Advertisement

ಕೃತಿಯೇ ಮಾತಿನ ಪ್ರತಿನಿಧಿಯಾಗುವ ಆದರ್ಶ 

10:05 PM Aug 11, 2022 | Team Udayavani |

ವಿಹಾಯ ಕಾಮಾನ್‌ ಯಃ ಸರ್ವಾನ್‌

Advertisement

ಪುಮಾಂಶ್ಚರತಿ ನಿಸ್ಪೃಹಃ|

ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗತ್ಛತಿ||

ಯಾರು ಎಲ್ಲ ವಿಷಯಗಳಿಗೂ ಮನಸೋಲದೆ, ಕೆಟ್ಟ ಆಸೆಗಳಿಗೆ ಬಲಿ ಬೀಳದೆ ನಾನು- ನನ್ನದೆಂಬ ಹಮ್ಮು ತೊರೆದು ಅನುಭವಿಸುತ್ತಾನೆಯೋ ಅವನೇ ಮುಕ್ತಿ ಪಡೆಯುತ್ತಾನೆ.

– ಇದು ವಿಶ್ವದ ಅತಿ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡ ಭಾರತದ ಪ್ರಸಿದ್ಧ ತಣ್ತೀಶಾಸ್ತ್ರೀಯ ಕೃತಿ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಭಗವಾನ್‌ ಹೇಳಿದ ಮಾತು.

Advertisement

ಮಣಿಪಾಲದ ಮಾಂತ್ರಿಕ ಡಾ| ಟಿಎಂಎ ಪೈಯವರ ಜ್ಯೇಷ್ಠ ಪುತ್ರ ಟಿ. ಮೋಹನದಾಸ್‌ ಪೈಯವರು ಜು. 31ರಂದು ತುಂಬು ಬಾಳಿಗೆ ವಿದಾಯ ಹೇಳಿದರು. ಅವರ ಒಟ್ಟು ಜೀವನವನ್ನು ಅವಲೋಕಿಸಿದರೆ ಮೇಲಿನ ಮಾತನ್ನು ಎಂಥವರನ್ನು ಉದ್ದೇಶಿಸಿ ಶ್ರೀಕೃಷ್ಣ ಹೇಳಿದ್ದಿರಬಹುದು ಎಂದು ಅರ್ಥೈಸಬಹುದು. ಶ್ರೀಮದ್ಗಾಂಭೀರ್ಯಕ್ಕೆ ಏನೊಂದೂ ಕೊರತೆ ಇಲ್ಲದಿರುವಾಗ ಮೋಹನದಾಸ್‌ ಪೈಯವರು ಯಾವ ರೀತಿಯ ಆಹಾರ ವಿಹಾರ, ಜೀವನಕ್ರಮವನ್ನು ಅನುಸರಿಸಿದ್ದರು ಎಂಬುದು ಬಹಳ ಮೌಲಿಕವಾಗುತ್ತದೆ. ಮಣಿಪಾಲದಲ್ಲಾಗಲೀ, ದೇಶದಲ್ಲಾಗಲೀ, ವಿದೇಶಗಳಿಗೆ ಹೋದಾಗಲೇ ಆಗಲಿ ನೈತಿಕತೆಯನ್ನು ಬಿಡದೆ ಜೀವನಪೂರ್ತಿಯನ್ನು ಅನುಭವಿಸಿದವರು ಅವರು.

ಗೀತೆಯಲ್ಲಿ ಬರುವ ಇನ್ನೊಂದು ಶ್ಲೋಕ ಇಂತಿದೆ:

ಆರುರುಕ್ಷೋರ್ಮುನೇರ್ಯೋಗಂ

ಕರ್ಮ ಕಾರಣಮುಚ್ಯತೇ|

ಯೋಗಾರೂಢಸ್ಯ ತಸ್ಯೈವ ಶಮಃ ಕಾರಣ ಮುಚ್ಯತೇ||

ಯೋಗ ಸಾಧಕನ ಕುರಿತು ಶ್ರೀಕೃಷ್ಣ ಹೇಳುವಾಗ ಮೋಕ್ಷ ಸಿಗುವವರೆಗೂ ಸಾಧನೆಯನ್ನು ಮುಂದುವರಿಸಬೇಕು. (ಅಪರೋಕ್ಷ) ಜ್ಞಾನ ಬಂದ ಮೇಲೂ ಕರ್ಮವನ್ನು ಬಿಡಬಾರದು. ಹೀಗೆ ಮಾಡಿದರೆ ಮೋಕ್ಷದ ಆನಂದದ ಅಭಿವ್ಯಕ್ತಿಯಲ್ಲಿ ವೃದ್ಧಿಯಾಗುತ್ತದೆ ಎಂಬ ಅಭಿಪ್ರಾಯವನ್ನು ಶ್ರೀಕೃಷ್ಣ ಹೇಳುತ್ತಾನೆ. ಇಲ್ಲಿ ನಾವು ಸಾಮಾನ್ಯವಾಗಿ ಕರ್ಮ ಅಂದರೆ ನಮ್ಮ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಅರ್ಥೈಸುತ್ತೇವೆ. ಈ ವಾಕ್ಯಕ್ಕೆ ಭಾಷ್ಯವನ್ನು ಬರೆಯುವಾಗ ಮಧ್ವಾಚಾರ್ಯರು “ನಾನಾಜನಸ್ಯ ಶುಶ್ರೂಷಾ ಕರ್ತವ್ಯಾ ಕರವನ್ಮಿತೇ’ ಎಂದು ವ್ಯಾಖ್ಯಾನಿಸುತ್ತಾರೆ. ಎಂತಹ ಕರ್ಮವೆಂದರೆ ನಾನಾ ಜನರ ದುಃಖವನ್ನು ನಿವಾರಣೆ ಮಾಡುವ ನಿಸ್ವಾರ್ಥ ಕರ್ಮ. ಇದುವೇ ಭಗವಂತನ ರಾಜ್ಯದ ಪ್ರಜೆಗಳಾದ ನಾವು ತೆರಬೇಕಾದ ತೆರಿಗೆ.

