ಕಾಳಗದಲ್ಲಿ ಎದುರಾಗಲೆಂಬುದು ಎಲ್ಲರ ಹಾರೈಕೆಯಾಗಿದ್ದರೆ ತಪ್ಪೇನಿಲ್ಲ. ಆಗಲೇ ಇರುವುದು ನಿಜವಾದ ಮಜಾ!

ಸೆಮಿಫೈನಲ್ಸ್‌
1. ನ್ಯೂಜಿಲ್ಯಾಂಡ್‌-ಪಾಕಿಸ್ಥಾನ
ಬುಧವಾರ ಸ್ಥಳ: ಸಿಡ್ನಿ
ಆರಂಭ: ಅ. 1.30

2. ಭಾರತ-ಇಂಗ್ಲೆಂಡ್‌
ಗುರುವಾರ ಸ್ಥಳ: ಅಡಿಲೇಡ್‌
ಆರಂಭ: ಅ. 1.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next