Advertisement

ಹೋಲಿಕೆಗೆ ಕೊನೆಯಿಲ್ಲ ,ಸ್ವಾರಸ್ಯಕ್ಕೆ  ಸಾಟಿಯಿಲ್ಲ

11:13 PM Nov 11, 2022 | Team Udayavani |

ಮೆಲ್ಬರ್ನ್: ಐರ್ಲೆಂಡ್‌ ವಿರುದ್ಧ ಇಂಗ್ಲೆಂಡ್‌ ಮಣ್ಣು ಮುಕ್ಕುತ್ತದೆ, ಆ ಇಂಗ್ಲೆಂಡ್‌ ನೆಚ್ಚಿನ ಭಾರತವನ್ನು 10 ವಿಕೆಟ್‌ಗಳಿಂದ ಉರುಳಿಸಿ ಫೈನಲ್‌ ಪ್ರವೇಶಿಸುತ್ತದೆ. ಜಿಂಬಾಬ್ವೆ ಜಬರ್ದಸ್ತ್ ಪ್ರದರ್ಶನದ ಮೂಲಕ ಪಾಕಿಸ್ಥಾನವನ್ನು ಸದೆಬಡಿಯುತ್ತದೆ, ಆ ಪಾಕಿಸ್ಥಾನ ನೆದರ್ಲೆಂಡ್ಸ್‌ ಪರಾಕ್ರಮದಿಂದ ನಾಕೌಟ್‌ ಪ್ರವೇಶಿಸಿ ಪ್ರಶಸ್ತಿ ಸುತ್ತಿಗೂ ಲಗ್ಗೆ ಇಡುತ್ತದೆ… ಈ ರೀತಿಯಾಗಿ ಹಲವು ಅಚ್ಚರಿ, ಆಘಾತ, ಏರುಪೇರು, ಕೌತುಕದ ಪರಾಕಾಷ್ಠೆಯನ್ನು ತಲುಪಿದ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಈಗ ಕ್ಲೈಮ್ಯಾಕ್ಸ್‌ ಹಂತ ತಲುಪಿದೆ.

Advertisement

ರವಿವಾರ ಪಾಕಿಸ್ಥಾನ-ಇಂಗ್ಲೆಂಡ್‌ ಪ್ರಶಸ್ತಿ ಕಾಳಗದಲ್ಲಿ ಪರಸ್ಪರ ಎದುರಾಗಲಿವೆ. ಯಾರೇ ಗೆದ್ದರೂ ಎರಡನೇ ಸಲ ಟಿ20 ವಿಶ್ವಕಪ್‌ ಎತ್ತಿದ ಎರಡನೇ ತಂಡವೆಂಬ ದಾಖಲೆ ನಿರ್ಮಾಣವಾಗಲಿದೆ; ಆ ತಂಡ ವೆಸ್ಟ್‌ ಇಂಡೀಸ್‌ ಸಾಲಿನಲ್ಲಿ ವಿರಾಜಮಾನವಾಗಲಿದೆ.

30 ವರ್ಷಗಳ ಹಿಂದಿನ ಕಥನ
ಈ ಸಂದರ್ಭದಲ್ಲಿ ಎಲ್ಲರನ್ನೂ ಫ್ಲ್ಯಾಶ್‌ಬ್ಯಾಕ್‌ಗೆ ತಳ್ಳಿರುವುದು, ಸರಿಯಾಗಿ 30 ವರ್ಷಗಳ ಹಿಂದೆ ಆಸ್ಟ್ರೇಲಿಯದಲ್ಲೇ ನಡೆದ “ಬೆನ್ಸನ್‌ ಆ್ಯಂಡ್‌ ಹೆಜಸ್‌’ ಏಕದಿನ ವಿಶ್ವಕಪ್‌ ಪಂದ್ಯಾವಳಿ. 1992ರ ಈ 5ನೇ ವಿಶ್ವಕಪ್‌ನಲ್ಲಿ ಇಮ್ರಾನ್‌ ಖಾನ್‌ ಸಾರಥ್ಯದ ಪಾಕಿಸ್ಥಾನ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಅಂದಿನ ಏಕದಿನ ವಿಶ್ವಕಪ್‌ಗ್ೂ ಇಂದಿನ ಟಿ20 ವಿಶ್ವಕಪ್‌ ಬಹಳಷ್ಟು ಸಾಮ್ಯತೆ ಇರುವುದು ವಿಶೇಷ.

