Advertisement

ಮಾಧ್ಯಮದ ಮಹಾಮೇರು ಮೋಹನದಾಸ್‌ ಪೈ

09:54 PM Aug 11, 2022 | Team Udayavani |

ಗ್ಲೋಬಲ್‌ ವಿಲೇಜ್‌ ಪದಪುಂಜವನ್ನು ಟಂಕಿಸಿದ ಕೆನೆಡಿಯನ್‌ ತತ್ತ್ವಜ್ಞಾನಿ, ಭವಿಷ್ಯವಾದಿ ಮಾರ್ಶಲ್‌ ಮ್ಯಾಕ್‌ಲುಹನ್‌ನ, (1967ರಲ್ಲಿ ಪ್ರಕಟವಾದ) ವಿಶ್ವ ವಿಖ್ಯಾತ ಕೃತಿ ಮತ್ತು ಮಾತು: ” The Medium is the Message’  (ಮಾಧ್ಯಮವೇ ಸಂದೇಶ). ಜಗತ್ತಿನ ಅಭಿವ್ಯಕ್ತಿ ಮಾಧ್ಯಮಗಳ ಬಗ್ಗೆ, ಅವುಗಳು ಭವಿಷ್ಯದಲ್ಲಿ ಪಡೆಯಬಹುದಾದ ವಿಶ್ವರೂಪದ ಬಗ್ಗೆ, ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿ, ಮ್ಯಾಕ್‌ಲುಹನ್‌ ಇಂದಿಗೆ ಅರ್ಧ ಶತಮಾನಕ್ಕೂ ಹಿಂದೆ ನುಡಿದಿದ್ದ ಭವಿಷ್ಯವನ್ನು ಮಣಿಪಾಲದಲ್ಲಿ ನಿಜವಾಗಿಸಿದವರು ಮಾಧ್ಯಮದ ಮಹಾಮೇರು ಟಿ. ಮೋಹನದಾಸ್‌ ಪೈ.

Advertisement

ತೀರಾ ಖಾಸಗಿಯಾಗಿ ಬದುಕಿ ಕರಾವಳಿ ಕರ್ನಾಟಕ ಮತ್ತು ಆ ಮೂಲಕ ಎಲ್ಲ ಕನ್ನಡಿಗರ ಸಾರ್ವಜನಿಕ ಬದುಕಿನ ಮೇಲೆ, ಕನ್ನಡ ಜನತೆಯ ಓದುವ ಹವ್ಯಾಸದ ಮೇಲೆ ಅಗಾಧವಾದ  ಪರಿಣಾಮ ಬೀರಿದವರಲ್ಲಿ, ಜನರು ಓದಬೇಕಾದ  ಎಲ್ಲ ಸಂದೇಶವನ್ನು ಅವರ ಮನೆಬಾಗಿಲಿಗೆ ತಲುಪಿಸುವ ಮಾಧ್ಯಮವನ್ನು ಮಣಿಪಾಲದಂತಹ ಪುಟ್ಟ ಗ್ರಾಮೀಣ ಪ್ರದೇಶದ‌ಲ್ಲಿ ಸಾಧ್ಯವಾಗಿಸಿದವರಲ್ಲಿ ಮೋಹನದಾಸ್‌ ಪೈ ಅಗ್ರಗಣ್ಯರು.

