Advertisement

ಘನ ಪಾಂಡಿತ್ಯ ಹೊಸ ಚಿಂತನೆ

02:20 AM Aug 01, 2022 | Team Udayavani |

ಟಿ. ಮೋಹನ್‌ದಾಸ್‌ ಪೈ ಅವರನ್ನು ನಾನು ಮೊದಲು ಭೇಟಿ ಮಾಡಿದ್ದು 1972ರಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋ ದ್ಯಮ ವಿದ್ಯಾರ್ಥಿಯಾಗಿದ್ದ ನಾನು ಇಂಟರ್ನ್ಶಿಪ್‌ಗಾಗಿ ನನ್ನೂರಿನ ಪತ್ರಿಕೆ ಉದಯವಾಣಿ ಆಯ್ಕೆ ಮಾಡಿಕೊಂಡು ಮಣಿಪಾಲಕ್ಕೆ ಹೋಗಿದ್ದೆ. ಒಂದೂವರೆ ತಿಂಗಳ ಇಂಟರ್ನ್ಶಿಪ್‌ ಅವಧಿಯಲ್ಲಿ ಹಲವು ಬಾರಿ ಅವರ ಜತೆ ಮಾತನಾಡುವ ಅವಕಾಶ ಸಿಕ್ಕಿತ್ತು.

Advertisement

ಟಿ. ಮೋಹನದಾಸ್‌ ಪೈ ಸಂಪಾದಕ ರಲ್ಲದಿದ್ದರೂ ದಿನ ಪತ್ರಿಕೆ, ಮಾಸ ಪತ್ರಿಕೆ ಹಾಗೂ ವಾರ ಪತ್ರಿಕೆ ಕುರಿತು  ಆಳವಾದ ಅಧ್ಯಯನ ಮಾಡಿ ಯಾವ ಸುದ್ದಿ ಎಷ್ಟರ ಮಟ್ಟಿಗೆ ಹಾಗೂ ಯಾವ ಭಾಗಕ್ಕೆ ಮಹತ್ವ ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿರುತ್ತಿದ್ದರು. ಆವರ ಜತೆ ಮಾತನಾಡುವುದರಿಂದ ಹೊಸ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿತ್ತು.

ನಾನು ಇಂಟರ್ನ್ಶಿಪ್‌ ಪೂರ್ಣಗೊಳಿಸಿದ ಬಳಿಕ ಎಂಎ ವ್ಯಾಸಂಗ ಮುಗಿಸಿ ನಮ್ಮ ಪತ್ರಿಕೆಗೆ ಬನ್ನಿ ಎಂದು ಆಹ್ವಾನ ನೀಡಿದರು. ಅವರ ಜತೆ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಶಿಕ್ಷಕನಾಗುವ  ಆಸೆ ಇಟ್ಟುಕೊಂಡಿದ್ದ ನಾನು ಪತ್ರಿಕೋದ್ಯಮಕ್ಕೆ  ಬರುವಂತಾಯಿತು. ನಾನು ಪತ್ರಿಕೋದ್ಯಮಕ್ಕೆ ಬರಲು ಟಿ. ಮೋಹನದಾಸ್‌ ಪೈ ಅವರೇ ಕಾರಣ.
ಮೋಹನದಾಸ್‌ ಪೈ ಜಗತ್ತಿನ ವಿವಿಧ ದೇಶಗಳಿಗೆ ಪ್ರವಾಸ ಮಾಡುತ್ತಿದ್ದರು. ಅಲ್ಲಿನ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮ, ರೇಡಿಯೋಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಬಗ್ಗೆ ಸದಾ ಗಮನಹರಿಸುತ್ತಿದ್ದರು. ಅವರಲ್ಲಿನ ವಿಶೇಷ ಗುಣ ಎಂದರೆ ಅವರಿಗೆ ಪತ್ರಿಕೋದ್ಯಮದ ಬಗ್ಗೆ ಸ್ಪಷ್ಟ ಕಲ್ಪನೆ ಇತ್ತು. ಹೀಗಾಗಿಯೇ ಮಣಿಪಾಲದಂತಹ ಸಣ್ಣ ಪ್ರದೇಶದಲ್ಲಿ 50 ವರ್ಷಗಳ ಹಿಂದೆಯೇ ಪತ್ರಿಕೆ ಆರಂಭಿಸುವ ಧೈರ್ಯ ಮಾಡಿದರು. ಅವರಿಗೆ ಹೆಗಲು ಕೊಟ್ಟು ದುಡಿದವರು ಟಿ. ಸತೀಶ್‌ ಪೈ ಅವರು.