ರವಿವಾರದ ಫೈನಲ್‌ನಲ್ಲಿ ಪಾಕಿಸ್ಥಾನ ಅಂದಿನ ಇಮ್ರಾನ್‌ ಖಾನ್‌ ಬಳಗದಿಂದ ಸ್ಫೂರ್ತಿ ಪಡೆಯಬೇಕು ಎಂಬುದಾಗಿ ಮೆಂಟರ್‌ ಮ್ಯಾಥ್ಯೂ ಹೇಡನ್‌ ಹೇಳಿದ್ದಾರೆ. ಸುನೀಲ್‌ ಗಾವಸ್ಕರ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪಾಕಿಸ್ಥಾನ ಕಪ್‌ ಗೆದ್ದರೆ ಬಾಬರ್‌ ಆಜಂ ಮುಂದೊಂದು ದಿನ ಪಾಕಿಸ್ಥಾನದ ಪ್ರಧಾನಿ ಆಗಲಿದ್ದಾರೆ ಎಂದು ಭವಿಷ್ಯವನ್ನೂ ನುಡಿದಾಗಿದೆ!

ಆಸೀಸ್‌ ಹಾಲಿ ಚಾಂಪಿಯನ್‌
1992ರ ವಿಶ್ವಕಪ್‌ “ರೌಂಡ್‌ ರಾಬಿನ್‌ ಲೀಗ್‌’ ಮಾದರಿಯಲ್ಲಿ ನಡೆದಿತ್ತು. ಇಲ್ಲಿ ಎಲ್ಲ ತಂಡಗಳು ಎಲ್ಲರ ವಿರುದ್ಧವೂ ಆಡಿದ್ದವು. ಅಗ್ರ 4 ತಂಡಗಳಿಗೆ ಸೆಮಿಫೈನಲ್‌ ಪ್ರವೇಶ ಲಭಿಸಿತ್ತು. ಅಂದಿನ ಕೂಟವನ್ನು ಇಂದಿನ ಟಿ20 ವಿಶ್ವಕಪ್‌ಗೆ ಹೋಲಿಕೆ ಮಾಡಿದಾಗ ಅನೇಕ ಸ್ವಾರಸ್ಯಕರ ಸಂಗತಿಗಳು ಬಿಚ್ಚಿಕೊಳ್ಳತೊಡಗುತ್ತವೆ.

Advertisement

1987ರ ವಿಶ್ವಕಪ್‌ ವಿಜೇತ ತಂಡವಾದ ಆಸ್ಟ್ರೇಲಿಯ ಅಂದಿನ ಹಾಲಿ ಚಾಂಪಿಯನ್‌ ಆಗಿತ್ತು. ಅದು ಸೆಮಿಫೈನಲಿಗೂ ಬರಲಿಲ್ಲ. ಈ ಸಲವೂ ಚಾಂಪಿಯನ್‌ ಆರನ್‌ ಫಿಂಚ್‌ ಪಡೆಗೆ ಇಂಥದೇ ಅವಸ್ಥೆ ಎದುರಾಯಿತು!

ಅಂದಿನ ಉದ್ಘಾಟನ ಪಂದ್ಯದಲ್ಲಿ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ತಂಡಗಳೇ ಎದುರಾಗಿದ್ದವು. ನ್ಯೂಜಿಲ್ಯಾಂಡ್‌ 37 ರನ್ನುಗಳಿಂದ ಗೆದ್ದು ಆಸೀಸ್‌ಗೆ ಆಘಾತವಿಕ್ಕಿತ್ತು. ಇಲ್ಲಿನ ಉದ್ಘಾಟನ ಸಮರದಲ್ಲೂ ಕಾಂಗರೂ ಪಡೆಯ ವಿರುದ್ಧ ನ್ಯೂಜಿಲ್ಯಾಂಡ್‌ ಜಯ ಸಾಧಿಸಿತು.

ಅಂದಿನ ಲೀಗ್‌ ಹಂತದಲ್ಲಿ ಭಾರತದ ವಿರುದ್ಧ ಪಾಕಿಸ್ಥಾನ ಪರಾಭವಗೊಂಡಿತ್ತು. ಇದು ಭಾರತ-ಪಾಕಿಸ್ಥಾನ ನಡುವಿನ ವಿಶ್ವಕಪ್‌ ಇತಿಹಾಸದ ಮೊದಲ ಮುಖಾಮುಖೀ ಎಂಬುದನ್ನು ಮರೆಯುವಂತಿಲ್ಲ. ಈ ಸಲವೂ ಪಾಕ್‌ ಸೂಪರ್‌-12 ಸುತ್ತಿನಲ್ಲಿ ಭಾರತಕ್ಕೆ ಶರಣಾಯಿತು.