ಮಿತಭಾಷಿ, ದೂರದರ್ಶಿ ಹಾಗೂ ತಾನು ಸಲ್ಲಿಸಿದ ಸಾರ್ವಜನಿಕ ಸೇವೆಗೆ ಯಾವತ್ತೂ ಯಾವುದೇ ರೀತಿಯ ಪ್ರಚಾರ ಬಯಸದ ಗುಪ್ತದಾನಿಯಾಗಿದ್ದ ಮೋಹನದಾಸ್‌ ಪೈ ಅವರು ನಿಜವಾದ ಅರ್ಥದಲ್ಲಿ ಪ್ರಚಾರ ಬಯಸದ ಪ್ರತಿಭಾವಂತನಾಗಿ ಎಲೆಮರೆಯ ಕಾಯಿಯಂತೆ ಸಾರ್ಥಕವಾಗಿ ಬದುಕಿದವರು.  ಉಡುಪಿಯ ಪ್ರಸಿದ್ಧ ಕಲಾ ಸಂಸ್ಥೆಯೊಂದು ಅವರನ್ನು ತನ್ನ ಕಚೇರಿಗೆ ಆಹ್ವಾನಿಸಿ ಅವರನ್ನು ಫ‌ಲಪುಷ್ಪಹಾರ ಪೀತಾಂಬರಾದಿಗಳನ್ನು ನೀಡಿ ಗೌರವಿಸಿತು.  ಅಲ್ಲಿಂದ ಮರಳುವಾಗ, “ಮತ್ತೆ ನಾನು ಇಲ್ಲಿಗೆ ಬಂದು ಹೋದ ಸುದ್ದಿ ನಾಳೆ ಉದಯವಾಣಿಯಲ್ಲಿ ಬರುತ್ತದೆ ಎಂದು ಭಾವಿಸಬೇಡಿ.  ನಾನು ಬಂದು ಹೋದುದರಿಂದ ನಿಮಗೆ ಏನೂ ಪ್ರಯೋಜನವಿಲ್ಲ.  ನನ್ನ ಸುದ್ದಿಗಳನ್ನು ಉದಯವಾಣಿಯಲ್ಲಿ ಪ್ರಕಟಿಸಬಾರದು ಎಂದು ನಾನೇ ಹೇಳಿದ್ದೇನೆ’ ಎಂದು ಹೇಳಿ ಹೋದರು. ಆದರೆ ಪ್ರಕಟವಾಗದೆ ಇದ್ದುದು ಕೇವಲ ಅವರು ಬಂದು ಹೋದ ಸುದ್ದಿ ಮಾತ್ರ. ಮೋಹನದಾಸ್‌ ಪೈ ಅವರ ಕೊಡುಗೈಯ ಮೌನದಾನ ಗುಣ ಪ್ರಕಟವಾಗದೆ ಉಳಿಯಲಿಲ್ಲ! ಕೆಲವೇ ದಿನಗಳಲ್ಲಿ ಅವರ ಕಚೇರಿಯ ಸಿಬಂದಿಯೊಬ್ಬರು ಕಲಾ ಸಂಸ್ಥೆಯ ಕಾರ್ಯದರ್ಶಿಗೆ ಫೋನ್‌ ಮಾಡಿ “ನಮ್ಮ ಸಂಸ್ಥೆಯ ಬಾಸ್‌ ನಿಮಗೆ ಒಂದು ಲಕ್ಷ ರೂಪಾಯಿ ಚೆಕ್‌ ಕೊಡಲು ಹೇಳಿದ್ದಾರೆ. ಚೆಕ್‌ ರೆಡಿ ಇದೆ. ಬಂದು ತೆಗೆದುಕೊಂಡು ಹೋಗಿ’ ಎಂದರು!

ಹೀಗೆ ಆರ್ಥಿಕವಾಗಿ ಕೊಡುಗೈಯ ಮೌನದಾನಿ ಯಾಗಿದ್ದ ಮೋಹನದಾಸ್‌ ಪೈ ಅವರು ಸಾಂಸ್ಕೃತಿಕ ವಾಗಿ, ಸಾಹಿತ್ಯಕವಾಗಿ ಅಷ್ಟೇ ಉದಾರವಾದಿಯೂ, ಸಹೃದಯಿಯೂ ಆಗಿದ್ದರು.  ಕರ್ನಾಟಕದ ಎಲ್ಲ ಮತ, ಪಂಥ, ಸಾಹಿತ್ಯ, ಸಿದ್ಧಾಂತಗಳ ನೂರಾರು ಯುವ ಲೇಖಕರನ್ನು ಬೆಳಕಿಗೆ ತರುವುದರಲ್ಲಿ ಅವರು ವಹಿಸಿದ ಪಾತ್ರ ಗಣನೀಯ ಹಾಗೂ ಪ್ರಶಂಸಾರ್ಹ.