ಮೋಹನದಾಸ್‌ ಪೈಯವರು ತಂದೆಯವರು ಸ್ಥಾಪಿಸಿದ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಿರುವುದರ ಜತೆ ವಿಶೇಷವಾಗಿ ಮುದ್ರಣ ಮತ್ತು ಮಾಧ್ಯಮ ಸಂಸ್ಥೆಯ ಮೂಲಕ ಅದೆಷ್ಟೋ ಜನರ ಬದುಕಿಗೆ ಊರುಗೋಲಾದರು. ಇಲ್ಲಿ ಉದ್ಯಮಿಯಾಗಿಯೂ ತತ್ತ್ವಜ್ಞಾನದ ರಸಧಾರೆ ಕಂಡುಬರುತ್ತದೆ. ಉದ್ಯಮದಿಂದ ಬಂದ ಲಾಭವನ್ನು ಎಂಜಿಎಂ ಕಾಲೇಜಿನಂತಹ ಸಂಸ್ಥೆಗಳಿಗೆ ದಾನವಾಗಿ ಹಂಚಿದ್ದಾರೆ. ಎಷ್ಟೋ ಬಾರಿ ಶುಲ್ಕ ಏರಿಕೆಯಂತಹ ಸಂದರ್ಭದಲ್ಲಿ ಬಡವರ್ಗದವರಿಗೆ ತೊಂದರೆಯಾಗಬಾರದು ಎಂದು, ನಷ್ಟದಾಯಕ ಸಂಸ್ಥೆಗಳು ಏಕೆ ಎಂಬ ಪ್ರಶ್ನೆ ಬಂದಾಗ ತಡೆಯಾಜ್ಞೆ ಕೊಟ್ಟದ್ದೂ ಟ್ರಸ್ಟ್‌ ಅಧ್ಯಕ್ಷರಾಗಿ ಮೋಹನದಾಸ್‌ ಪೈಯವರೇ. 1990ರ ದಶಕದಲ್ಲಿ ಐಸಿಡಿಎಸ್‌ ಸಂಸ್ಥೆ ಸರಕಾರದ ಕಾನೂನಿಗೆ ಸಿಲುಕಿದಾಗ ಠೇವಣಿದಾರರಿಗೆ ತತ್‌ಕ್ಷಣ ಹಣ ಹಿಂದಿರುಗಿಸಬೇಕು, ಆದರೆ ಕೊಟ್ಟ ಸಾಲವನ್ನು ಹಾಗೆ ವಸೂಲಿ ಮಾಡದೆ ಇರುವ ಸ್ಥಿತಿ ಬಂದೊದಗಿತು. ಸ್ವಂತದ ಆಸ್ತಿಗಳನ್ನು ಮಾರಿ, ಅದರಲ್ಲಿಯೂ ಸಣ್ಣ ಸಣ್ಣ ಠೇವಣಿದಾರರಿಗೆ ಆದ್ಯತೆಯ ಮೇರೆಗೆ ಸುಮಾರು 400 ಕೋ.ರೂ. ಮೊತ್ತವನ್ನು ವಿತರಿಸಿದ ಸಾಧನೆ ಅವರದು. ಇವೆಲ್ಲವನ್ನು ಹೇಳದೆ ಮಾಡಿದ ಹಿರಿಮೆ ಮೋಹನದಾಸ್‌ ಪೈಯವರದು. ಮಾತಿನಂತೆ ಕೃತಿ ಇರಬೇಕು ಎನ್ನುವುದು ಒಂದು ಬಗೆಯ ನೀತಿ, ಇವರದು ಇದಕ್ಕಿಂತ ಒಂದು ಹೆಜ್ಜೆ ಮುಂದಿನದು- ಕೃತಿಯೇ ಮಾತಿನ ಪ್ರತಿನಿಧಿಯಾಗುತ್ತಿತ್ತು… “ಆಡದೆ ಮಾಡುವವನು ರೂಢಿಯೊಳಗುತ್ತಮನು’ ಎಂದು ಸರ್ವಜ್ಞನ ತ್ರಿಪದಿ ಇದೆ.

 

– ಸ್ವಾಮಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next