ಅಂದು ಮಳೆಯಿಂದ ಜೀವದಾನ
1992ರಲ್ಲೂ ಪಾಕಿಸ್ಥಾನ ಲೀಗ್‌ ಹಂತದಲ್ಲೇ ಹೊರಬೀಳುವ ಅಪಾಯ ದಲ್ಲಿತ್ತು. ಅಲ್ಲಿ ಇಮ್ರಾನ್‌ ಬಳಗಕ್ಕೆ ಜೀವದಾನ ನೀಡಿದ್ದು ಮಳೆ. ಇಂಗ್ಲೆಂಡ್‌ ವಿರುದ್ಧ ಅಡಿಲೇಡ್‌ನ‌ಲ್ಲಿ ನಡೆದ ಪಂದ್ಯದಲ್ಲಿ ಪಾಕ್‌ 74 ರನ್ನಿಗೆ ಪಲ್ಟಿ. ಸೋಲು ಖಾತ್ರಿ. ಆದರೆ ಇಂಗ್ಲೆಂಡ್‌ ಚೇಸಿಂಗ್‌ ವೇಳೆ ಧೋ ಎಂದು ಮಳೆ ಸುರಿಯಿತು. ಪಂದ್ಯ ರದ್ದು.
ಪಾಕ್‌ಗೆ “ಬೋನಸ್‌’ ಅಂಕ! ಈ ಅಂಕದ ಬಲದಿಂದ ಅದು ಸೆಮಿಫೈನಲ್‌ಗೆ ಬಂತೆಂಬುದನ್ನು ಮರೆಯುವಂತಿಲ್ಲ. ಇಲ್ಲಿ ಲೈಫ್ ಕೊಟ್ಟದ್ದು ನೆದರ್ಲೆಂಡ್ಸ್‌. ಇಲ್ಲವಾದರೆ ಭಾರತದೊಂದಿಗೆ ದಕ್ಷಿಣ ಆಫ್ರಿಕಾ ಮುನ್ನಡೆಯುತ್ತಿತ್ತು.

ಮತ್ತೆ ಕಿವೀಸ್‌,
ಇಂಗ್ಲೆಂಡ್‌, ಮೆಲ್ಬರ್ನ್
ಅಂದಿನ ಆಕ್ಲಂಡ್‌ ಸೆಮಿಫೈನಲ್‌ನಲ್ಲಿ ಪಾಕಿಸ್ಥಾನಕ್ಕೆ ಎದುರಾದದ್ದು ನ್ಯೂಜಿಲ್ಯಾಂಡ್‌. ಪಾಕ್‌ ಗೆಲುವಿನ ಅಂತರ 4 ವಿಕೆಟ್‌. ಇಲ್ಲಿಯೂ ಸೆಮಿಯಲ್ಲಿ ಸಿಕ್ಕಿದ್ದು ನ್ಯೂಜಿಲ್ಯಾಂಡ್‌. ಗೆಲುವಿನ ಅಂತರ 7 ವಿಕೆಟ್‌. 1992ರ ಮೆಲ್ಬರ್ನ್ ಫೈನಲ್‌ನಲ್ಲಿ ಎದುರಾದದ್ದು ಇಂಗ್ಲೆಂಡ್‌. ಗೆಲುವಿನ ಅಂತರ 22 ರನ್‌. ಇದು 2022ರ ಟಿ20 ವಿಶ್ವಕಪ್‌ ಫೈನಲ್‌. ಮತ್ತದೇ ಮೆಲ್ಬರ್ನ್ ಅಂಗಳ, ಮತ್ತದೇ ಇಂಗ್ಲೆಂಡ್‌. ಫ‌ಲಿತಾಂಶವೂ ಪುನರಾವರ್ತನೆಯಾದೀತೇ ಎಂಬುದು ಈ ಕೂಟದ “ಫೈನಲ್‌’ ಕುತೂಹಲ.

ಇಂದು ಪಿಸಿಬಿ ಮುಖ್ಯಸ್ಥರಾಗಿರುವ ರಮೀಜ್‌ ರಾಜ 1992ರ ಫೈನಲ್‌ನಲ್ಲಿ ಇನ್ನಿಂಗ್ಸ್‌ ಆರಂಭಿಸುವುದರ ಜತೆಗೆ, ಕೊನೆಯಲ್ಲಿ ರಿಚರ್ಡ್‌ ಇಲ್ಲಿಂಗ್‌ವರ್ತ್‌ ಅವರ ಕ್ಯಾಚ್‌ ಪಡೆದು ಪಾಕ್‌ ಗೆಲುವನ್ನು ಸಾರಿದ್ದು ಕೂಡ ನೆನಪಲ್ಲಿ ಉಳಿಯುವ ಸಂಗತಿಯೇ ಆಗಿದೆ.

ನಾಳೆ ಫೈನಲ್‌
ಪಾಕಿಸ್ಥಾನ-ಇಂಗ್ಲೆಂಡ್‌
ಆರಂಭ: ಅ. 1.30
ಸ್ಥಳ: ಮೆಲ್ಬರ್ನ್
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next