ಚಿತ್ರದುರ್ಗ: ಜಿಲ್ಲೆಯ 72 ರೈತ ಸಂಪರ್ಕ ಕೇಂದ್ರಗಳಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತದೆ. ಇದು ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅನಂತ್ ಹೇಳಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳ ಶಿಕ್ಷಣಾಧಿಕಾರಿಗಳು, ಪ್ರೌಢಶಾಲೆ ಮುಖ್ಯಶಿಕ್ಷಕರು, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಅರಣ್ಯ, ಪಶುಪಾಲನಾ ಇಲಾಖೆ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಬುಧವಾರ ಹಮ್ಮಿಕೊಳ್ಳಲಾಗಿದ್ದ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯೂರಿನ ಬಬ್ಬೂರು ಫಾರಂನಲ್ಲಿ ಪೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಿಗೆ ಚಿಣ್ಣರ ನಡಿಗೆ ಕೃಷಿ ಕಡೆಗೆ, ರೈತ ಮಕ್ಕಳಿಗೆ ಕೃಷಿ ದರ್ಶನ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ಪ್ರೌಢಶಾಲೆ ವಿದ್ಯಾರ್ಥಿಗಳಲ್ಲಿ ಮುಂದಿನ ದಿನಗಳಲ್ಲಿ ವ್ಯವಸಾಯದ ಕುರಿತು ವರ್ಷದಲ್ಲಿ ಮೂರು ಕಾರ್ಯಾಗಾರ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಹತ್ತನೆ ತರಗತಿ ಪರೀಕ್ಷೆಗಳು ನಡೆಯುತ್ತವೋ ಅಂತಹ ಕೇಂದ್ರಗಳಲ್ಲಿ ಚಿಣ್ಣರ ನಡಿಗೆ ಕೃಷಿ ಕಡೆಗೆ ಕಾರ್ಯಕ್ರಮ ಆಯೋಜಿಸಲಾಗುವುದು. ಮೂರರಿಂದ ನಾಲ್ವರು ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ಮಕ್ಕಳಿಗೆ ಕೃಷಿಯ ಪರಿಚಯ ಮಾಡಿಕೊಡುವರು ಎಂದು ತಿಳಿಸಿದರು.
ಶೇ. 65ರಷ್ಟು ಮಂದಿ ಕೃಷಿಯನ್ನೆ ನಂಬಿ ಜೀವನ ನಡೆಸುವ ಕೃಷಿ ಪ್ರಧಾನ ದೇಶ ನಮ್ಮದು. ಸರ್ಕಾರಿ ನೌಕರಿಗಾಗಿಯೇ ಎಲ್ಲರೂ ಶಿಕ್ಷಣ ಪಡೆಯುವಂತಾಗಿರುವುದರಿಂದ ಹಳ್ಳಿಗಳಲ್ಲಿ ಕೃಷಿ ಮಾಡುವವರೆ ಇಲ್ಲದಂತಾಗಿ ಕೆಲಸ ಹುಡುಕಿಕೊಂಡು ದೊಡ್ಡ ದೊಡ್ಡ ಪಟ್ಟಣಗಳಿಗೆ ಹೋಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ವಿದೇಶಿಗರು ಇಲ್ಲಿಗೆ ಬಂದು ಕೃಷಿ ಮಾಡಿದರೂ ಆಶ್ಚರ್ಯವೇನಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರಿ ನೌಕರಿ ಭ್ರಮೆಯಿಂದ ಕೃಷಿ ನಶಿಸಿ ಹೋಗುತ್ತಿದೆ. ಮುಂದಿನ ಭವಿಷ್ಯದ ರೈತ ಮಕ್ಕಳಿಗೆ ಕೃಷಿ ಕುರಿತು ಪರಿಚಯಿಸುವ ಕೆಲಸವಾಗಬೇಕು. ಪ್ರಗತಿಪರ ರೈತರು, ಕೃಷಿಯಲ್ಲಿ ಸಾಧನೆ ಮಾಡಿದವರು ಸಂಪನ್ಮೂಲ ವ್ಯಕ್ತಿಗಳಾಗಿ ಮಣ್ಣಿನಿಂದ ಹಿಡಿದು ಆಧುನಿಕ ಕೃಷಿ ಉಪಕರಣಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡುವರು. ಸಿರಿಧಾನ್ಯಗಳನ್ನು ಪರಿಚಯಿಸುವುದಕ್ಕಾಗಿಯೇ ಮಧ್ಯಾಹ್ನ ಮಕ್ಕಳಿಗೆ ಸಿರಿಧಾನ್ಯಗಳಿಂದ ತಯಾರಿಸಿದ ಊಟ ನೀಡಲಾಗುವುದು. ಇದಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸನ್ನದ್ಧರಾಗಬೇಕು ಎಂದರು.
ಜಿಪಂ ಸದಸ್ಯರಾದ ಮಮತಾ, ಪ್ರಕಾಶ್‌ಮೂರ್ತಿ, ವಿಶಾಲಾಕ್ಷ್ಮಿ ನಟರಾಜ್, ಶಶಿಕಲಾ ಸುರೇಶ್‌ಬಾಬು, ವಿಜಯಲಕ್ಷ್ಮೀ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂಥೋಣಿ, ಶಿಕ್ಷಣಾಧಿಕಾರಿ ಪಿ. ರಾಮಯ್ಯ, ವಿಷಯ ಪರಿವೀಕ್ಷಕ ಮಹಾಲಿಂಗಪ್ಪ ಇದ್ದರು.