ಲೇಖಕರನ್ನು ಬೆಳೆಸಿದರು:

Advertisement

ನಲುವತ್ತು ವರ್ಷಗಳ ಹಿಂದೆ, 1980ರ ದಶಕದಲ್ಲಿ ಉಡುಪಿಯಂತಹ ಒಂದು ಸಣ್ಣ ಪಟ್ಟಣದಲ್ಲಿ ದೂರವಾಣಿ ಎಂಬುದು ಮಧ್ಯಮ ವರ್ಗಕ್ಕೆ ಬಹಳ ದೂರದ ಮಾತಾಗಿತ್ತು. 1982ರಲ್ಲಿ ಮಣಿಪಾಲದ ಪೈ ಬಂಧುಗಳ ಪತ್ರಿಕೋದ್ಯಮ ರಂಗದ ಹೊಸ  “ಸಾಹಸ’ ವಾಗಿ ಆರಂಭವಾದ ತರಂಗ ಅದರ ವಿಷಯ ವೈವಿಧ್ಯ ಹಾಗೂ ಮುದ್ರಣ ವೈಶಿಷ್ಟ್ಯದಿಂದಾಗಿ ಕೇವಲ ಹದಿನೆಂಟು ತಿಂಗಳುಗಳಲ್ಲಿ ಎರಡು ಲಕ್ಷ ಪ್ರಸಾರ ಸಂಖ್ಯೆ ದಾಟಿ ದಾಖಲೆ ನಿರ್ಮಿಸಿತು.  ಎರಡು ಲಕ್ಷ ಪ್ರಸಾರ ಸಂಖ್ಯೆ ದಾಟಿದ ಪತ್ರಿಕೆಗೆ ನಾಲ್ಕು ಹೊಸ ಟೆಲಿಫೋನ್‌ ಸಂಪರ್ಕ ನೀಡಬಹುದೆನ್ನುವ ಆಗ ಇದ್ದ ನಿಯಮದ ಪ್ರಕಾರ, ಪತ್ರಿಕೆಯ ಅಂಕಣಕಾರನೆಂಬ ನೆಲೆಯಲ್ಲಿ ಟಿ. ಮೋಹನದಾಸ್‌ ಪೈ ಅವರು ನಮ್ಮ ಮನೆಗೂ ಫೋನ್‌  ಸಂಪರ್ಕ  ಒದಗಿಸಿದರು. 1985ರಲ್ಲಿ ನನಗೆ  ಬ್ರಿಟಿಷ್‌  ಕೌನ್ಸಿಲ್‌  ಸ್ಕಾಲರ್‌ಶಿಪ್‌  ದೊರಕಿ ಮ್ಯಾಂಚೆಸ್ಟರ್‌  ವಿಶ್ವವಿದ್ಯಾಲಯಕ್ಕೆ ತೆರಳಿದೆ. ಅಲ್ಲಿ ಇಳಿದ ತತ್‌ಕ್ಷಣ ಕಾಯಿನ್‌ ಫೋನ್‌ ಮೂಲಕ ನಮ್ಮ ಮನೆಗೆ ಕರೆ ಮಾಡಿ ಯಶಸ್ವಿಯಾಗಿ ಇಂಗ್ಲೆಂಡ್‌ ತಲುಪಿರುವುದಾಗಿ ಹೇಳಲು ಈ ದೂರವಾಣಿ ಸಂಪರ್ಕದಿಂದ ಸಾಧ್ಯವಾಯಿತು.

