ಮೆಲ್ಬರ್ನ್: ಪ್ರಸಕ್ತ ಸಾಗುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಸರಣಿಶ್ರೇಷ್ಠ ಪ್ರಶಸ್ತಿ ಸ್ಪರ್ಧೆಯಲ್ಲಿರುವ ಕ್ರಿಕೆಟಿಗರ ಯಾದಿಯನ್ನು ಐಸಿಸಿ ಬಿಡುಗಡೆಗೊಳಿಸಿದೆ.
ಇದರಲ್ಲಿ 9 ಮಂದಿ ಆಟ ಗಾರರಿದ್ದಾರೆ. ಈ ಪಟ್ಟಿಯಲ್ಲಿರುವ ಭಾರತದ ಕ್ರಿಕೆಟಿಗರೆಂದರೆ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್.
ಪಾಕಿಸ್ಥಾನ-ಇಂಗ್ಲೆಂಡ್ ನಡುವಿನ ಫೈನಲ್ ರವಿವಾರ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದ್ದು, ಇತ್ತಂಡಗಳ ಒಟ್ಟು 5 ಮಂದಿ ಆಟಗಾರರು ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಫೈನಲ್ ಬಳಿಕ ಸರಣಿಶ್ರೇಷ್ಠ ಆಟಗಾರನ ಹೆಸರು ಪ್ರಕಟಗೊಳ್ಳಲಿದೆ. ಕ್ರಿಕೆಟ್ ಅಭಿಮಾನಿಗಳೂ ಮತದಾನದ ಮೂಲಕ ತಮ್ಮ ನೆಚ್ಚಿನ ಆಟಗಾರನನ್ನು ಹೆಸರಿಸಬಹುದಾಗಿದೆ.
ಕೊಹ್ಲಿ ಸರ್ವಾಧಿಕ ರನ್
ಸೆಮಿಫೈನಲ್‌ನಲ್ಲಿ ಹೀನಾಯವಾಗಿ ಸೋತ ಭಾರತ ತಂಡದ ಆಟಗಾರರಲ್ಲಿ ವಿರಾಟ್ ಕೊಹ್ಲಿ ಅತ್ಯಧಿಕ 296 ರನ್ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಅತ್ಯಾಕರ್ಷಕ ಶೈಲಿಯಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್‌ಗೆ ತೃತೀಯ ಸ್ಥಾನ (239) ರನ್.
Related Articles
ಇಂಗ್ಲೆಂಡ್‌ನ ಮೂವರು
ಫೈನಲಿಸ್ಟ್ ತಂಡಗಳ ಪೈಕಿ ಇನ್ನೂರರ ಗಡಿ ದಾಟಿದ್ದು ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಮಾತ್ರ (211 ರನ್). ಜಾಸ್ ಬಟ್ಲರ್ ಇನ್ನೊಂದು ರನ್ ಮಾಡಿದರೆ ಇನ್ನೂರರ ಕ್ಲಬ್‌ಗ ಸೇರ್ಪಡೆ ಆಗಲಿದ್ದಾರೆ. ಫೈನಲ್‌ನಲ್ಲೂ ಸಿಡಿದು ನಿಂತರೆ ಇವರು ಕೊಹ್ಲಿಯ ಗರಿಷ್ಠ ಮೊತ್ತವನ್ನು ಮೀರುವ ಎಲ್ಲ ಸಾಧ್ಯತೆ ಇದೆ. ಆಗ ಇಬ್ಬರಲ್ಲೊಬ್ಬರಿಗೆ ಈ ಪ್ರಶಸ್ತಿ ಒಲಿಯಬಹುದು.
ಮತ್ತೋರ್ವ ಆಟಗಾರ ಸ್ಯಾಮ್ ಕರನ್ ಇಂಗ್ಲೆಂಡ್ ಪರ ಸರ್ವಾಧಿಕ 10 ವಿಕೆಟ್ ಉರುಳಿಸಿದರೂ ಸಾಧಕರ ಯಾದಿಯಲ್ಲಿ ಅವರು 8ನೇ ಸ್ಥಾನದಲ್ಲಿದ್ದಾರೆ. ಫೈನಲ್ ಸಾಧನೆಯನ್ನು ಗಮನಿಸಬೇಕಿದೆ.
ಜಿಂಬಾಬ್ವೆಯಿಂದಲೂ ಓರ್ವ…
ಜಿಂಬಾಬ್ವೆ ಈ ಕೂಟದ ಸೆಮಿಫೈನಲ್‌ಗೇನೂ ಪ್ರವೇಶ ಪಡೆದಿಲ್ಲ. ಆದರೆ ಅಮೋಘ ಪ್ರದರ್ಶನ ನೀಡಿದ ಆಲ್‌ರೌಂಡರ್ ಸಿಕಂದರ್ ರಝ ಈ ಪ್ರಶಸ್ತಿಯ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿರುವುದು ವಿಶೇಷ. 219 ರನ್ ಜತೆಗೆ 10 ವಿಕೆಟ್ ಕೆಡವಿದ ಸಾಧನೆ ಇವರದ್ದಾಗಿದೆ.
ಅತೀ ಹೆಚ್ಚು ವಿಕೆಟ್
ಶ್ರೀಲಂಕಾ ಸ್ಪಿನ್ನರ್ ವನಿಂದು ಹಸರಂಗ ಕೂಟದಲ್ಲೇ ಅತೀ ಹೆಚ್ಚು 15 ವಿಕೆಟ್ ಕೆಡವಿದ ಕಾರಣ ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ಥಾನದ ಶಾಹೀನ್ ಶಾ ಅಫ್ರಿದಿ ಮತ್ತು ಶಾದಾಬ್ ಖಾನ್ ತಲಾ 10 ವಿಕೆಟ್ ಉರುಳಿಸಿದ್ದು, ಕ್ರಮವಾಗಿ 10ನೇ ಹಾಗೂ 11ನೇ ಸ್ಥಾನದಲ್ಲಿದ್ದಾರೆ. ಇವರಲ್ಲಿ ಶಾದಾಬ್ ಖಾನ್ ಅವರದು ಆಲ್‌ರೌಂಡ್ ಶೋ ಎಂಬುದನ್ನು ಮರೆಯುವಂತಿಲ್ಲ.
ಸರಣಿಶ್ರೇಷ್ಠರ ಸ್ಪರ್ಧೆಯಲ್ಲಿ…
1 ವಿರಾಟ್ ಕೊಹ್ಲಿ
2 ಸೂರ್ಯಕುಮಾರ್ ಯಾದವ್
3 ಶಾದಾಬ್ ಖಾನ್
4 ಶಾಹೀನ್ ಶಾ ಅಫ್ರಿದಿ
5 ಜಾಸ್ ಬಟ್ಲರ್
6 ಅಲೆಕ್ಸ್ ಹೇಲ್ಸ್
7 ಸ್ಯಾಮ್ ಕರನ್
8 ಸಿಕಂದರ್ ರಝ
9 ವನಿಂದು ಹಸರಂಗ