ಬೆಂಗಳೂರು: ಮುಂಬಯಿ ಮತ್ತು ಮಧ್ಯಪ್ರದೇಶ ತಂಡಗಳು “ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ’ ಟಿ20 ಫೈನಲ್‌ನಲ್ಲಿ ಸೆಣಸಲಿವೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಮುಂಬಯಿ 6 ವಿಕೆಟ್‌ಗಳಿಂದ ಬರೋಡಾವನ್ನು ಮಣಿಸಿತು. ಇನ್ನೊಂದು ಉಪಾಂತ್ಯ ದಲ್ಲಿ ಮಧ್ಯಪ್ರದೇಶ 7 ವಿಕೆಟ್‌ಗಳಿಂದ ದಿಲ್ಲಿಯನ್ನು ಪರಾಭವಗೊಳಿಸಿತು. ಫೈನಲ್ ಹಣಾಹಣಿ ರವಿವಾರ ಸಂಜೆ ಬೆಂಗಳೂರಿನಲ್ಲಿ ನಡೆಯಲಿದೆ.
ಮತ್ತೆ ಅಬ್ಬರಿಸಿದ ರಹಾನೆ
ಮೊದಲು ಬ್ಯಾಟಿಂಗ್ ನಡೆಸಿದ ಬರೋಡಾ 7 ವಿಕೆಟಿಗೆ 158 ರನ್ ಗಳಿಸಿ ದರೆ, ಮುಂಬಯಿ 17.2 ಓವರ್‌ಗಳಲ್ಲಿ 4 ವಿಕೆಟಿಗೆ 164 ರನ್ ಪೇರಿಸಿತು.
ಸಿಡಿಲಬ್ಬರದ ಬ್ಯಾಟಿಂಗ್ ಮುಂದು ವರಿಸಿದ ಅಜಿಂಕ್ಯ ರಹಾನೆ 56 ಎಸೆತಗಳಿಂದ 98 ರನ್ ಬಾರಿಸಿದರು. ಇದು 11 ಬೌಂಡರಿ, 5 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಹಾರ್ದಿಕ್ ಪಾಂಡ್ಯ ಎಸೆತವನ್ನು ಮಿಡ್-ವಿಕೆಟ್ ಸಿಕ್ಸರ್‌ಗೆ ರವಾನಿಸುವ ಮೂಲಕ 29 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ನಾಯಕ ಶ್ರೇಯಸ್ ಅಯ್ಯರ್ ಗಳಿಕೆ 46 ರನ್ (30 ಎಸೆತ, 4 ಬೌಂಡರಿ, 3 ಸಿಕ್ಸರ್). ರಹಾನೆ-ಅಯ್ಯರ್ 9.2 ಓವರ್‌ಗಳಲ್ಲಿ 88 ರನ್ ಜತೆಯಾಟ ನಡೆಸಿದರು.
ಬರೋಡಾ ಸರದಿಯಲ್ಲಿ ಶಿವಾಲಿಕ್ ಶರ್ಮ ಸರ್ವಾಧಿಕ 36, ಶಾಶ್ವತ್ ರಾವತ್ 33, ನಾಯಕ ಕೃಣಾಲ್ ಪಾಂಡ್ಯ 30 ರನ್ ಮಾಡಿದರು.
ಪಾಟಿದಾರ್ ಪರಾಕ್ರಮ
ದ್ವಿತೀಯ ಸೆಮಿಫೈನಲ್‌ನಲ್ಲಿ ದಿಲ್ಲಿ 5 ವಿಕೆಟಿಗೆ 146 ರನ್ನುಗಳ ಸಾಮಾನ್ಯ ಮೊತ್ತ ದಾಖಲಿಸಿತು. ಮಧ್ಯಪ್ರದೇಶ 15.4 ಓವರ್‌ಗಳಲ್ಲಿ 3 ವಿಕೆಟಿಗೆ 152 ರನ್ ಮಾಡಿತು.
ನಾಯಕ ರಜತ್ ಪಾಟಿದಾರ್ ಬಿರುಸಿನ ಅರ್ಧ ಶತಕ ಬಾರಿಸಿ ನಿರಾಯಾಸದ ಗೆಲುವನ್ನು ತಂದಿತ್ತರು. ಪಾಟಿದಾರ್ ಕೊಡುಗೆ 29 ಎಸೆತಗಳಿಂದ ಅಜೇಯ 66 ರನ್ (4 ಬೌಂಡರಿ, 6 ಸಿಕ್ಸರ್). ಹರ್‌ಪ್ರೀತ್ ಸಿಂಗ್ ಭಾಟಿಯಾ 46 ರನ್ ಮಾಡಿ ಅಜೇಯರಾಗಿ ಉಳಿದರು. ಇವರಿಂದ ಮುರಿಯದ 4ನೇ ವಿಕೆಟಿಗೆ 57 ಎಸೆತಗಳಿಂದ 106 ರನ್ ಒಟ್ಟುಗೂಡಿತು.