ಎಂಎ ಮುಗಿಸಿದ ಬಳಿಕ ನಾನು ಉದಯವಾಣಿಗೆ ಬೆಂಗಳೂರಿನ ವರದಿಗಾರನಾಗಿ ನೇಮಕಗೊಂಡೆ. ಪ್ರತಿದಿನ ಅವರು ಸಂಜೆ 7 ಗಂಟೆಗೆ ದೂರವಾಣಿ ಕರೆ ಮಾಡಿ ಆ ದಿನದ ಪ್ರಮುಖ ಸುದ್ದಿ, ಬೆಂಗಳೂರಿಗೆ ಯಾವ ಸುದ್ದಿ ಮುಖ್ಯ, ಕರಾವಳಿ ಭಾಗಕ್ಕೆ ಯಾವುದು ಪ್ರಮುಖ ಮುಂತಾಗಿ ಚರ್ಚೆ ಮಾಡುತ್ತಿದ್ದರು.

ಆಗ ಬೆಂಗಳೂರಿನ  ಆವೃತ್ತಿ ಮಣಿಪಾಲದಲ್ಲೇ ಮುದ್ರಣಗೊಂಡು ಪತ್ರಿಕೆ ಬೆಂಗಳೂರಿಗೆ ತಲುಪು ವಷ್ಟರಲ್ಲಿ ಸಂಜೆ ಆಗುತ್ತಿತ್ತು. ಆಗ ಮಲ್ಲೇಶ್ವರ, ಜಯ ನಗರ, ಬಸವನಗುಡಿ ಸೇರಿ ಪ್ರಮುಖ ಬಡಾವಣೆಗಳಿಗೆ ಪತ್ರಿಕೆ ತಲುಪಿಸುತ್ತಿದ್ದೆವು.
ಬೆಂಗಳೂರಿನ ಆವೃತ್ತಿ ಪ್ರಾರಂಭಿಸಬೇಕು ಎಂದು ಮೊದಲಿಗೆ ಯೋಚಿಸಿದವರೂ ಮೋಹನದಾಸ್‌ ಪೈ ಅವರೇ.

Advertisement

ಸ್ವಂತ ಮುದ್ರಣ ಘಟಕ ಪ್ರಾರಂಭ ದಲ್ಲಿ ಕಷ್ಟ ಎಂದು ಐದಾರು ಮುದ್ರಣ ಘಟಕಗಳಿಗೆ ಭೇಟಿ ನೀಡಿ ನಮ್ಮ ಪತ್ರಿಕೆ ಮುದ್ರಣ ಮಾಡಿಕೊಡುವ ಹಾಗೂ ನಮ್ಮ ನಿರೀಕ್ಷೆಗೆ ತಕ್ಕಂತೆ ಮುದ್ರಿಸಿಕೊಡುವ ಸಾಮರ್ಥ್ಯ ಇರುವ ಬಗ್ಗೆ ಖಾತರಿಪಡಿಸಿಕೊಂಡು ಸಂಜೆವಾಣಿಯಲ್ಲಿ ಮುದ್ರಣಕ್ಕೆ ಒಪ್ಪಿಕೊಂಡರು.

ಆಗೆಲ್ಲ ಉದಯವಾಣಿ ಬೆಂಗಳೂರಿನಲ್ಲಿ ಆವೃತ್ತಿ ಪ್ರಾರಂಭಿಸಲಿದೆ ಎಂದಾಗ ಕೆಲವರು ಅಚ್ಚರಿಗೊಂಡರು. ಕೆಲವರು ಕೊಂಕು ಮಾತನಾಡಿದರು. ಆ ಬಗ್ಗೆ ನಾನು ಮೋಹನದಾಸ್‌ ಪೈ ಅವರ ಗಮನಕ್ಕೆ ತಂದಾಗ, ಆ ಬಗ್ಗೆ ತಲೆಕಡಿಸಿಕೊಳ್ಳುವುದು ಬೇಡ. ಬೆಂಗಳೂರು ಈಗ ಸಣ್ಣ ಊರಲ್ಲ, ಕರಾವಳಿ ಭಾಗದವರು ಮುಂಬಯಿಗೆ ಹೋಗಿ ಹೊಟೇಲ್‌, ವ್ಯಾಪಾರ ಮಾಡಿದಂತೆ ಬೆಂಗ ಳೂರಿಗೆ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ನಮ್ಮ ಭಾಗದಲ್ಲಿ ಆರಂಭವಾದ ಸಿಂಡಿಕೇಟ್‌, ಕೆನರಾ, ವಿಜಯ, ಕರ್ಣಾಟಕ ಬ್ಯಾಂಕ್‌ಗಳ ಶಾಖೆಗಳೂ ಇವೆ. ಮುಂದೆ ಹಳೆ ಮೈಸೂರು ಭಾಗ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ನಾವು ತಲುಪಲೇಬೇಕು. ಹೀಗಾಗಿ,  ಈಗಿನಿಂದಲೇ ನಮ್ಮ ಪ್ರಯತ್ನ ಇರಬೇಕು ಎಂದು ಧೈರ್ಯ ತುಂಬಿದರು.