ಇಂಗ್ಲೆಂಡಿನಿಂದ ಮರಳಿದ ಬಳಿಕ 1986ರಿಂದ 2001ರ ವರೆಗೆ ಹದಿನೈದು ವರ್ಷಗಳ ದೀರ್ಘ‌ ಕಾಲ ಉದಯವಾಣಿಯಲ್ಲಿ  ನನ್ನ “ಆಶಯ’ ಅಂಕಣ ಬರಹಗಳು ಪ್ರಕಟವಾಗಲು ಮೋಹನದಾಸ ಪೈಯವರು ಅವಕಾಶ ನೀಡಿದರು ಹಾಗೂ ನನ್ನನ್ನು ಓರ್ವ ಲೇಖಕನನ್ನಾಗಿ ರೂಪಿಸಿದರು. ಆ ಮೂಲಕ ನಾನು ವಿಭಿನ್ನ ಅಭಿರುಚಿ, ಆಸಕ್ತಿ ಹಾಗೂ ಮನೋಧರ್ಮದ ಸಾವಿರಾರು ಲೇಖಕರನ್ನು ತಲುಪುವಂತಾಯಿತು. ನನ್ನ ತಲೆಮಾರಿನ ಹತ್ತಾರು ಲೇಖಕರಿಗೆ ಇದನ್ನು ಸಾಧ್ಯವಾಗಿಸಿದವರು ಮೋಹನದಾಸ್‌ ಪೈ ಅವರು.

ಇಷ್ಟೇ ಅಲ್ಲದೆ ಕರಾವಳಿ ಕರ್ನಾಟಕದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಆಗಿರುವ ಶೈಕ್ಷಣಿಕ, ಸಾಮಾಜಿಕ ಬದಲಾವಣೆಗಳಿಗೆ ಸಂಪರ್ಕ, ಸಂವಹನ ಹಾಗೂ ಮುದ್ರಣ ತಂತ್ರಜ್ಞಾನ ನೀಡಿದ ಕೊಡುಗೆಯನ್ನು ಗುರುತಿಸುವಾಗ ಈ ವಿಶಿಷ್ಟ ಕೊಡುಗೆಯನ್ನು ಸಾಧ್ಯವಾಗಿಸಿದ ಪರೋಕ್ಷ ಕೀರ್ತಿ ಟಿ. ಮೋಹನದಾಸ್‌ ಪೈ ಅವರಿಗೆ ಸಲ್ಲಬೇಕಾಗುತ್ತದೆ.  ಹಾಗೆಯೇ, ಕರಾವಳಿ ಕರ್ನಾಟಕದಲ್ಲಿ ಕಳೆದ ಅರ್ಧ ಶತಮಾನದಲ್ಲಿ ಆಗಿರುವ ಬಹುರೂಪಿ ಬಾಹ್ಯ ಬದಲಾವಣೆಗಳ ಜತೆಗೆ ಸಾಂಸ್ಕೃತಿಕವಾಗಿ ಜನರ ಮನೋರಂಗದಲ್ಲಿ ಆಗಿರುವ, ಈಗಲೂ ಆಗು ತ್ತಿರುವ ಆಂತರಿಕ ಬದಲಾವಣೆಗಳಿಗೆ ಮಣಿಪಾಲಕ್ಕೆ ಅತ್ಯಾಧುನಿಕ ಮುದ್ರಣ ತಂತ್ರಜ್ಞಾನವನ್ನು ತರಿಸಿದ, ‘‘a gentleman with a difference” ಎಂದು ಕರೆಯಬಹುದಾದ ಟಿ. ಮೋಹನದಾಸ್‌ ಪೈಯವರ ತಾಂತ್ರಿಕ ದೂರದರ್ಶಿತ್ವ ಮತ್ತು ಮಾಂತ್ರಿಕ ಸಮದರ್ಶಿತ್ವ ಮೂಲ ಕಾರಣವೆಂದರೆ ತಪ್ಪಾಗಲಾರದು.

– ಡಾ| ಬಿ. ಭಾಸ್ಕರ ರಾವ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next