1992ರಲ್ಲಿ ಬೆಂಗಳೂರಿನಲ್ಲಿ ಆವೃತ್ತಿಯೂ ಪ್ರಾರಂಭ ವಾಯಿತು. ಮೋಹನದಾಸ್‌ ಪೈ ಅವರು ಹೇಳಿದಂತೆ ಪತ್ರಿಕೆಗೆ ಉತ್ತಮ ಸ್ಪಂದನೆಯೂ ದೊರಕಿತು. ಇಂದು ಉದಯವಾಣಿ ರಾಜ್ಯ ಮಟ್ಟದಲ್ಲಿ ಪ್ರಭಾವಿ ಪತ್ರಿಕೆಯಾಗಿ ರೂಪುಗೊಂಡಿರುವುದರ ಹಿಂದೆ ಅವರ ಶ್ರಮ ಇದೆ.  ಸುದ್ದಿ ಆಯ್ಕೆ ಮಾಡುವಲ್ಲಿ ಹಾಗೂ ಸುದ್ದಿಗಳ ಮಹತ್ವ ಕುರಿತು ಅವರು ಸೂಕ್ಷ್ಮಮತಿ. ಒಬ್ಬ ಸಂಪಾದಕರಿಗೆ ಇರಬೇಕಾದ ಎಲ್ಲವೂ ಅರ್ಹತೆಗಳು ಅವರಲ್ಲಿತ್ತು.

ಮುಖಪುಟ, ಶೀರ್ಷಿಕೆ, ವಿದೇಶ ಸುದ್ದಿ, ವಾಣಿಜ್ಯ ಸುದ್ದಿ, ರಾಜಕೀಯ, ಸಿನೆಮಾ, ಕ್ರೀಡೆ ಹೀಗೆ  ಎಲ್ಲ ವಿಭಾಗಗಳ ಬಗ್ಗೆಯೂ ಅವರಿಗೆ ನಿಖರ ಮಾಹಿತಿ ಇರುತ್ತಿತ್ತು. ಸದಾ ಓದು ಅವರ ವಿಶೇಷ. ಉದಯವಾಣಿ ಬಿಟ್ಟು ಬೇರೆ ಸಂಸ್ಥೆಯಲ್ಲಿ ದುಡಿದರೂ ನನ್ನ ಹಾಗೂ ಮೋಹನದಾಸ್‌ ಪೈ ಅವರ ನಡುವಿನ ಆತ್ಮೀಯತೆ, ಸಂಬಂಧ ಹಿಂದಿನಂತೆಯೇ ಇತ್ತು.

ಎರಡು ತಿಂಗಳ ಹಿಂದೆ ನನ್ನೂರಿಗೆ ಹೋಗಿದ್ದಾಗ ಮೋಹನದಾಸ್‌ ಪೈ ಅವರನ್ನು ಭೇಟಿ ಮಾಡಲು ಅಪೇಕ್ಷಿಸಿದಾಗ ಟಿ. ಸತೀಶ್‌ ಪೈ ಅವರು ಬನ್ನಿ ಎಂದು ಕರೆದುಕೊಂಡು ಹೋದರು. ಜತೆಗೆ ಕಾಫಿ ಕುಡಿದು ಹಳೆಯ ನೆನಪು ಸ್ಮರಿಸಿಕೊಂಡೆವು.

ಒಟ್ಟಾರೆ, ಟಿ.ಮೋಹನದಾಸ್‌ ಪೈ ಒಬ್ಬ ವ್ಯಕ್ತಿಯಲ್ಲ ಶಕ್ತಿ. ಅವರ ಜ್ಞಾನ, ಅನುಭವ ಆಪಾರ. ಕಿರಿಯರಿಗೆ ಮಾರ್ಗದರ್ಶನ ಹಾಗೂ ಹೊಸತನದ ಕಲಿಕೆಗೆ ಸದಾ ಉತ್ತೇಜಿಸುತ್ತಿದ್ದರು. ಅವರು ತೆರೆಮರೆಯಲ್ಲಿದ್ದು ಕೊಂಡೇ ಸುದ್ದಿಮನೆ ಬೆಳಗಿದ ಅಕ್ಷರ ಸಂತ.

-ಈಶ್ವರ ದೈತೋಟ, ವಿಶ್ರಾಂತ ಸಂಪಾದಕರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next